ಕಳೆದ ವಾರ ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ “ಯಾನ’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಈ ಚಿತ್ರದ ಮೂಲಕ ಹಿರಿಯ ನಟ ಜೈಜಗದೀಶ್ – ವಿಜಯಲಕ್ಷ್ಮೀ ಸಿಂಗ್ ದಂಪತಿಯ ಪುತ್ರಿಯರಾದ ವೈಭವಿ, ವೈನಿಧಿ, ವೈಸಿರಿ ನಾಯಕ ನಟಿಯರಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ಚಿತ್ರ ಬಿಡುಗಡೆಯ ನಂತರ ನಿಧಾನವಾಗಿ ಪ್ರೇಕ್ಷಕರ ಮೆಚ್ಚುಗೆ, ಮನ್ನಣೆ ಪಡೆಯುತ್ತ ಮುಂದೆ ಸಾಗುತ್ತಿದ್ದು, ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಲು ಚಿತ್ರತಂಡ ಪತ್ರಕರ್ತರ ಮುಂದೆ ಬಂದಿತ್ತು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್, “ಆರಂಭದಲ್ಲಿ 60-70 ಕೇಂದ್ರಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಯೋಚನೆಯಿತ್ತು. ಆದ್ರೆ ನಂತರ ಸುಮಾರು 90ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರ ರಿಲೀಸ್ ಆಯ್ತು. ರಿಲೀಸ್ ಆದ ಮೊದಲ ದಿನದಿಂದ ಎರಡನೇ ದಿನಕ್ಕೆ, ಎರಡನೇ ದಿನದಿಂದ ಮೂರನೇ ದಿನಕ್ಕೆ ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಿದೆ. ಯೂಥ್ಸ್ ಬಂದು ಚಿತ್ರವನ್ನು ನೋಡಬಹುದು ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದ್ರೆ ಯೂಥ್ಸ್ ಜೊತೆಗೆ ಹಿರಿಯರು ಕೂಡ ಫ್ಯಾಮಿಲಿ ಸಮೇತರಾಗಿ ಬಂದು ಚಿತ್ರವನ್ನು ನೋಡುತ್ತಿದ್ದಾರೆ. ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರಿಂದ, ಇಡೀ ಚಿತ್ರತಂಡ ಖುಷಿಯಾಗಿದೆ’ ಎಂದರು.
ಇನ್ನು “ಯಾನ’ದ ಮೂಲಕ ಸಿನಿಮಾ ಯಾನ ಶುರು ಮಾಡಿರುವ ಮೂವರು ನಾಯಕಿಯರಾದ ವೈಭವಿ, ವೈನಿಧಿ, ವೈಸಿರಿ, ನಾಯಕರಾದ ಚಕ್ರವರ್ತಿ, ಅಭಿಷೇಕ್ ಕೂಡ ಚಿತ್ರ ಬಿಡುಗಡೆಯ ನಂತರ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡರು. ತಮ್ಮ ಚೊಚ್ಚಲ ಚಿತ್ರಕ್ಕೆ ಅಭೂಪಪೂರ್ವ ಬೆಂಬಲ ನೀಡಿರುವ ಪ್ರೇಕ್ಷಕರಿಗೆ, ಚಿತ್ರದ ಸಹ ಕಲಾವಿದರಿಗೆ, ತಂತ್ರಜ್ಞರಿಗೆ ಕೃತಜ್ಞತೆಗಳನ್ನು ತಿಳಿಸಲು ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡರು. ಕಾರ್ಯಕ್ರಮದಲ್ಲಿ ಹಾಜರಿದ್ದ ಹಿರಿಯ ನಟ ಜೈಜಗದೀಶ್, ಸುಂದರ ರಾಜ್, ಅರವಿಂದ್ ರಾವ್, ವೀಣಾ ಸುಂದರ್, ಸುಂದರ್, ಚಿತ್ರದ ಸಂಕಲನಕಾರ ಬಿ.ಎಸ್ ಕೆಂಪರಾಜು, ಹಿನ್ನೆಲೆ ಸಂಗೀತ ನೀಡಿರುವ ಅನೂಪ್ ಸೀಳಿನ್ ಸೇರಿದಂತೆ ಚಿತ್ರದ ಹಲವು ಕಲಾವಿದರು ಮತ್ತು ತಂತ್ರಜ್ಞರು “ಯಾನ’ನ ಅನುಭವಗಳನ್ನು ತೆರೆದಿಟ್ಟರು.
ಇನ್ನು ಇದೇ ತಿಂಗಳಾಂತ್ಯಕ್ಕೆ “ಯಾನ’ ಚಿತ್ರವನ್ನು ಮಲಯಾಳಂನಲ್ಲೂ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಆಗಸ್ಟ್ ಮೊದಲ ವಾರ ಚಿತ್ರವನ್ನು ಸಾಗರೋತ್ತರ ದೇಶಗಳಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಒಟ್ಟಾರೆ ಕಳೆದ ಒಂದು ವಾರದಿಂದ ನಿಧಾನವಾಗಿ ಶುರುವಾಗಿರುವ “ಯಾನ’ ಚಿತ್ರತಂಡಕ್ಕೆ ಸಂತೋಷವನ್ನು ತಂದುಕೊಟ್ಟಿದ್ದು, ಮುಂದೆಯೂ ಸುಖಕರವಾಗಿ ಸಾಗಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.