Advertisement

State Government ವ್ಯಾಜ್ಯಮುಕ್ತ ಗ್ರಾಮ: ಸರಕಾರದ ವಿನೂತನ ಚಿಂತನೆ

01:50 AM Jul 06, 2024 | Team Udayavani |

ನ್ಯಾಯದಾನ ವ್ಯವಸ್ಥೆಯ ಸರಳೀಕರಣ, ತ್ವರಿತ ನ್ಯಾಯದಾನ, ರಾಜಿ, ಸಂಧಾನಗಳ ಮೂಲಕ ವ್ಯಾಜ್ಯಗಳನ್ನು ಸ್ಥಳೀಯ ಅಂದರೆ ಗ್ರಾಮ ಮಟ್ಟದಲ್ಲಿಯೇ ಬಗೆಹರಿಸುವ ಮೂಲಕ ಗ್ರಾಮಗಳನ್ನು ವ್ಯಾಜ್ಯಮುಕ್ತವಾಗಿಸುವ ವಿನೂತನ ಚಿಂತನೆಗಳೊಂದಿಗೆ ರಾಜ್ಯ ಸರಕಾರ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ತೀರ್ಮಾನಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

Advertisement

ದೇಶದಲ್ಲಿ ಸದ್ಯ ಜಾರಿಯಲ್ಲಿರುವ ಸುದೀರ್ಘ‌ ಪ್ರಕ್ರಿಯೆಯ ನ್ಯಾಯಾಂಗ ವ್ಯವಸ್ಥೆಯ ಬಗೆಗೆ ಜನರಲ್ಲಿ ವ್ಯಾಪಕ ಅಸಮಾಧಾನವಿದೆ. ವರ್ಷಾನುಗಟ್ಟಲೆ ಪ್ರಕರಣಗಳು ವಿವಿಧ ಕೋರ್ಟ್‌ಗಳಲ್ಲಿ ವಿಚಾರಣೆ ಹಂತದಲ್ಲಿಯೇ ಬಾಕಿ ಉಳಿ ಯುತ್ತಿರುವುದರಿಂದ ಪ್ರಕರಣಗಳ ವಿಲೇವಾರಿಯಲ್ಲಿ ಭಾರೀ ವಿಳಂಬವಾಗುತ್ತಿದೆ ಎಂಬ ಆರೋಪ ಸರ್ವೇಸಾಮಾನ್ಯ. ಕೆಲವು ಸಣ್ಣಪುಟ್ಟ ಪ್ರಕರಣಗಳ ಇತ್ಯರ್ಥಕ್ಕೂ ನ್ಯಾಯಾಲಯಗಳು ವರ್ಷಗಟ್ಟಲೆ ತೆಗೆದು ಕೊಳ್ಳುತ್ತಿರುವುದರ ಕುರಿತಂತೆ ಪದೇಪದೆ ದೇಶಾದ್ಯಂತ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಅಗತ್ಯ ಸಂಖ್ಯೆಯ ನ್ಯಾಯಾಲಯಗಳಿಲ್ಲದಿರುವುದು, ಮೂಲಸೌಕರ್ಯ ಕೊರತೆ, ನ್ಯಾಯಾಧೀಶರು ಮತ್ತು ಸಂಬಂಧಿತ ಸಿಬಂದಿ ವರ್ಗದ ಕೊರತೆ, ವರ್ಷಗಳುರುಳಿದಂತೆಯೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿರುವುದು ಸಹಿತ ಹಲವು ಕಾರಣಗಳಿಂ ದಾಗಿ ನ್ಯಾಯದಾನ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ. ಇವುಗಳನ್ನು ನೀಗಿಸಲು ಸರ ಕಾರಗಳು ಕ್ರಮ ಕೈಗೊಳ್ಳುತ್ತಲೇ ಬಂದಿವೆಯಾದರೂ ಇವು ಪರ್ಯಾಪ್ತವಾಗಿಲ್ಲ.

ಈಗ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ರಾಜ್ಯ ಸರಕಾರದ ನಿರ್ಧಾರ ದಿಂದ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳ ಮೇಲಣ ಪ್ರಕರಣಗಳ ಹೊರೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ಸದ್ಯ ಸರಕಾರ ಮೂರ್‍ನಾಲ್ಕು ಹಳ್ಳಿಗಳನ್ನು ಸೇರಿಸಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಗ್ರಾಮ ನ್ಯಾಯಾಲಯಗಳಲ್ಲಿ ಆ ನ್ಯಾಯಾಲಯಗಳ ವ್ಯಾಪ್ತಿಯ ಹಳ್ಳಿಗಳಲ್ಲಿನ ಸಣ್ಣಪುಟ್ಟ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಗುವುದು. ಸ್ಥಳೀಯ ಪ್ರಕರಣಗಳ ವಿಲೇವಾರಿ ಸಂದರ್ಭದಲ್ಲಿ ರಾಜಿ, ಸಂಧಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಪ್ರಕ್ರಿಯೆಯಿಂದ ವಾದಿ-ಪ್ರತಿವಾದಿಗಳನ್ನು ಪರಸ್ಪರ ವಿಶ್ವಾಸಕ್ಕೆ ತೆಗೆದುಕೊಂಡು ಅವರೀರ್ವರಿಗೂ ಸತ್ಯಾಸತ್ಯತೆಯ ಮನವರಿಕೆ ಮಾಡಿ ಸಹಮತದ ನಿರ್ಧಾರದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲು ಸಾಧ್ಯವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಹಳ್ಳಿಗಳಲ್ಲಿ ಬಹುತೇಕವಾಗಿ ಇಂತಹ ವ್ಯಾಜ್ಯಗಳೇ ಅಲ್ಲಿನ ಶಾಂತಿ, ಸೌಹಾರ್ದಕ್ಕೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದೊಡ್ಡುತ್ತಿವೆ. ಹೀಗಾಗಿ ಸ್ಥಳೀಯ ಮಟ್ಟದ ವ್ಯಾಜ್ಯಗಳನ್ನು ಪರಸ್ಪರ ರಾಜಿ, ಸಂಧಾನದ ಮೂಲಕ ಇತ್ಯರ್ಥಪಡಿಸಿದ್ದೇ ಆದಲ್ಲಿ ಈ ಗಂಭೀರ ಕಾನೂನು ಸಮಸ್ಯೆ ನಿವಾರಣೆ ಯಾಗಲಿದೆ. ಸಹಜವಾಗಿಯೇ ಇದು ಪೊಲೀಸರ ಮೇಲಣ ಹೊರೆಯನ್ನೂ ಕಡಿಮೆ ಮಾಡಲಿದೆ. ಇದೇ ವೇಳೆ ರಾಜ್ಯ ಸರಕಾರ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿನ ನ್ಯಾಯಾಲಯಗಳಲ್ಲಿನ ನ್ಯಾಯ ದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನ್ಯಾಯಾಲಯಗಳಲ್ಲಿರುವ ನ್ಯಾಯಾಧೀಶರು ಮತ್ತು ಸಿಬಂದಿ ಕೊರತೆ, ಮೂಲಸೌಕರ್ಯಗಳ ಕೊರತೆಯನ್ನು ನೀಗಿಸಬೇಕು.

ಮೇಲ್ಮನವಿ ಸಲ್ಲಿಸುವ ಅಥವಾ ಗ್ರಾಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಲ್ಲದೆ ತಾಲೂಕು ಅಥವಾ ಜಿಲ್ಲಾ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿರುವುದರಿಂದ ಈ ನ್ಯಾಯಾಲಯಗಳ ಮೇಲಿನ ಹೊರೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎನ್ನಲಾಗದು. ಗ್ರಾಮ ನ್ಯಾಯಾಲಯಗಳ ಸ್ಥಾಪನೆಯ ಜತೆಜತೆಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಹಂತದ ನ್ಯಾಯಾಲಯಗಳ ಕಾಯಕಲ್ಪಕ್ಕೆ ಸರಕಾರ ಪರಿಣಾಮಕಾರಿ ಕಾರ್ಯಯೋಜನೆ ಸಿದ್ಧಪಡಿಸಿ, ಹಂತ ಹಂತವಾಗಿ ಅದನ್ನು ಅನುಷ್ಠಾನಗೊಳಿಸಿದ್ದೇ ಆದಲ್ಲಿ ಜನರಿಗೆ ತ್ವರಿತ ನ್ಯಾಯದಾನ ಒದಗಿಸುವ ಸರಕಾರದ ನೈಜ ಉದ್ದೇಶ, ಆಶಯ ಈಡೇರಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next