ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಲೀಥಿಯಂ ಖನಿಜ ಪತ್ತೆಯಾಗಿರುವ ಬಗ್ಗೆ ಕೇಂದ್ರ ಗಣಿ ಸಚಿವಾಲಯ ಮಾಹಿತಿ ನೀಡಿದೆ. ಜಮ್ಮು-ಕಾಶ್ಮೀರದಲ್ಲಿ 5.9 ಮಿಲಿಯನ್ ಟನ್‌ಗಳಷ್ಟು ಲೀಥಿಯಂ ಖನಿಜ ನಿಕ್ಷೇಪವಿರುವುದು ಪತ್ತೆಯಾಗಿದೆ ಎಂದು ಕೇಂದ್ರ ಗಣಿ ಸಚಿವಾಲಯ ಹೇಳಿದೆ.
ಲೀಥಿಯಂ ಖನಿಜ ಇ.ವಿ ವಾಹನಗಳ ತಯಾರಿಕೆಯಲ್ಲಿ ಅತ್ಯಂತ ಮಹತ್ವದ ಖನಿಜಾಂಶವಾಗಿದ್ದು, ಇದೀಗ ಭಾರತದಲ್ಲೇ ಈ ಖನಿಜ ಪತ್ತೆಯಾಗಿದ್ದು ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕ್ಷೇತ್ರಕ್ಕೆ ಭಾರಿ ಮುನ್ನಡೆಯಾದಂತಿದೆ.
ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಶೋಧದಲ್ಲಿ ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನ ಪ್ರದೇಶದಲ್ಲಿ 5.4 ಮಿಲಿಯನ್ ಟನ್‌ಗಳಷ್ಟು ಲೀಥಿಯಂ ಖನಿಜ ನಿಕ್ಷೇಪವಿರುವುದು ಕಂಡುಬಂದಿದೆ ಎಂದು ಎಂದು ಗಣಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತ ಲೀಥಿಯಂ, ಕೊಬಾಲ್ಟ್, ನಿಕ್ಕಲ್ ಸೇರಿದಂತೆ ಹಲವು ಖನಿಜಗಳನ್ನು ಅರ್ಜೆಂಟಿನಾ, ಆಸ್ಟ್ರೇಲಿಯಾ ಮುಂತಾದ ದೇಶಗಳನ್ನು ಅವಲಂಬಿಸಿದೆ. ತಾಂತ್ರಿಕ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದೀಗ ಭಾರತದಲ್ಲೇ ಇಂತಹಾ ಖನಿಜಗಳು ಪತ್ತೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಕಂಡು ಬರುತ್ತಿರುವ ಬೆನ್ನಲ್ಲೇ ಲೀಥಿಯಂ ಖನಿಜ ಪತ್ತೆಯಾಗಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೊಬೈಲ್ ಫೋನ್, ಸೋಲಾರ್ ಪ್ಯಾನಲ್‌ಗಳಲ್ಲೂ ಲೀಥಿಯಂ ಉಪಯೋವಿದ್ದು ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗುವ ಭರವಸೆ ಮೂಡಿದೆ.
ದೇಶದಲ್ಲಿ ಸುಮಾರು 51 ಖನಿಜ ನಿಕ್ಷೇಪವಿರುವ ಪ್ರದೇಶಗಳು ಪತ್ತೆಯಾಗಿದ್ದು ಅದರಲ್ಲಿ ಸುಮಾರು 5 ಪ್ರದೇಶಗಳಲ್ಲಿ ಚಿನ್ನವೂ ಕಂಡುಬಂದಿದೆ. ಅಲ್ಲದೆ ಪೊಟ್ಯಾಷ್, ಬೇಸ್ ಮೆಟಲ್‌ಗಳು ಸೇರಿದಂತೆ ಸುಮಾರು ಬಗೆಯ ಖನಿಜಗಳು ಪತ್ತೆಯಾಗಿದೆ. ಈ ನಿಕ್ಷೇಪಗಳು ಜಮ್ಮು-ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರ, ರಾಜಸ್ಥಾನ,ಗುಜರಾತ್, ಜಾರ್ಖಂಡ್ ಸೇರಿ 11 ರಾಜ್ಯಗಳಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಗಣಿ ಸಚಿವಾಲಯ ಹೇಳಿದೆ.