ಚಿತ್ರದುರ್ಗ: ಮನುಷ್ಯ ಕೂಡ ಪ್ರಾಣಿಯೇ ಆಗಿದ್ದರೂ ಸಾಹಿತ್ಯ ಮತ್ತು ಕಲೆಗಳು ಅವನನ್ನು ಭಿನ್ನವಾಗಿ ರೂಪಿಸಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ| ಟಿ.ಎಸ್.ನಾಗರಾಜ ಶೆಟ್ಟಿ ಹೇಳಿದರು.
ನಗರದ ಕನ್ನಿಕಾ ಮಹಲ್‌ನಲ್ಲಿ ಜಿಲ್ಲಾ ಆರ್ಯವೈಶ್ಯ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಲೇಖನ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಾಹಿತ್ಯ ಹೃದಯ ಪರಿವರ್ತನೆ ಮಾಡಿ ಜೀವನವನ್ನು ತಿದ್ದಿ ರೂಪಿಸುತ್ತದೆ. ಜೀವನದಿಂದ ಸಾಹಿತ್ಯ ಎನ್ನುವುದು ನಿಜವಾದರೂ ಬದುಕನ್ನು ರೂಪಿಸಲು ಸಾಹಿತ್ಯ ಬೇಕೇ ಬೇಕು ಎಂದರು.
ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಲ್. ಸುರೇಶರಾಜು ಮಾತನಾಡಿ, ಆರಂಭದ ದಿನಗಳಲ್ಲಿ ಅಂಬೆಗಾಲಿಡುತ್ತಿದ್ದ ಚಿತ್ರದುರ್ಗ ಜಿಲ್ಲಾ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಈಗ ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆ ವಿಷಯ ಎಂದರು.
ಬೆಂಗಳೂರಿನ ನಿವೃತ್ತ ಪ್ರಾಂಶುಪಾಲ ಸಿ.ಕೆ. ಲಕ್ಷ್ಮೀನಾರಾಯಣ ಗುಪ್ತ ಮಾತನಾಡಿ, ಯಾವುದೇ ಸಂಸ್ಥೆಯನ್ನು ಆರಂಭಿಸುವುದು ಸುಲಭ. ಆದರೆ ಬೆಳೆಸಿಕೊಂಡು ಹೋಗುವುದು ಕಷ್ಟ. ಚಿತ್ರದುರ್ಗ ಜಿಲ್ಲಾ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ಶ್ರಮದಿಂದ ಇಲ್ಲಿ ಕಲ್ಲುಗಳು ಅರಳಿ ಹೂವಾಗಿವೆ ಎಂದರು. 25 ಸಾವಿರ ರೂ. ದತ್ತಿನಿಧಿ ನೀಡಿದರು.
ಶ್ರೀ ಕನ್ನಿಕಾ ಪರಮೇಶ್ವರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಪಿ.ಎಸ್. ನಾಗರಾಜ ಶೆಟ್ಟಿ ಮಾತನಾಡಿ, ಚಿತ್ರದುರ್ಗದಲ್ಲಿ ನಡೆದ ಐದನೇ ಆರ್ಯ ಸಾಹಿತ್ಯ ಸಮ್ಮೇಳನದ ನೆನಪು ಈಗಲೂ ಹಸಿರಾಗಿದೆ. ಸಾಹಿತ್ಯ ಸಂಬಂಧಿಸಿದ ಚಟುವಟಿಕೆಗಳು ಸದಾ ನಡೆಯುತ್ತಿರಲಿ ಎಂದು ಆಶಿಸಿದರು.
ಸುಜಾತಾ ಪ್ರಾಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸಂಬಂಧಿ ಅನೇಕ ಚಟುವಟಿಕೆಗಳನ್ನು ಮುಂಬರುವ ದಿನಗಳಲ್ಲೂ ಆರ್ಯವೈಶ್ಯ ಸಾಹಿತ್ಯ ಪರಿಷತ್ ವತಿಯಿಂದ
ಆಯೋಜಿಲು ಉದ್ದೇಶಿಸಲಾಗಿದೆ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್. ಕಾಶಿ ವಿಶ್ವನಾಥ ಶೆಟ್ಟಿ ಕಮ್ಮಟವನ್ನು ಉದ್ಘಾಟಿಸಿದರು. ಟಿ.ವಿ ಸುರೇಶ ಗುಪ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷೆ ಸತ್ಯಪ್ರಭಾ ವಸಂತಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಲ್.ಆರ್. ವೆಂಕಟೇಶಕುಮಾರ್ ನಿರೂಪಿಸಿದರು. ರಂಗಲಕ್ಷ್ಮಮ್ಮ ಪ್ರಾರ್ಥಿಸಿದರು. ಸದಾನಂದ ಶೆಟ್ಟಿ ಸ್ವಾಗತಿಸಿದರು. ಸುಶೀಲಾ ರಾಮಚಂದ್ರ ವಂದಿಸಿದರು.