ಗಂಗಾವತಿ: ವಿಶ್ವ ಮಾನವ ಸಂದೇಶ ಸಾರಿದ ಮತ್ತು ಎಲ್ಲಾ ಧರ್ಮಗಳ ಶಾಂತಿ ತೋಟ ಎಂದು ಇಡೀ ದೇಶವೇ ಬಣ್ಣಿಸುವ ಕರುನಾಡಲ್ಲಿ ಇತ್ತೀಚೆಗೆ ಧರ್ಮ ಅಹಿಷ್ಣುತೆಯುಂಟಾಗಿದ್ದು ರಾಜ್ಯದ ಸರ್ವಾಂಗೀಣ ಪ್ರಗತಿಗೆ ಇದು ಮಾರಕ ಎಂದು ಹಿರಿಯ ಸಾಹಿತಿ ಹಾಗೂ ಹಂಪಿ ವಿವಿ ನಾಡೋಜ ಪ್ರಶಸ್ತಿಗೆ ಆಯ್ಕೆಯಾಗಿರುವ ಗೊ.ರು.ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.
ಅವರು ನಗರ ಶರಣ ಸಾಹಿತಿ ಶ್ರೀಶೈಲಾ ಪಟ್ಟಣಶೆಟ್ಟಿ ನಿವಾಸದಲ್ಲಿ ನಾಡೋಜ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಸಂಘ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡ ನಾಡುವ ಸರ್ವಧರ್ಮ ಸಂಸ್ಕೃತಿಗೆ ಹೆಸರಾದ ರಾಜ್ಯವಾಗಿದೆ ಕೆಲವರು ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಸರಿಯಾದ ಮಾರ್ಗವಲ್ಲ. ಜೀವಿಸಬೇಕು. ಜೀವಿಸಲು ಬಿಡಬೇಕು. ಕೂಡಲೇ ಸರಕಾರ ಅನ್ಯ ಧರ್ಮಿಯರ ವ್ಯಾಪಾರ ವಹಿವಾಟು ಮತ್ತು ವೈಯಕ್ತಿಕ ದಾಳಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಾಂತಿ ಯಿಂದ ಮಾತ್ರ ಸರ್ವಾಂಗೀಣ ಪ್ರಗತಿ ಸಾಧ್ಯ. ಕ್ಷುಲ್ಲಕ ವಿಚಾರದಲ್ಲಿ ಧರ್ಮವನ್ನು ನಿಂದಿಸಿ ಸಂಘರ್ಷ ದಿನದಿಂದ ಏನನ್ನು ಸಾಧಿಸಲು ಆಗುವುದಿಲ್ಲ. ರಾಜ್ಯ ಸರಕಾರ ವಿಷಯ ಸಣ್ಣದಿರುವಾಗಲೇ ಇತ್ಯಾರ್ಥಪಡಿಸಬೇಕು. ಧಾರ್ಮಿಕ ಸಹಿಷ್ಣುತೆಗೆ ಕನ್ನಡ ನಾಡು ಶತಮಾನಗಳಿಂದ ಮಾದರಿಯಾಗಿದೆ. ಅನ್ಯ ಧರ್ಮಿಯರ ಜತೆ ಕಾಲು ಕೆರೆದು ಜಗಳವಾಡುವವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಹಿಂದೂ ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು : ಯಡಿಯೂರಪ್ಪ
ಹಂಪಿ ಕನ್ನಡ ವಿವಿಗೆ ಸರಕಾರ ಅನುದಾನ ಕೊರತೆಯಾಗದಂತೆ ಬಜೆಟ್ ನಲ್ಲಿ ಹಣ ಮೀಸಲಿಡಬೇಕು. ಪದೇ ಪದೇ ಸಾಹಿತಿಗಳು ಲೇಖಕರು ಸಂಘ ಸಂಸ್ಥೆಗಳು ಮನವಿ ಮಾಡುವ ಮುಂಚೆ ಪ್ರತಿ ವರ್ಷ ಹೆಚ್ಚಿನ ಹಣಕಾಸಿನ ನೆರವು ನೀಡುವ ಮೂಲಕ ಕನ್ನಡ ಸಾಹಿತ್ಯ, ಕಲೆ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುವಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಕನ್ನಡ ಭಾಷೆ ಸಾರ್ವಭೌಮ ಭಾಷೆಯಾಗಿದೆ. ಸಂಸ್ಕೃತ ಭಾಷೆಯ ವಿವಿಗೆ ಸಾವಿರಾರು ಕೋಟಿ ಅನುದಾನ ಕೊಡುವ ಸರಕಾರ ಹಂಪಿ ಕನ್ನಡ ವಿವಿ ಮತ್ತು ಜಾನಪದ ವಿವಿಗೆ ಹೆಚ್ಚಿನ ಹಣಕಾಸು ಕಲ್ಪಿಸಿ ಎರಡು ಪ್ರತಿಷ್ಠಿತ ವಿವಿಗಳಂತೆ ಬೆಳೆಸಬೇಕು ಎಂದರು
ಹಂಪಿ ಕನ್ನಡ ವಿವಿ ಸ್ಥಾಪನೆಗೆ ಕಲಬುರ್ಗಿ, ಕುಂಬಾರ ಸೇರಿ ಹಲವಾರು ಸಾಹಿತಿಗಳು ರಾಜಕಾರಣಿಗಳ ಜತೆ ಹೋರಾಟ ಮಾಡಿ ಸ್ಥಾಪಿಸಲಾಗಿದೆ. ಅದೇ ವಿವಿಯಿಂದ ಕನ್ನಡದ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪಡೆಯುವುದಕ್ಕೆ ಹೆಮ್ಮೆಯಾಗಿದೆ. ಇನ್ನಷ್ಟು ಕನ್ನಡ ಭಾಷೆಯ ಸಂಶೋಧನೆ ವಿಮರ್ಶೆ ಕಾರ್ಯ ಹೆಚ್ಚಾಗಬೇಕಿದೆ ಎಂದರು.
ಶರಣ ಸಾಹಿತ್ಯ ಪರಿಷತ್‌ನ ಶ್ರೀಶೈಲಾ ಪಟ್ಟಣಶೆಟ್ಟಿ, ಸಾಹಿತಿಗಳಾದ ಡಾ|ಶಿವಕುಮಾರ ಮಾಲೀಪಾಟೀಲ್, ರುದ್ರಮ್ಮ ಹಾಸಿನಾಳ, ಶರಣಬಸಪ್ಪ ಕೋಲ್ಕಾರ್, ನಿಜಲಿಂಗಪ್ಪ ಮೆಣಸಗಿ, ಕೆ.ಬಸವರಾಜ, ಕೆ.ಚನ್ನಬಸಯ್ಯ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಹೇರೂರು, ಎಸ್.ಬಿ.ಗೊಂಡಬಾಳ, ರಮೇಶ ಕುಲಕರ್ಣಿ, ಡಾ|ಮುಮ್ತಾಜ್ ಬೇಗಂ, ಸಿ.ಮಹಾಕ್ಷ್ಮಿ, ಶ್ರೀದೇವಿ, ದಿಲೀಪ್, ಅರಳಿ ನಾಗಭೂಷಣ, ಅರಳಿ ಅಪ್ಪಣ್ಣ ಸೇರಿ ಅನೇಕರಿದ್ದರು.