ಧಾರವಾಡ: ಸಾಹಿತ್ಯ ಕ್ಷೇತ್ರದಲ್ಲಿ ವೈದ್ಯಕೀಯ ಕ್ಷೇತ್ರದ ಕೃತಿಗಳು ಹೆಚ್ಚಾಗಿ ಮೂಡಿ ಬರಬೇಕು. ಇದರಿಂದ ಸಾಹಿತ್ಯ ಕ್ಷೇತ್ರ ವಿಸ್ತಾರಗೊಳ್ಳುತ್ತದೆ ಎಂದು ಕವಿ ನಾಡೋಜ ಡಾ| ಚೆನ್ನವೀರ ಕಣವಿ ಹೇಳಿದರು.
ನಗರದ ವಿಠಲ್ ಮಕ್ಕಳ ಸ್ಪೆಶಾಲಿಟಿ ಆಸ್ಪತ್ರೆ ಸಭಾಂಗಣದಲ್ಲಿ ರವಿವಾರ ಆರ್.ಕೆ. ಫೌಂಡೇಶನ್ ಹಾಗೂ ಮಕ್ಕಳ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಕ್ಕಳ ತಜ್ಞರಿಂದ ರಚಿತಗೊಂಡ ಮಕ್ಕಳ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪಾಲಕರು ಮಗುವಿನ ಆರೋಗ್ಯದ ವಿಚಾರದಲ್ಲಿ ಯಾವ ರೀತಿ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಈ ಕೃತಿಗಳಲ್ಲಿ ತಿಳಿಸಲಾಗಿದೆ. ಆದ್ದರಿಂದ ಪಾಲಕರು ಈ ಕೃತಿಗಳನ್ನು ಓದಿ ತಿಳಿದುಕೊಳ್ಳುವ ಅಗತ್ಯವಿದೆ. ಆರ್.ಕೆ. ಪ್ರತಿಷ್ಠಾನ, ಮಕ್ಕಳ ಅಕಾಡೆಮಿ ಉತ್ತಮ ಕೆಲಸ ಮಾಡುತ್ತಿವೆ ಎಂದರು.
ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಲೋಕಾರ್ಪಣೆಗೊಂಡ ಮೂರು ಪುಸ್ತಕಗಳು ಪಾಲಕರ ಜವಾಬ್ದಾರಿ ಹೆಚ್ಚಿಸುತ್ತವೆ. ಯುವಪೀಳಿಗೆ ಈ ಕೃತಿಗಳನ್ನು ಓದಿದರೆ ಮಕ್ಕಳ ಪಾಲನೆ, ಪೋಷಣೆ ಬಗ್ಗೆ ತಿಳಿದುಕೊಳ್ಳಬಹುದು ಎಂದರು.
ಡಾ| ರಾಜನ್ ದೇಶಪಾಂಡೆ, ಡಾ| ರಮಾ ನಾಯ್ಕ ಅವರ ಯು ಆರ್ ಗ್ರೇಟ್ ಡ್ಯಾಡಿ ಹಾಗೂ ಡಾ| ದೇಶಪಾಂಡೆ ಅವರ “ಮಗು ನೀ ನಗು’ ಮತ್ತು ಡಾ| ವೆಂಕಮ್ಮ ಗಾಂಬಕರ, ಡಾ| ಎಂ.ವೈ. ಸಾವಂತ ಅವರು ಬರೆದ ಶಿಕ್ಷೆ ಎಂಬ ಕೃತಿಗಳು ಬಿಡುಗಡೆಗೊಂಡವು.
ಡಾ| ಮಾಲತಿ ಪಟ್ಟಣಶೆಟ್ಟಿ, ಡಾ|ರಾಜನ್ ದೇಶಪಾಂಡೆ ಮಾತನಾಡಿದರು. ಯೋಗಕ್ಷೇಮ ವೇದಿಕೆ ಸಂಚಾಲಕ ಮನೋಜ ಪಾಟೀಲ, ಡಾ| ಕವಿತಾ ದೇಶಪಾಂಡೆ, ಸಾಹಿತಿ ಶ್ರೀನಿವಾಸ ವಾಡಂಪ್ಪಿ, ಡಾ| ರಮಾ ನಾಯಕ ಇದ್ದರು.