Advertisement

ಕಾಸರಗೋಡಿನ ಸಾಹಿತ್ಯ ಲೋಕ – 212 ;ದಿ|ಶಂಪಾ ದೈತೋಟ, ಪಾಣಾಜೆ

07:25 AM Aug 14, 2017 | |

ಕನ್ನಡ ಸಾಹಿತ್ಯ ಲೋಕಕ್ಕೆ – ಕಲಾರಂಗಕ್ಕೆ ಹಲವು ಅಮೂಲ್ಯ ರತ್ನಗಳನ್ನು ನೀಡಿದುದರಲ್ಲಿ ಮೂಲತಃ ಕುಂಬಳೆ ಸೀಮೆಯ ಕಿಳಿಂಗಾರು ಪ್ರತಿಷ್ಠಿತ ಹವ್ಯಕ – ವೈದಿಕ ಮನೆತನದ ಪಾಣಾಜೆ ವೈದ್ಯ ಪಂಡಿತ ಮನೆತನವೂ ಒಂದಾಗಿದೆ. ಈ ಕುಟುಂಬದವರೆಲ್ಲರೂ ಆಯುರ್ವೇದ, ಮೂಲಿಕಾ ವೈದ್ಯ, ಮನೆ ಮದ್ದುಗಳಲ್ಲಿ ಪರಿಣತರು. ಹಾಗೆೆಯೇ ಕೃಷಿ, ಸಾಹಿತ್ಯ, ಪತ್ರಿಕೋದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿವೆತ್ತವರಾಗಿದ್ದಾರೆ. ಈ ಮನೆತನದ ಶಂಕರನಾರಾಯಣ ಭಟ್‌ (ಶಂಪಾ ದೈತೋಟ) ಸಾಹಿತ್ಯ, ವೈದ್ಯಕೀಯ, ಪತ್ರಿಕೋದ್ಯಮದಲ್ಲಿ ಖ್ಯಾತರಾದವರು.

Advertisement

ಬದುಕು ಬಾಲ್ಯ
ಆಯುರ್ವೇದ ಚಿಕಿತ್ಸೆ ಮತ್ತು ಸಾಹಿತ್ಯ ರಚನೆಯಲ್ಲಿ ಪಂಡಿತರೆಂದು ಪ್ರಖ್ಯಾತಿ ಪಡೆದ ದಿ| ಶಂಕರನಾರಾಯಣ ಭಟ್‌ – ವೆಂಕಟೇಶ್ವರಿ ದಂಪತಿಯರ ಪುತ್ರರಾಗಿ 1932 ಮೇ 13ರಂದು ದಿ|  ಶಂಪಾ ದೈತೋಟ ಜನಿಸಿದರು. ಡಾ| ರಾಮಕೃಷ್ಣ, ನ್ಯಾಯವಾದಿ ಚಂದ್ರಶೇಖರ ದೈತೋಟ, ಪತ್ರಿಕೋದ್ಯಮಿ, ಸಾಹಿತಿ ಈಶ್ವರ ದೈತೋಟ, ಆಯುರ್ವೇದ ಮೂಲಿಕಾತಜ್ಞ ವೆಂಕಟ್ರಾಮ ದೈತೋಟ  ಸಹೋದರರು. ಡಾ| ಸಾವಿತ್ರಿ, ಡಾ| ವೆಂಕಟೇಶ್ವರಿ, ಶಾರದಾ ಸಹೋದರಿಯರು.

ದಿ| ಶಂಪಾ ಅವರು ತಮ್ಮ ಹೈಸ್ಕೂಲ್‌ ತನಕದ ವಿದ್ಯಾಭ್ಯಾಸವನ್ನು ಪೆರ್ಲದ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪಡೆದರು. ಅನಂತರ ಬಿ.ಎ. ಮತ್ತು ಜಿ.ಡಿ.ಸಿ. ಪದವಿಯನ್ನು ಪಡೆದರೂ ಕೃಷಿಕರಾಗಿ, ಸಮಾಜ ಸೇವಕರಾಗಿ, ಸಾಹಿತಿಯಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಬಹುಮುಖ ಸಮಾಜ ಸೇವೆ  
ದಕ್ಷಿಣ ಕನ್ನಡ ಜಿಲ್ಲಾ ಪರಿಸರಾಸಕ್ತರ ಒಕ್ಕೂಟದ ಅಧ್ಯಕ್ಷ ರಾಗಿ, ರಬ್ಬರ್‌ ಉತ್ಪಾದಕರ ಸಂಘದ ಸ್ಥಾಪಕ ನಿರ್ದೇಶಕ ರಾಗಿ, ಕೃಷಿ ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ದಿ| ಶಂಪಾ ದೈತೋಟ ಅವರು ತಂದೆ ಪಂಡಿತ ಶಂಕರನಾರಾಯಣ ಭಟ್‌ ಅವರ ವನಸ್ಪತಿಗಳ ಪರಿಚಯ ಹಾಗೂ ಉಪಯುಕ್ತ ರಹಸ್ಯಗಳನ್ನು ಶೋಧ ಮಾಡಿದ ಅನುಭವಗಳನ್ನು ಮನನ ಮಾಡಿಕೊಂಡು ಉಚಿತ ಕುಟುಂಬದ ಪರಂಪರಾಗ‌ತ ಉಚಿತ ವೈದ್ಯ ಚಿಕಿತ್ಸಾ ಸೇವೆಯನ್ನು ಮುಂದುವರಿಸಿದ್ದರು. ಹೋಮಿಯೋಪತಿ ಮತ್ತು ವಿವಿಧ ರೀತಿಯ ಪ್ರಕೃತಿ ಚಿಕಿತ್ಸಾ ಕ್ರಮದಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದರು. 1982ರಿಂದ 86ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಮಂಗನ ಕಾಯಿಲೆ ಕುರಿತಾಗಿ ಅಧ್ಯಯನ ಮತ್ತು ಚಿಕಿತ್ಸೆಯೊಂದಿಗೆ ಆ ಕುರಿತಾಗಿರುವ ಕೃತಿಗಳನ್ನು ರಚಿಸಿದ್ದಾರೆ.

ಸಾಹಿತ್ಯ ಸೇವೆ 
ದಿ| ಶಂಪಾ ದೈತೋಟ ಅವರು ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ವಿವಿಧ ಗಿಡಮೂಲಿಕೆಗಳ ಮತ್ತು ಸಾಹಿತ್ಯದ ಕುರಿತು ನಾಡಿನಾದ್ಯಂತ ನೂರಾರು ಶಿಬಿರ- ಪ್ರದರ್ಶನಗಳಲ್ಲಿ ಸಂಪ‌ನ್ಮೂಲ ವ್ಯಕ್ತಿಯಾಗಿ ಭಾಗ ವಹಿಸಿದ್ದರು. ಜನಪ್ರಿಯ ಸಾಹಿತ್ಯ ಪ್ರಕಾಶನದ ಪ್ರಕಾಶಕರಾಗಿ, ವಿಚಾರ ವಾಣಿ ವಾರ ಪತ್ರಿಕೆಯ ಸಂಪಾದಕ ಪ್ರಕಾಶಕರಾಗಿ ಸಾಹಿತ್ಯ ಸೇವೆಗೈದಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದು ಪ್ರಕಟವಾಗಿವೆ. ಅಭಾವಗೀತೆ (ಅಣಕವಾಡುಗಳು), ಒಂದಿಷ್ಟು ಕುಟುಕು- ಹವಿಗನ್ನಡ (ಕವನ ಸಂಗ್ರಹ), ಕಾರಂತರು ಮತ್ತು ಪರಿಸರ, ಗೋಡಂಬಿ (ಕೃಷಿ), ತಂಬಾಕಿನ ದುಷ್ಪರಿಣಾಮಗಳು, ತ್ರಿಕಟು (ಚುಟುಕು ಸಂಗ್ರಹ), ದಾಲಿcನ್ನಿ (ಕೃಷಿ), ಪರಿಸರ ಗೀತೆ (ಕವನ ಸಂಗ್ರಹ), ಮಂಗನ ಕಾಯಿಲೆ (ಉಣ್ಣಿಗಳು ಮತ್ತು ಹತೋಟಿ), ಮಂಗನ ಕಾಯಿಲೆ, ರಬ್ಬರ್‌ಕೃಷಿಕರ ಕೈಪಿಡಿ, ಲಾವಂಚ (ಕೃಷಿ)  ಮೊದಲಾದವು ಪ್ರಕಟಿತ ಕೃತಿಗಳಾಗಿವೆ. ಗ್ಯಾಟ್‌ ಒಪ್ಪಂದ ಎಂಬುದು ಅಪ್ರಕಟಿತ ಕೃತಿಯಾಗಿದೆ.

Advertisement

ದಿ| ಶಂಪಾ ದೈತೋಟ ಅವರು ಅಡಕೆ ಪತ್ರಿಕೆ, ಕರ್ಮವೀರ, ರಾಷ್ಟ್ರಮತ, ರಾಷ್ಟ್ರಬಂಧು, ಮುಂಗಾರು, ಯುಗಪುರುಷ, ಸಂಪ್ರಭ, ಹವ್ಯಕ ವಾರ್ತೆ, ದರ್ಪಣ, ಹೊಸಸಂಜೆ, ಮಂಗಳೂರು ಮಿತ್ರ, ಕಾಸರಗೋಡಿನ ನಾಡಪ್ರೇಮಿ, ಗಡಿನಾಡು, ಕಾರವಲ್‌ ಮುಂತಾದ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿದ್ದಾರೆ. ಅನೇಕ ಮಲಯಾಳ ಭಾಷೆಯ ಲೇಖನಗಳನ್ನು ಕನ್ನಡ ಭಾಷೆಗೆ ಅನುವಾದಿಸಿರುತ್ತಾರೆ. ತಮ್ಮ ತೀರ್ಥರೂಪರಾದ ಪಂಡಿತ ಶಂಕರನಾರಾಯಣ ಭಟ್‌ ಅವರು ಸ್ಥಾಪಿಸಿದ ಪಾಣಾಜೆ ಆಯುರ್ವೇದ ಪ್ರಕಾಶನದ ಮೂಲಕ ಅನೇಕ ಅಮೂಲ್ಯ ಕೃತಿಗಳನ್ನು ತಮ್ಮ ಸಹೋದರ-ಸಹೋದರಿಯರೊಂದಿಗೆ ಪ್ರಕಾಶಿಸಿದ್ದಾರೆ.

ಪ್ರಶಸ್ತಿ -ಸಮ್ಮಾನಗಳು  
ಅವರು ದುಡಿದಿರುವ ಕೃಷಿ, ವೈದ್ಯಕೀಯ, ಸಾಹಿತ್ಯ, ಪತ್ರಿಕೋದ್ಯಮ ಸೇವೆಗಳಿಗಾಗಿ ನಾಡಿನ ಅನೇಕ ಸಂಘ ಸಂಸ್ಥೆಗಳು ಅವರನ್ನು ಸಮ್ಮಾನಿಸಿ ಗೌರವಿಸಿವೆ. ಇಂಡೋ ಸೋವಿಯತ್‌ ಕಲ್ಚcರಲ್‌ ಸೊಸೈಟಿ, ಶ್ರೀಕ್ಷೇತ್ರ ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದ ಸುವರ್ಣ ಮಹೋತ್ಸವದಲ್ಲಿ, ಗ್ರಾಮೀಣ ಪತ್ರಿಕಾ ವರದಿಗಾಗಿ ಟಿ.ಆರ್‌. ಪ್ರತಿಷ್ಠಾನದಿಂದ ರಾಜ್ಯ ಪ್ರಶಸ್ತಿ, ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ದಲ್ಲಿ, ಪರಿಸರ ಗೀತೆಗಾಗಿ ಕೇಂದ್ರ ಸರಕಾರದ ವತಿಯಿಂದ, ಕಾಸರಗೋಡು ಕನ್ನಡಿಗರ ಸಮ್ಮೇಳನದಲ್ಲಿ ಬೇವಿಂಜೆ ಕಕ್ಕಿಲ್ಲಾಯ ಪ್ರಶಸ್ತಿ, ಮಂಗಳೂರು ಸಂದೇಶ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಇತ್ಯಾದಿಗಳು ಪ್ರಧಾನ ಗೌರವ ಸಮ್ಮಾನ ಗಳಾಗಿವೆ. ದಿ| ಶಂಪಾ ಅವರ ಕುರಿತಾಗಿ ಕಾಂತಾವರದ ಕನ್ನಡ ಸಂಘವು ನಾಡಿನ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನಾ ಗ್ರಂಥ ಮಾಲೆಯಲ್ಲಿ ಪರಿಚಯ ಲೇಖನವನ್ನು ಪ್ರಕಟಿಸಿವೆ.

ದಕ್ಷಿಣ ಕನ್ನಡ ಜಿಲ್ಲಾ ಉಬರಡ್ಕದ ಕೃಷಿಕ ರಾಮಚಂದ್ರ ಭಟ್‌-ಲಕ್ಷಿ$¾à ದಂಪತಿಯ ಪುತ್ರಿ ಸಾವಿತ್ರಿ ಅವರನ್ನು ವಿವಾಹ ವಾದ  ಶಂಪಾ ಅವರಿಗೆ ಏಕಮಾತ್ರ ಪುತ್ರ ರವಿಶಂಕರ, ವಿದ್ಯಾಲಕ್ಷ್ಮೀ, ಶ್ಯಾಮಲಾ, ಅನ್ನಪೂರ್ಣ ಪುತ್ರಿಯರು.ದಿ| ಶಂಪಾ ದೈತೋಟ ಅವರು 2002ರ ಸೆಪ್ಟಂಬರ್‌13ರಂದು ದೈವಾಧೀನರಾದರು. ಕಾಸರಗೋಡಿನ ಸಾಹಿತ್ಯ ಲೋಕ ಪರಂಪರೆಯಲ್ಲಿ ಚಿರಸ್ಥಾಯಿಯಾಗಿ ಮುಂಚೂಣಿ ಯಲ್ಲಿ ಉಲ್ಲೇಖೀಸಲ್ಪಡುವಂತಹ ವ್ಯಕ್ತಿಗಳಲ್ಲಿ ದಿ| ಶಂಪಾ ದೈತೋಟ ಅವರೂ ಒಬ್ಬರು.

ಲೇಖನ: ಕೇಳು ಮಾಸ್ತರ್‌ ಅಗಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next