Advertisement
ಮೂಲತಃ ಕುಂಬಳೆ ಸೀಮೆಯ ಕಿಳಿಂಗಾರು ಪ್ರತಿಷ್ಠಿತ ಹವ್ಯಕ – ವೈದಿಕ ಮನೆತನದವರು ಕಿಳಿಂಗಾರುನಿಂದ ಪಾಣಾಜೆ ಸಮೀಪದ ದೈತೋಟಕ್ಕೆ ತಮ್ಮ ವಾಸಸ್ಥಳವನ್ನು ಬದಲಾಯಿಸಿಕೊಂಡರು. ಈ ಕುಟುಂಬದವರೆಲ್ಲರೂ ಆಯುರ್ವೇದ, ಮೂಲಿಕಾ ವೈದ್ಯ, ಮನೆ ಮದ್ದುಗಳಲ್ಲಿ ಪರಿಣತರು. ಹಾಗೆೆಯೇ ಕೃಷಿ, ಸಾಹಿತ್ಯ, ಪತ್ರಿಕೋದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿವೆತ್ತವರಾಗಿದ್ದಾರೆ.
Related Articles
Advertisement
ಸಸ್ಯ ಶಾಸ್ತ್ರೀಯ ವಿಶ್ವಕೋಶ ಎಂದೇ ಗುರುತಿಸಲ್ಪಟ್ಟಿದ್ದ ದಿ|ವೆಂಕಟ್ರಾಮರು ಲಕ್ಷಕ್ಕೆ ಅಧಿಕ ಗಿಡಮೂಲಿಕೆಗಳ ಕುರಿತು ಜ್ಞಾನ ಹೊಂದಿದ್ದರು. ತುಳುವಿನಲ್ಲಿ ದೈತೋಟ (ಔಷಧ ಸಸ್ಯಗಳ ತೋಟ) ಎಂದು ಕರೆಯಲ್ಪಟ್ಟ ಅವರ ಮನೆ ಪರಿಸರ ಔಷಧ ಸಸ್ಯಗಳಿಂದ ತುಂಬಿದೆ. 1996ರಲ್ಲಿ ಪುತ್ತೂರಿನಲ್ಲಿ ಜರಗಿದ ಜಾಗತಿಕ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಒಂದು ಸಾವಿರದ ಎಂಟು ವಿವಿಧ ಮೂಲಿಕಾ ಸಸ್ಯಗಳನ್ನು ಪ್ರದರ್ಶನಕ್ಕಿಟ್ಟಿದ್ದರು.
ಸಾಹಿತ್ಯ ಸೇವೆ: ದಿ|ವೆಂಕಟ್ರಾಯರು ಆಯುರ್ವೇದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ತರಬೇತಿ ಶಿಬಿರ, ಗಿಡ ಮೂಲಿಕಾ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ನಾಡಿನಾದ್ಯಂತ ನೂರಾರು ಶಿಬಿರ- ಪ್ರದರ್ಶನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿದ್ದರು.
ಅಡಿಕೆ ಪತ್ರಿಕೆಯಲ್ಲಿ ಮನೆ ಮದ್ದು ಅಂಕಣಗಾರರಾಗಿ ಸಾಹಿತ್ಯಲೋಕಕ್ಕೆ ಪರಿಚಿತರಾಗಿದ್ದರು. ತಮ್ಮ ತೀರ್ಥರೂಪರಾದ ಪಂಡಿತ ಶಂಕರನಾರಾಯಣ ಭಟ್ಟರು ಸ್ಥಾಪಿಸಿದ ಪಾಣಾಜೆ ಆಯುವೇದ ಪ್ರಕಾಶನದ ಮೂಲಕ ಅನೇಕ ಅಮೂಲ್ಯ ಕೃತಿಗಳನ್ನು ತಮ್ಮ ಸಹೋದರ-ಸಹೋದರಿಯರೊಂದಿಗೆ ಪ್ರಕಾಶಿಸಿದ್ದಾರೆ. ದಿ|ವೆಂಕಟ್ರಾಮರ ಆಯುರ್ವೇದ ವೈದ್ಯಕೀಯ ಸೇವೆಗಾಗಿ ನಾಡಿನ ಅನೇಕ ಸಂಘ ಸಂಸ್ಥೆಗಳು ಅವರನ್ನು ಸಮ್ಮಾನಿಸಿ ಗೌರವಿಸಿವೆ. ಉದುಪಿಯ ಶ್ರೀ ಧರ್ಮಸ್ಥಳ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಶೋಧನಾ ವಿಭಾಗವು ಅವರಿಗೆ ಜಾನಪದ ವೈದ್ಯ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
1970ರಲ್ಲಿ ಸಾಗರ ಮುಂಡಿಗೇಸರ ಸೂರ್ಯನಾರಾಯಣ – ನಾಗವೇಣಿ ದಂಪತಿಯರ ಸುಪುತ್ರಿ ಜಯಲಕ್ಷ್ಮೀ ಅವರನ್ನು ದಿ|ವೆಂಕಟ್ರಾಮರು ವಿವಾಹವಾದರು. ಜಯಲಕ್ಷ್ಮೀ ಅವರು ಎಂ.ಎ. ಪದವೀಧರೆ. ಗೃಹ ವೈದ್ಯೆ, ಸ್ತ್ರೀರೋಗ, ಪ್ರಸೂತಿ ತಂತ್ರ, ಪಾರಂಪರಿಕ ಆಹಾರ ಸಲಹೆಗಾರ್ತಿ. ದಿ|ವೆಂಕಟ್ರಾಮರು ರಚಿಸಿದ ಅನ್ನ -ಆರೋಗ್ಯ-ಔಷಧ, ಅಡಿಕೆ ವಲಯದ ಹಸಿ ಮದ್ದುಗಳು ಗ್ರಂಥಗಳಲ್ಲಿ ಜಯಲಕ್ಷ್ಮೀ ಅವರು ಸಹಲೇಖಕಿಯಾಗಿರುತ್ತಾರೆ. ದಿ|ವೆಂಕಟ್ರಾಮರು ಈಗಾಗಲೇ ಈ ಪಂಡಿತ ಮನೆತನದಲ್ಲಿ ಸಂಗ್ರಹಿತ ಮಾಹಿತಿಯನ್ನಾದರಿಸಿಕೊಂಡು ತಮ್ಮ ಕುಟುಂಬದವರೊಂದಿಗೆ ಸಂಗ್ರಹಿಸಿದ ಔಷಧೀಯ ಸಸ್ಯ ಸಂಪತ್ತು ಎಂಬ ಮಹತ್ ಗ್ರಂಥವೊಂದನ್ನು ಪುತ್ತೂರಿನ ವಿವೇಕಾನಂದ ಸಂಶೋಧನಾ ಕೇಂದ್ರವು ಪ್ರಕಾಶಿಸಿದೆ.
ದಿ| ವೆಂಕಟ್ರಾಮ- ಜಯಲಕ್ಷ್ಮೀ ದಂಪತಿಗೆ ಸಂತಾನಭಾಗ್ಯ ಒದಗಿಬಾರದಿದ್ದರೂ ನಾಡಿನ ಸಾವಿರಾರು ಮುದ್ದುಕಂದಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿ ಸಂತಾನ ವಾತ್ಸಲ್ಯ ಪಡೆದ ಪುಣ್ಯಜೀವಿಗಳು. ವೆಂಕಟ್ರಾಮರು 2017 ಜುಲೈ 21 ರಂದು ಮುಂಜಾನೆ ಪುತ್ತೂರಿಗೆ ತೆರಳಲು ಸ್ವರ್ಗದ ಪ್ರಯಾಣಿಕರ ತಂಗುದಾಣದಲ್ಲಿ ಕಾಯುತ್ತಿದ್ದ ಸಂದರ್ಭ ಕುಸಿದು ಬಿದ್ದು ಹೃದಯಾಘಾತದಿಂದ ನಿಧನ ಹೊಂದಿದರು. ಕಾಸರಗೋಡಿನ ಆಯುರ್ವೇದೀಯ ಪಂಡಿತ ಪರಂಪರೆಯಲ್ಲಿ ಚಿರಸ್ಥಾಯಿಯಾಗಿ ದಿ|ವೆಂಕಟ್ರಾಮ ದೈತೋಟ ಅವರ ಬದುಕಿನ ಸಾಧನೆ ಮುಂಚೂಣಿಯಲ್ಲಿ ನಿಲ್ಲುವಂತಾಗಿದೆ.
– ಕೇಳು ಮಾಸ್ತರ್, ಅಗಲ್ಪಾಡಿ