ಮೈಸೂರು: ಇತ್ತೀಚೆಗೆ ಸಾಹಿತ್ಯ ವಿಮರ್ಶೆ ಹಾದಿ ತಪ್ಪಿದ್ದು, ವಿಮರ್ಶಕರು ಒಂದು ಧೋರಣೆ ಸಿದ್ಧಾಂತಕ್ಕೆ ಅಂಟಿಕೊಂಡು, ರಾಜಕೀಯ ಸಿದ್ಧಾಂತದ ಅಡಿಯಲ್ಲಿ ವಿಮರ್ಶೆ ಮಾಡುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ, ಲೇಖಕ ಡಾ.ಡಿ.ಎ. ಶಂಕರ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಮಹಾರಾಣಿ ಮಹಿಳಾ ಕಲಾ ಕಾಲೇಜು ಸಹಯೋಗದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕೋತ್ತರ ಸಭಾಂಗಣದಲ್ಲಿ ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಅಡಿಗರ ಕಾವ್ಯ: ಅನುಸಂಧಾನ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಮರ್ಶಕರು ಇಂದು ತಮ್ಮದೇ ಗುಂಪಿನೊಳಗೆ ವಿಮರ್ಶೆ ಮಾಡುತ್ತಿದ್ದಾರೆ. ಕಾವ್ಯವೇ ಇಲ್ಲದಿದ್ದರೂ ತಮ್ಮದೇ ಭ್ರಮಾ ಲೋಕದಲ್ಲಿ ಮೌಲ್ಯವೊಂದನ್ನು ಸೃಷ್ಟಿಸಿಕೊಂಡು ವಿಮರ್ಶೆ ಮಾಡುತ್ತಿದ್ದಾರೆ. ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ವಿಮರ್ಶೆ ಹೇಗಿರಬೇಕೆಂದರೆ ಅಶಿಕ್ಷಿತನಿಗೂ ಅರ್ಥವಾಗುವಂತಿರಬೇಕು ಎಂದು ಅಭಿಪ್ರಾಯಪಟ್ಟರು.
ನನಗೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ವಿಮರ್ಶೆಯಲ್ಲಿ ವಿಶ್ವಾಸ ಕಡಿಮೆಯಾಗುತ್ತಿದೆ. ಕಾವ್ಯವೇ ಇಲ್ಲದೆ ಒಂದು ಸಿದ್ಧಾಂತಕ್ಕೆ ನೆಲೆಗೊಂಡು, ಅಲ್ಲಿಯೇ ಗಿರಕಿ ಹೊಡೆಯುವ ವಿಮರ್ಶೆ ಆತ್ಮಹತ್ಯೆ ಮಾಡಿಕೊಂಡಂತೆ. ಈಗ ಸಂಸ್ಕೃತಿ ಚಿಂತಕರು ಎಂಬ ಪದ ಬೇರೆ ಮುನ್ನೆಲೆಗೆ ಬಂದಿದೆ. ಸಂಸ್ಕೃತಿ ಎಂದರೆ ಅಲ್ಲಿಗೆ ಏನು ಬೇಕಾದರೂ ಸೇರಿಸಬಹುದು.
ಇನ್ನು ಪ್ರತಿ ಓದುಗನೂ, ಬರೆಯುವವನೂ ಚಿಂತಕನೇ ಎಂಬುದನ್ನು ಸಂಸ್ಕೃತಿ ಚಿಂತಕರು ಎಂದು ಕರೆಯುವವರು ಮತ್ತು ಕರೆಸಿಕೊಳ್ಳುವವರು ಅರ್ಥ ಮಾಡಿಕೊಳ್ಳಬಹುದು ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ್ ಮಾತನಾಡಿ, ಅಕಾಡೆಮಿಯ ಅಧ್ಯಕ್ಷನಾದ ಬಳಿಕ ನಾನೆಷ್ಟು ಸಣ್ಣವನು ಎಂಬುದು ನನಗೆ ಗೊತ್ತಾಗಿದೆ. ದೊಡ್ಡವನಾಗುವ ಪ್ರಯತ್ನ ನಡೆಸುತ್ತೇನೆ ಎಂದರು.
ಅಡಿಗರ ಕಾವ್ಯದ ಹೊಸ ನೋಟ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಬೋರಲಿಂಗಯ್ಯ, ಅಡಿಗರ ಕಾವ್ಯ ವಿಡಂಬನೆ ಕುರಿತು ಹಿರಿಯ ಕವಯಿತ್ರಿ ಡಾ.ಪ್ರತಿಭಾ ನಂದಕುಮಾರ್, ಅಡಿಗರ ಕಾವ್ಯ ಅನುಸಂಧಾನದ ವಿಭಿನ್ನ ನೆಲೆಗಳು ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್, ಅಡಿಗರ ಕಾವ್ಯದಲ್ಲಿ ಸಾಮಾಜಿಕ ಮೌಲ್ಯಗಳು ಎಂಬ ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಕುಲಸಚಿವ ಎನ್.ಕರಿಯಪ್ಪ, ಕಾಲೇಜಿನ ಪ್ರಾಂಶುಪಾಲ ಬಿ.ಟಿ. ವಿಜಯ್, ಅಕಾಡೆಮಿ ಸದಸ್ಯರಾದ ಡಾ.ವೈ.ಸಿ. ಭಾನುಮತಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಜಯಲಕ್ಷ್ಮೀ ಇತರರಿದ್ದರು.