ಬಂಟ್ವಾಳ: ಜನಜೀವನ, ಸಂಸ್ಕೃತಿ ಮೊದಲಾದವು ಸಾಹಿತ್ಯದಲ್ಲಿ ದಾಖಲಾಗುತ್ತವೆ. ಸಾಹಿತ್ಯವೂ ಸಮಾಜದ ಜತೆ ಜತೆಯಲ್ಲಿ ಬೆಳೆದುಕೊಂಡು ಬಂದಿದೆ. ಅಂತೆಯೇ ಸಾಮಾಜಿಕ ಪ್ರಗತಿಯಲ್ಲಿ ಸಾಹಿತ್ಯವು ನಿರಂತರವಾಗಿ ಕೊಡುಗೆ ನೀಡುತ್ತಾ ಬಂದಿದೆ ಎಂದು ಉಪನ್ಯಾಸಕ ರಾಜಾರಾಮ ವರ್ಮ ವಿಟ್ಲ ಹೇಳಿದರು.
ಅವರು ಫೆ. 23ರಂದು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕದಿಂದ ಎಸ್.ವಿ.ಎಸ್. ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾದ ಕುರಿಯ ವಿಠಲ ಶಾಸ್ತ್ರಿ, ರಾಮ ಶಾಸ್ತ್ರಿ ದತ್ತಿ ನಿಧಿ ಕಾರ್ಯಕ್ರಮದಲ್ಲಿ “ಸಾಹಿತ್ಯದಿಂದ ಸಾಮಾಜಿಕ ಪ್ರಗತಿ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಪ್ರಗತಿಪರ ಧೋರಣೆಯ ಮೂಲಕ ಜಾತ್ಯತೀತ ಸಮಾಜ ನಿರ್ಮಾಣದಲ್ಲಿ ವಚನಕಾರರು ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದರು. ದಾಸ ಸಾಹಿತ್ಯ ಧಾರ್ಮಿಕ ಆಚರಣೆಗಳ ದೋಷಗಳನ್ನು ತಿದ್ದುವಲ್ಲಿ ಪ್ರಮುಖಪಾತ್ರ ವಹಿಸಿತ್ತು. ಆಧುನಿಕ ಸಾಹಿತ್ಯವು ವರ್ಗರಹಿತ ಸಾಮಾಜಿಕ ಪ್ರಗತಿಗೆ ಶ್ರಮಿಸಿದೆ ಎಂದವರು ಅಭಿಪ್ರಾಯಪಟ್ಟರು.
ಕ.ಸಾ.ಪ. ಅಧ್ಯಕ್ಷ ಕೆ. ಮೋಹನ್‌ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲ ಹಾಳಾಗಿದೆ ಎಂದು ಹೇಳುವ ಬದಲು ಹಿರಿಯರ ಬದುಕು ಬರಹಗಳನ್ನು ಅಧ್ಯಯನ ಮಾಡಬೇಕು. ಪುಸ್ತಕ ನಮ್ಮ ಉತ್ತಮ ಗೆಳೆಯ. ಸಾಹಿತ್ಯದ ಅಧ್ಯಯನದಿಂದ ಜೀವನ ಸಾರ್ಥಕವಾಗುತ್ತದೆ ಎಂದರು.
ನಿಕಟ ಪೂರ್ವಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮನಾಥ ಭಟ್ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.