ಕಲಬುರಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2020, ಫೆ.5ರಿಂದ ಮೂರು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಹಿತಿಗಳ, ವಿವಿಧ ಸಂಘಟಕರ, ಸಾಹಿತ್ಯಾ ಸಕ್ತರ ಸಮ್ಮೇಳನದ ಪ್ರಥಮ ಪೂರ್ವ ಸಿದ್ಧತಾ ಸಭೆ ನಂತರ ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
33 ವರ್ಷಗಳ ಬಳಿಕ ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾ ಗುತ್ತಿದ್ದು, ಗುಲ್ಬರ್ಗ ವಿವಿ ಆವರಣ ಅಂತಿಮಗೊಳಿಸ ಲಾಗಿದೆ. ವಿವಿ ಕ್ರೀಡಾಂಗಣ ದಲ್ಲಿ ಮುಖ್ಯ ವೇದಿಕೆ ನಿರ್ಮಾಣ ವಾದರೆ, ಉಳಿದೆರಡು ವೇದಿಕೆ ಡಾ| ಅಂಬೇಡ್ಕರ್ ಭವನ ಹಾಗೂ ಮಹಾತ್ಮ ಗಾಂಧಿ ಸಭಾಂಗಣ ದಲ್ಲಿ ಸಮಾನಾಂತರ ಗೋಷ್ಠಿಗಳು ನಡೆಯ ಲಿವೆ. ತಿಂಗಳೊಳಗೆ ಕಸಾಪ ಕಾರ್ಯಕಾರಿಣಿ ಸಭೆ ಕರೆದು ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.
ಕನ್ನಡದ ತೇರು ಎಳೆಯಲು ಬಿಸಿಲು ನಾಡಿನ ಜನತೆ ಉತ್ಸುಕರಾಗಿದ್ದಾರೆ. ಸಮ್ಮೇಳನ ದಲ್ಲಿ ಕಲ್ಯಾಣ ಕರ್ನಾಟಕದ ಸಮಸ್ಯೆಗಳು ಮತ್ತು ಪರಿಹಾರಗಳು, ದಲಿತ ಬಂಡಾಯ ಸಾಹಿತ್ಯ, ನೈಸರ್ಗಿಕ ವಿಕೋಪ ತಡೆಯುವಿಕೆ ಸೇರಿ ಇತರ ವಿಷಯಗಳ ಗೋಷ್ಠಿಗಳಿರಲಿವೆ. ಡಿಸಿಎಂ ಹಾಗೂ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯ ಸ್ವಾಗತ ಸಮಿತಿಯಡಿ ಕಾರ್ಯಕ್ರಮ ನಡೆಯಲಿದೆ.
ಮುಧೋಳದಲ್ಲಿ ಅಖಿಲ ಭಾರತ ಮಟ್ಟದ ಸಮ್ಮೇಳನ ಉಸ್ತುವಾರಿ ವಹಿಸಿದ್ದ ಕಾರಜೋಳ, ಹಿರಿಯ ರಾಜಕಾರಣಿಯಾಗಿ ಅಪಾರ ಅನುಭವ ಹೊಂದಿದ್ದಾರೆ. ಆದ್ದರಿಂದ ಎರಡು ತಿಂಗಳೊಳಗೆ ಸಕಲ ಸಿದ್ಧತೆ ಪೂರ್ಣಗೊಳ್ಳಲಿವೆ. ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿರ್ಧರಿಸಿದ ಎರಡು ತಿಂಗಳೊಳಗೆ ನಡೆಸಲಾಗಿದೆ. ಕಲಬುರಗಿಯಲ್ಲೂ ಮಾದರಿ ಎನ್ನುವಂತೆ ಸಮ್ಮೇಳನ ನಡೆಯಲಿದೆ ಎಂದರು.
ಪರಿಸರ ಹಾಗೂ ಪರೀಕ್ಷೆ ಸೇರಿ ಇತರ ಎಲ್ಲ ಅಂಶಗಳನ್ನು ಅವಲೋಕಿಸಿ ಫೆಬ್ರವರಿ ಮೊದಲ ವಾರದಲ್ಲಿಯೇ ಕನ್ನಡದ ತೇರು ಎಳೆಯಲು ನಿರ್ಧರಿಸಲಾಗಿದೆ. ಸಮ್ಮೇಳನಕ್ಕೆ ಅಂದಾಜು 12 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಸಮ್ಮೇಳನಕ್ಕೆ ಉಪ ಮುಖ್ಯಮಂತ್ರಿಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳೆಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಲಿದ್ದಾರೆ.
-ಡಾ| ಮನು ಬಳಿಗಾರ, ಅಧ್ಯಕ್ಷರು, ಕಸಾಪ