ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ 2018ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆಗಾಗಿ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಡಾ.ಬಿ.ವಿ.ವಿವೇಕ ರೈ, ದೇಶಾಂಶ ಹುಡುಗಿ, ಸಾಯಿಸುತೆ, ಪ್ರೊ.ಎ.ಕೆ.ಹಂಪಣ್ಣ ಭಾಜನರಾಗಿದ್ದಾರೆ.
ಕನ್ನಡ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಸಾಧಕರ ಹೆಸರನ್ನು ಪ್ರಕಟಿಸಿದರು. ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಹಾಗೆಯೇ, ಕನ್ನಡ ಸಾಹಿತ್ಯಕ್ಕೆ ನೀಡಿರುವ ಈವರೆಗಿನ ಗಮನಾರ್ಹ ಸೇವೆ ಪರಿಗಣಿಸಿ 10 ಮಂದಿ ಸಾಹಿತಿಗಳಿಗೆ 2018 ನೇ ಸಾಲಿನ ‘ಸಾಹಿತ್ಯ ಶ್ರೀ’ ಪ್ರಕಟಿಸಲಾಗಿದ್ದು, ಡಾ.ಪುರುಷೋತ್ತಮ ಬಿಳಿಮಲೆ, ಕೆ.ಸಿ.ಶಿವಪ್ಪ, ಡಾ.ಸಿ.ಪಿ.ಸಿದ್ಧಾಶ್ರಮ, ಪ್ರೊ.ಪಾರ್ವತಿ ಜಿ. ಐತಾಳ್, ಜಿ.ಕೃಷ್ಣಪ್ಪ, ಸತೀಶ ಕುಲಕರ್ಣಿ, ಡಾ.ರಂಗರಾಜ ವನದುರ್ಗ, ಪ್ರೊ.ಅಬ್ದುಲ್ ಜಿ.ಬಷೀರ್, ಡಾ.ಗಂಗಾರಾಂ ಚಂಡಾಳ, ಡಾ.ಎಚ್.ಎಲ್.ಪುಷ್ಪ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ಪುರಸ್ಕಾರ ಒಳಗೊಂಡಿದೆ. ಇದೇ ವೇಳೆ 2017ನೇ ಸಾಲಿನ ಪುಸ್ತಕ ಬಹುಮಾನ ಮತ್ತು ದತ್ತಿ ನಿಧಿ ಬಹುಮಾನ ಪಡೆದ ಸಾಹಿತಿಗಳ ಹೆಸರು ಘೋಷಿಸಲಾಯಿತು. ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅರವಿಂದ ಮಾಲಗತ್ತಿ ಹೇಳಿದರು.
2017ನೆ ಸಾಲಿನ ಪುಸ್ತಕ ಬಹುಮಾನ: ಡಾ.ವಿನಯಾ ಒಕ್ಕುಂದ ಅವರ ‘ಅನುದಿನದ ದಂದುಗ’, ಚಂದ್ರಶೇಖರ ತಾಳ್ಯ ಅವರ ‘ಮೌನ ಮಾತಿನ ಸದ್ದು’, ರೇಣುಕಾ ರಮಾನಂದ ಅವರ ‘ಮೀನು ಪೇಟೆಯ ತಿರುವು’ (ಯುವಕವಿಗಳ ಪ್ರಥಮ ಸಂಕಲನ), ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ, ನಾಗರಾಜ ರಾಮಸ್ವಾಮಿ ವಸ್ತಾರೆ ಅವರ ಸಣ್ಣಕಥೆ, ಬಸವರಾಜ ಸಬರದ ಅವರ ನಾಟಕ, ಪ್ರಜ್ಞಾ ಮತ್ತಿಹಳ್ಳಿ ಅವರ ಲಲಿತ ಪ್ರಬಂಧ, ಇಂದಿರಾ ಹೆಗಡೆ ಅವರ ಪ್ರವಾಸ ಸಾಹಿತ್ಯ, ಅಮೃತಾ ರಕ್ಷಿದಿ ಅವರ ಆತ್ಮಕತೆ.
ಡಾ.ಎಚ್.ಟಿ.ಹಳ್ಳಿಕೇರಿ ಹಾಗೂ ಬಿ.ಎಸ್. ಸೋಮಶೇಖರ ಅವರ ವಿಜ್ಞಾನ ಸಾಹಿತ್ಯ, ಶಾರದಾ ವಿ.ಮೂರ್ತಿ ಅವರ ಮಕ್ಕಳ ಸಾಹಿತ್ಯ, ಪ್ರೊ.ಎಚ್.ಟಿ.ಪೋತೆ ಅವರ ಮಾನವಿಕ, ಡಾ.ಜೆ.ಎಂ.ನಾಗಯ್ಯ ಅವರ ಸಂಶೋಧನೆ, ಡಾ.ಆರ್.ಶೇಷಶಾಸ್ತ್ರಿ ಅವರ ಅನುವಾದ-1, ಭಾರತೀಯ ಭಾಷೆಯಿಂದ ಕನ್ನಡಕ್ಕೆ, ಡಾ.ಗೋಪಾಲ ಮಹಾಮುನಿ ಅವರ ಅನುವಾದ-2, ಕನ್ನಡದಿಂದ ಭಾರತೀಯ ಭಾಷೆಗೆ, ಪ್ರೊ.ಪಿ.ವಿ.ನಂಜರಾಜ ಅರಸು ಅವರ ಸಂಕೀರ್ಣ, ಡಾ.ಎಚ್.ಶಶಿಕಲಾ ಅವರ ಸಾಹಿತ್ಯ ವಿಮರ್ಶೆ ಹಾಗೂ ಸಿ.ಮಂಗಳಾ ಅವರ ಲೇಖಕರ ಮೊದಲ ಸ್ವತಂತ್ರ ಕೃತಿ.
ದತ್ತಿನಿಧಿ ಬಹುಮಾನ: ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ ಚೆನ್ನರಾಜು ಎಂ.ಬಸಪ್ಪನದೊಡ್ಡಿ ಅವರ ಕಾವ್ಯ-ಹಸ್ತಪ್ರತಿ, ಚದುರಂಗ ದತ್ತಿನಿಧಿ ಬಹುಮಾನ ಫಕೀರ ಅವರ ಕಾದಂಬರಿ), ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ ವಸುಮತಿ ಉಡುಪ ಅವರ ಲಲಿತ ಪ್ರಬಂಧ, ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ ಚಂದ್ರಶೇಖರ ಮಂಡೆಕೋಲು ಅವರ ಜೀವನ ಚರಿತ್ರೆ, ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ ರಾಘವೇಂದ್ರ ಪಾಟೀಲ ಅವರ ಸಾಹಿತ್ಯ ವಿಮರ್ಶೆ ಕೃತಿ.
ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ ಡಾ.ಸಿ.ಆರ್.ಯರವಿನತೆಲಿಮಠ ಅವರ ‘ಸಾಹಿತ್ಯ ವಿಮರ್ಶೆಯ ಮಾದರಿಗಳು ಭಾಗ 2 ಮತ್ತು 3’ (ಅನುವಾದ-1), ಮಧುರಚೆನ್ನ ದತ್ತಿನಿಧಿ ಬಹುಮಾನ ಎಚ್.ಆರ್.ಸುಜಾತಾ ಅವರ ಲೇಖಕರ ಮೊದಲ ಸ್ವತಂತ್ರ ಕೃತಿ ಹಾಗೂ ಅಮೆರಿಕನ್ನಡ ದತ್ತಿನಿಧಿ ಬಹುಮಾನ ಕೃಷ್ಣಾ ಮನವಳ್ಳಿ ಅವರ ಕನ್ನಡದಿಂದ ಆಂಗ್ಲಕ್ಕೆ ಅನುವಾದ, ಮೂಲ: ಚಂದ್ರಶೇಖರ ಕಂಬಾರ ಕೃತಿ.
ಖಂಡನಾ ನಿರ್ಣಯ: ಅನುದಾನದ ವಿಚಾರವಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಲೋಕೇಶ್ ಅವರು ನೀಡಿರುವ ಹೇಳಿಕೆಯನ್ನು ವಿರೋಧಿಸಿ ಕನ್ನಡ ಸಾಹಿತ್ಯ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅರವಿಂದ ಮಾಲಗತ್ತಿ ಹೇಳಿದರು.
ಈ ಹಿಂದೆ ಲೋಕೇಶ್ ಅವರು ಎಸಿ ಕೋಣೆಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೆ 1 ಕೋಟಿ ನೀಡುತ್ತಾರೆ. ಹಗಲು – ರಾತ್ರಿ ಕೆಲಸ ಮಾಡುವ ನಾಡಕ ಅಕಾಡೆಮಿಗೂ 1 ಕೋಟಿ ರೂ.ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.