Advertisement

ಮಕ್ಕಳ ಮಾತು ಕೇಳಿಸಿಕೊಳ್ಳಿ…

03:50 AM Apr 26, 2017 | |

“ಅಮ್ಮಾ, ನನ್‌ ಜೊತೆ ಆಟ ಆಡೋಕೆ ಯಾರೂ ಬರ್ತಾ ಇಲ್ಲ, ಯಾರಿಗೂ ನಾನಂದ್ರೆ ಇಷ್ಟ ಇಲ್ಲ’. ಶಾಲೆಯಿಂದ ಮನೆಗೆ ಬಂದೊಡನೆ ಮಗು ಇಂತಹ ಮಾತುಗಳನ್ನು ಆಡಿದರೆ, ತಾಯಿಯ ಮನಸ್ಸು ಚುರ್‌ ಎನ್ನದೇ ಇರದು. ಮಕ್ಕಳಿಂದ ಇಂಥ ಮಾತು ಕೇಳಿದಾಗ ತಾಯಿಯ ಮನದಲ್ಲಿ ಒಂದು ರೀತಿಯ ಅಸಹಾಯಕತೆ, ಗೊಂದಲ ಮನಸ್ಸಲ್ಲಿ ಮನೆ ಮಾಡುತ್ತದೆ. ಕೆಲವರು ಮಗುವಿಗೆ ಚಾಕ್ಲೆಟ್‌, ತಿಂಡಿ ತಿನಿಸು ಕೊಟ್ಟು ಸಮಾಧಾನಿಸಲು ಯತ್ನಿಸಬಹುದು. ಇನ್ನು ಕೆಲವರು ಸುಳ್ಳು ಆಶ್ವಾಸನೆಗಳನ್ನು ನೀಡಿ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ, ಇಂತಹ ಪರಿಸ್ಥಿತಿಯಲ್ಲಿ ತಾಯಂದಿರ ಪ್ರತಿಕ್ರಿಯೆ ಹೇಗಿರಬೇಕು ಎಂಬ ಬಗ್ಗೆ ಒಂದಿಷ್ಟು ಸಲಹೆಗಳು ಇಲ್ಲಿವೆ.

Advertisement

1. ಮಕ್ಕಳ ನೋವಿಗೆ ಕಿವಿಯಾಗಿ:
ಮಾನಸಿಕವಾಗಿ ಒತ್ತಡಕ್ಕೊಳಗಾಗಿರುವಂಥ ಸಂದರ್ಭದಲ್ಲಿ ಯಾರೇ ಆದರೂ ಬಯಸುವುದು, ಆಲಿಸುವ ಕಿವಿಗಳನ್ನು. ಮಕ್ಕಳೂ ಅಷ್ಟೆ, ನನ್ನೊಳಗಿನ ನೋವನ್ನು ಹೆತ್ತವರಿಗೆ ಹೇಳಬೇಕು ಎಂದೇ ಮಗು ಹಾತೊರೆಯುತ್ತಿರುತ್ತದೆ. ಅಮ್ಮನಾದ ನೀವು ಅನುಭೂತಿ ತೋರಿಸಿದರೆ, ಶಾಲೆಯಲ್ಲಿ ನಡೆದ ಯಾವ ಘಟನೆ ಮಗುವಿನ ಮನಸ್ಸಿಗೆ ಅಷ್ಟೊಂದು ಘಾಸಿ ಮಾಡಿತು ಎಂಬುದನ್ನು ಅರಿತುಕೊಳ್ಳಬಹುದು. ಹಾಗಾಗಿ, ಮೊದಲು ಪ್ರೀತಿಯಿಂದ ಮಗುವಿನ ನೋವನ್ನು ಆಲಿಸಿ.

2. ಕಾರಣ ಅರಿಯಲು ಯತ್ನಿಸಿ:
ಅವು ಪುಟಾಣಿಗಳು, ದೊಡ್ಡ ದೊಡ್ಡ ವಿಚಾರಗಳೆಲ್ಲ ಅವುಗಳಿಗೆ ತಿಳಿಯುವುದಿಲ್ಲ. ನಿಮ್ಮ ಮಗು ಘಟನೆಯ ಒಂದು ಭಾಗವನ್ನಷ್ಟೇ ಹೇಳಿರಬಹುದು. ಎಲ್ಲರಿಂದಲೂ ತಿರಸ್ಕೃತಗೊಳ್ಳುವಂಥ ತಪ್ಪನ್ನು ನಾನೇನು ಮಾಡಿದೆ ಎಂಬುದನ್ನು ಹೇಳಿರಲಿಕ್ಕಿಲ್ಲ. ಅಂಥ ಸಂದರ್ಭದಲ್ಲಿ, ನೀವು ಆಳಕ್ಕೆ ಹೋಗಿ ವಿಚಾರ ತಿಳಿದುಕೊಳ್ಳಬೇಕಾಗುತ್ತದೆ. ಶಿಕ್ಷಕರಲ್ಲೋ, ಸಹಪಾಠಿಗಳಲ್ಲೋ ಮಾತನಾಡಿಸಿ ನಿಮ್ಮ ಮಗುವಿನ ನಡವಳಿಕೆಗೆ ಕಾರಣವನ್ನು ಅರಿಯಿರಿ.

3. ಅತಿಯಾದ ಪ್ರತಿಕ್ರಿಯೆ ಬೇಡ:
ಮಗುವಿನ ವರ್ತನೆಗೆ ವಿಪರೀತವೆಂಬಂತೆ ಪ್ರತಿಕ್ರಿಯಿಸಲು ಹೋಗಬೇಡಿ. ಹಾಗಂತ ನಿರ್ಲಕ್ಷಿಸಲೂ ಬೇಡಿ. ಮಗು ಬೇರೊಂದು ಮಗುವಿನ ಬಗ್ಗೆ ಆರೋಪ ಹೊರಿಸಿತು ಎಂದಾಕ್ಷಣ ಆ ಮಗುವಿನ ತಂದೆ-ತಾಯಿ ಬಳಿ ಹೋಗಿ ಹಾರಾಡುವುದು, ಜಗಳ ಕಾಯುವುದು ಮಾಡಬೇಡಿ. ನೀವು ತುಂಬಾ ಅಪ್‌ಸೆಟ್‌ ಆಗಿದ್ದೀರಿ ಎಂಬುದು ಗೊತ್ತಾದರೆ, ಮಕ್ಕಳು ಕೂಡ ಸಮಸ್ಯೆಯನ್ನು ಇನ್ನಷ್ಟು ದೊಡ್ಡದಾಗಿ ಹೇಳಿಕೊಳ್ಳುವ ಸಾಧ್ಯತೆಯಿರುತ್ತದೆ.

4. ವರ್ತನೆಯ ಪಾಠ ಹೇಳಿಕೊಡಿ:
ಮಕ್ಕಳು ಶಾಲೆಗೆ ಹೋಗಲು ಶುರು ಮಾಡುವ ಮುನ್ನವೇ ಅವರಿಗೆ ಇತರೆ ಮಕ್ಕಳೂ ಸೇರಿದಂತೆ ಸಾಮಾಜಿಕವಾಗಿ ಬೆರೆಯುವುದು ಹೇಗೆ ಎಂಬುದನ್ನು ಹೇಳಿಕೊಡಿ. ಸ್ವಪರಿಚಯ ಮಾಡಿಕೊಳ್ಳುವುದು, ಗೆಳೆತನ ಮಾಡಿಕೊಳ್ಳುವುದು, ಹಿರಿಯರನ್ನು ಗೌರವಿಸುವುದು, ಥ್ಯಾಂಕ್ಸ್‌, ಸ್ಸಾರಿ ಹೇಳುವುದನ್ನು ಮನೆಯಲ್ಲೇ ಅಭ್ಯಾಸ ಮಾಡಿಸಿ. ಜೊತೆಗೆ, ಇತರರು ಚುಡಾಯಿಸಿದರೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೂ ಮಕ್ಕಳಿಗೆ ಗೊತ್ತಿರಲಿ.

Advertisement

5. ಗೆಳೆಯರ ಬಗ್ಗೆ ಅರಿಯಿರಿ:
ಪ್ರತಿದಿನವೂ ಮಗುವಿನೊಂದಿಗೆ ಮಾತನಾಡಿ. ಆ ದಿನ ಶಾಲೆಯಲ್ಲಿ ಏನೇನು ನಡೆಯಿತು, ನಿನಗೆ ಯಾರೆಂದರೆ ಇಷ್ಟ, ಯಾವುದು ಕಷ್ಟ, ಯಾವುದು ಹೆಚ್ಚು ಖುಷಿ ಕೊಡುತ್ತದೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿ, ಮಗುವಿನ ಮಾನಸಿಕ ಸ್ಥಿತಿಯನ್ನು ಅರಿತುಕೊಳ್ಳುತ್ತಿರಿ. ಮಗುವಿನ ಸಹಪಾಠಿಗಳು, ಸ್ನೇಹಿತರ ಬಗ್ಗೆಯೂ ಅರಿತುಕೊಳ್ಳಿ. ಇದು ಒಂದಲ್ಲ ಒಂದು ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುತ್ತದೆ.

6. ಮನೆಯಲ್ಲಿ ಪಾರ್ಟಿ ಆಯೋಜಿಸಿ:
ಆಗಿಂದ್ದಾಗ್ಗೆ, ಮಗುವಿನ ಸಹಪಾಠಿಗಳನ್ನು ಮನೆಗೆ ಕರೆದು ಪುಟ್ಟದೊಂದು ಮಕ್ಕಳ ಪಾರ್ಟಿ ಆಯೋಜಿಸಿ. ಶಾಲೆಗೆ ಹೊರತಾದ ವಾತಾವರಣದಲ್ಲಿ ಅವರೆಲ್ಲರೂ ಸ್ವಲ್ಪ ಸಮಯ ಕಳೆಯಲಿ. ಆಗ ಅವರು ಪರಸ್ಪರರನ್ನು ಅರ್ಥಮಾಡಿಕೊಂಡು, ಬೆರೆಯುವುದನ್ನು ಕಲಿಯುತ್ತಾರೆ. ನಿಮಗೂ ಉಳಿದ ಮಕ್ಕಳ ಪರಿಚಯ, ಅವರ ಗುಣ ಸ್ವಭಾವದ ಸಹಿತ ಆದಂತಾಗುತ್ತದೆ. 

ಹಲೀಮತ್‌ ಸ ಅದಿಯ

Advertisement

Udayavani is now on Telegram. Click here to join our channel and stay updated with the latest news.

Next