Advertisement

ಕನ್ನಡದ ಜತೆ ಇಂಗ್ಲಿಷ್‌ ಮಾಧ್ಯಮವನ್ನೂಕಲಿಸಿ

11:01 AM Jun 03, 2017 | |

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಲು ಇಂಗ್ಲಿಷ್‌ ಕಲಿಸುತ್ತಿಲ್ಲ ಎಂಬ ಅಂಶವನ್ನು ಪರಿಗಣಿಸಿರುವ ಸರ್ಕಾರ ಈ ವರ್ಷದಿಂದಲೇ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮವನ್ನೂ ಆರಂಭಿಸುವಂತೆ ಆದೇಶ ಹೊರಡಿಸಿದೆ. ಈ ಆದೇಶ ಶಿಕ್ಷಕ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

ಹೌದು, ಸರ್ಕಾರಿ ಆದೇಶ ಶಿಕ್ಷಕರಲ್ಲಿ ಆತಂಕ ಉಂಟು ಮಾಡಿರುವುದು ಆಂಗ್ಲ ಮಾಧ್ಯಮದಲ್ಲಿಯೂ ಕಲಿಸಬೇಕು ಎಂಬುದಕ್ಕಲ್ಲ, ಬದಲಿಗೆ ಸರ್ಕಾರದಿಂದ ಯಾವುದೇ ರೀತಿಯಲ್ಲೂ ಹೆಚ್ಚುವರಿ ಸೌಲಭ್ಯ ಕೇಳದೆ ಸದ್ಯ ಶಾಲೆಯಲಿರುವ ತರಗತಿ ಕೋಣೆ, ಕಟ್ಟಡ ಹಾಗೂ ಶಿಕ್ಷಕರನ್ನೇ ಬಳಸಿಕೊಂಡು ಅಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಿ ಎಂಬ ಸರ್ಕಾರದ ಆದೇಶ. ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳು ಆಂಗ್ಲ ಮಾಧ್ಯಮ ಬಯಸಿದರೆ ಅದಕ್ಕೆ ಅವಕಾಶ ಮಾಡಿಕೊಡ ಬೇಕು ಎಂಬುದು ಈ ಆದೇಶದ ಪ್ರಮುಖ ಅಂಶ.

ಸರ್ಕಾರಿ ಶಾಲಾ ಶಿಕ್ಷಕರಿಗೆ ತರಗತಿಯ ಬೋಧನೆಯ ಜತೆಗೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹತ್ತಾರು ಹೆಚ್ಚುವರಿ ಕೆಲಸ ಈಗಾಗಲೇ ವಹಿಸಲಾಗಿದೆ. ಇದರ ಜತೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುತ್ತೇವೆ. 6 ಮತ್ತು 7ನೇ ತರಗತಿಯಿಂದ ಕನ್ನಡ ಮಾಧ್ಯಮ ಉಳಿಸಿಕೊಂಡು ಆಂಗ್ಲ ಮಾಧ್ಯಮದಲ್ಲೂ ಬೋಧಿಸಲಾಗುವುದು ಎಂದು ಸರ್ಕಾರ ಹೇಳಿದೆಯಾದರೂ ಹೆಚ್ಚುವರಿ ವಿಭಾಗ ತೆರೆಯಲು ಅನುದಾನ ಅಥವಾ ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಂಡಿಲ್ಲ. 

ಹೀಗಾಗಿ, ಇದು ಹಾಲಿ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಯಾವುದೇ ಸೌಲಭ್ಯ ಒದಗಿಸಿದೇ, ಈಗ ಇರುವ ವ್ಯವಸ್ಥೆಯಲ್ಲೇ ಆಂಗ್ಲ ಮಾಧ್ಯಮ ಬೋಧನೆ ಮಾಡಬೇಕು ಎಂದರೆ ಖಂಡಿತವಾಗಿಯೂ ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್‌ ಶಿಕ್ಷಣ ನೀಡಲು ಸಾಧ್ಯವಿಲ್ಲ. ಖಾಸಗಿ ಶಾಲಾ ಮಕ್ಕಳೊಂದಿಗೆ ಸರ್ಕಾರಿ ಶಾಲಾ ಮಕ್ಕಳನ್ನು ಸ್ಪರ್ಧೆಗೆ ಸಜ್ಜುಗೊಳಿಸುವುದೂ ಕಷ್ಟವಾಗಲಿದೆ. ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟ ಇನ್ನಷ್ಟು ಕುಸಿಯಲಿದೆ ಎಂಬುದು ತಜ್ಞರ ಅಭಿಪ್ರಾಯ.

ಆಂಗ್ಲ ಮಾಧ್ಯಮ ವಿಭಾಗಕ್ಕೆ ಅನುಮತಿ: ಈ ಮಧ್ಯೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಬೆಂಗಳೂರು ಮತ್ತು ಮೈಸೂರು ವಿಭಾಗದ ಉಪ ನಿರ್ದೇಶಕರ ಶಿಫಾರಸ್ಸಿನ ಆಧಾರದಲ್ಲಿ 2017-18ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಯ ತಲಾ 9, ಮಧುಗಿರಿಯ 8, ಶಿವಮೊಗ್ಗದ 6, ರಾಮನಗರದ 4, ತುಮಕೂರಿನ 3, ಮೈಸೂರಿನ 2 ಹಾಗೂ ಮಡಿಕೇರಿ ಮತ್ತು ದಕ್ಷಿಣ ಕನ್ನಡದ ತಲಾ ಒಂದು ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮದ ಹೆಚ್ಚುವರಿ ವಿಭಾಗ ತೆರೆಯಲು ಷರತ್ತು ಬದ್ಧ ಅನುಮತಿ ನೀಡಿದೆ.

Advertisement

ಷರತ್ತುಗಳು 
ಶಾಲೆಯಲ್ಲಿ ಈಗಾಗಲೇ ಇರುವ ಮಾಧ್ಯಮದೊಂದಿಗೆ 6 ಮತ್ತು 7ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ತೆರೆದು ಇರುವ ಶಿಕ್ಷಕರಿಂದಲೇ ಆಂಗ್ಲ ಮಾಧ್ಯಮದಲ್ಲಿಬೋಧಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗದಂತೆ ಎಚ್ಚರ ವಹಿಸಬೇಕು.

ಶಾಲೆಯಲ್ಲಿರುವ ತರಗತಿ ಕೊಠಡಿ, ಕಟ್ಟಡ ಹಾಗೂ ಮೂಲಭೂತ ಸೌಕರ್ಯದಲ್ಲೇ ಆಂಗ್ಲ ಮಾಧ್ಯಮ ಹೆಚ್ಚುವರಿ ವಿಭಾಗ ನಡೆಸಬೇಕು.

ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಂಗ್ಲ ಮಾಧ್ಯಮ ಪಠ್ಯಪುಸ್ತಕದ ಬೇಡಿಕೆ ಪಟ್ಟಿಯನ್ನು ನಿಗದಿತ ದಿನಾಂಕದೊಳಗೆ ಪಠ್ಯಪುಸ್ತಕ ಸೊಸೈಟಿಗೆ ಸಲ್ಲಿಸಬೇಕು.ಹಾಗೆಯೇ ಆಂಗ್ಲ ಮಾಧ್ಯಮ ತರಗತಿ ನಡೆಸಲು ಅನುಕೂಲವಾಗುವಂತೆ ಆಯಾ ಶಾಲೆಯಿಂದ ಕನಿಷ್ಠ ಇಬ್ಬರು ಶಿಕ್ಷಕರನ್ನು ಬೆಂಗಳೂರಿನಲ್ಲಿರುವ ದಕ್ಷಿಣ ಭಾರತ ಪ್ರಾದೇಶಿಕ ಇಂಗ್ಲಿಷ್‌ ತರಬೇತಿ ಸಂಸ್ಥೆ(ಆರ್‌ಐಇ)ಯಲ್ಲಿ ತರಬೇತಿ ಪಡೆಯಲು ನಿಯೋಜಿಸಬೇಕು.

ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ವಿಷಯವಾರು ಶಿಕ್ಷಕರ ನೇಮಕಾತಿ ಮಾಡಬೇಕು. ಆಂಗ್ಲ ಮಾಧ್ಯಮ ಹೆಚ್ಚುವರಿ ವಿಭಾಗಕ್ಕೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸಬೇಕು. ಈಗ ಇರುವ ಶಿಕ್ಷಕರಿಂದಲೇ ಆಂಗ್ಲ ಮಾಧ್ಯಮದ ಬೋಧನೆ ಸರಿಯಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಿದ್ದೇವೆ.
– ಬಸವರಾಜ ಗುರಿಕಾರ್‌, ಅಧ್ಯಕ್ಷ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next