Advertisement

ಸಾಧನೆ ವರದಿ ನೀಡಿ ಮತ ಕೇಳಲಿ: ಡಿಕೆಸುಗೆ ಸವಾಲು

09:48 PM Apr 01, 2019 | Team Udayavani |

ರಾಮನಗರ: ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಪೋರ್ಟ್‌ ಕಾರ್ಡ್‌ ಇಟ್ಟು ಮತ ಕೇಳ್ತೀವಿ. ಸಂಸದರಾಗಿ ಡಿ.ಕೆ.ಸುರೇಶ್‌ ಅವರು ಈ ಕ್ಷೇತ್ರದಲ್ಲಿ ತಮ್ಮ ಸಾಧನೆಯ ರಿಪೋರ್ಟ್‌ ಕಾರ್ಡ್‌ ಕೊಡಲಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಸವಾಲು ಹಾಕಿದರು.

Advertisement

ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮತಯಾಚನೆ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕು ವರ್ಷದಲ್ಲಿ ಕ್ಷೇತ್ರ ಅಭಿವೃದ್ಧಿಯಾಗದಿದ್ದರೂ ಸಹೋದರರು ವೈಯಕ್ತಿಕವಾಗಿ ಅಭಿವೃದ್ಧಿಯಾಗಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ.ಸಹೋದರರನ್ನು ಕುಟುಕಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಡಿ.ಕೆ.ಸುರೇಶ್‌ ಅವರು ಕೇಂದ್ರದಿಂದ ವಿಶೇಷ ಅನುದಾನ ತಂದಿದ್ದೇಷ್ಟು, ಸೆಂಟ್ರಲ್‌ ರೋಡ್‌ ಫ‌ಂಡ್‌ನಿಂದ ಎಷ್ಟು ಹಣ ತಂದು ಯಾವ್ಯಾವ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಲಿ ಎಂದರು.

ಡಿ.ಕೆ.ಸಹೋದರರ ಉಡಾಫೆ ಮಾತುಗಳ ಬಗ್ಗೆ ಈ ಭಾಗದ ಮತದಾರರಿಗೆ ತಿಳುವಳಿಕೆ ಇದೆ. ಅವರ ದರ್ಪ, ದೌರ್ಜನ್ಯಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಿಜೆಪಿ ತಕ್ಕೆಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಂಟು ಕುದುರೆ ಹೇಳಿಕೆಗೆ ತಿರುಗೇಟು: ಡಿ.ಕೆ.ಸುರೇಶ್‌ ಅವರು ತಮ್ಮನ್ನು ಕುಂಟು ಕುದುರೆ ಎಂದು ಟೀಕಿಸಿದ್ದಾರೆ. ತಮಗೆ ಚುನಾವಣೆಗಳು ಹೊಸತಲ್ಲ. ಈ ಕ್ಷೇತ್ರವೂ ಹೊಸತಲ್ಲ. ಇಲ್ಲಿಯವರೆಗೆ ತಾವು 7 ಲೋಕಸಭಾ ಚುನಾವಣೆಗಳನ್ನು ನೋಡಿರುವುದಾಗಿ, ಪ್ರತಿಬಾರಿಯೂ ಒಂದೊಂದು ಕ್ಷೇತ್ರದ ಉಸ್ತುವಾರಿವಹಿಸಿದ್ದಾಗಿ, 8ನೇ ಬಾರಿಗೆ ತಾವೇ ಅಭ್ಯರ್ಥಿಯಾಗಿರುವುದಾಗಿ ತಮ್ಮ ರಾಜಕೀಯ ಹೆಜ್ಜೆಗಳ ಬಗ್ಗೆ ವಿವರಿಸಿ, ಡಿ.ಕೆ.ಸುರೇಶ್‌ ಅವರಿಗೆ ತಿರುಗೇಟು ಕೊಟ್ಟರು.

Advertisement

1999ರಲ್ಲೇ ವಿಧಾನಸಭೆಗೆ ಸ್ಪರ್ಧಿಸಿ 54 ಸಾವಿರ ಮತಗಳನ್ನು ಪಡೆದಿದ್ದೇವೆ. ತಮ್ಮ ಬಗ್ಗೆ ಟೀಕೆ ಮಾಡಲು ಅಂಕಿ ಅಂಶಗಳನ್ನು ಇಟ್ಟುಕೊಳ್ಳಬೇಕು. ತಮ್ಮ ತಂದೆಯವರ ಹೆಸರು ಸಹ ಕೆಂಪೇಗೌಡ ಎಂದಾಗಿತ್ತು. ತಮ್ಮ ಹೆಸರಿಗೆ ಇನಿಷಿಯಲ್‌ ಸಹ ಡಿ.ಕೆ. ಅಂತಲೇ ಇತ್ತು. ಪ್ರೌಢಶಾಲೆಯಲ್ಲಿ ಅದು ಬಿಟ್ಟು ಹೋಯಿತು ಎಂದು ಪರೋಕ್ಷವಾಗಿ ಡಿ.ಕೆ.ಸಹೋದರರಿಗೆ ಎಚ್ಚರಿಸಿದರು.

ಡಿ.ಕೆ.ಸುರೇಶ್‌ ವಿರೋಧಿ ಅಲೆ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಇಲ್ಲಿಯವರೆಗೆ ತಾವು 7 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿರುವುದಾಗಿ, ಕಾರ್ಯಕರ್ತರ ಸಭೆ ನಡೆಸಿದ್ದು, ಮತಯಾಚನೆಯನ್ನು ಮಾಡಿರುವುದಾಗಿ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಡಿ.ಕೆ.ಸುರೇಶ್‌ ಅವರ ವಿರೋಧಿ ಅಲೆ ಇದೆ.

ತಮ್ಮ ರಾಜಕೀಯ ಜೀವನದಲ್ಲಿ 7 ಲೋಕಸಭಾ ಚುನಾವಣೆಗಳನ್ನು ಕಂಡಿರುವುದಾಗಿ, ಈ ಬಾರಿ ಮತದಾರರು ಬಿಜೆಪಿಗೆ ತೋರಿಸುತ್ತಿರುವ ಉತ್ಸಾಹ ಎಂದೂ ಕಂಡಿರಲಿಲ್ಲ ಎಂದರು. ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌ ಮತ್ತಿತರರು ಹಾಜರಿದ್ದರು. ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರಿಗೆ ಬಿಜೆಪಿ ಕರಪತ್ರ ವಿತರಿಸಿ, ಮತ ನೀಡುವಂತೆ ಅವರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next