Advertisement

ಸಚಿವರ ಮುಂದಿದೆ ಸಮಸ್ಯೆಗಳ ಪಟ್ಟಿ

04:02 PM Oct 21, 2019 | Suhan S |

ಕೊಪ್ಪಳ: ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಮೊದಲ ಬಾರಿಗೆ ಜಿಲ್ಲಾ ಉಸ್ತರುವಾರಿ ಸಚಿವ ಡಿಸಿಎಂ ಲಕ್ಷ್ಮಣ್‌ ಸವದಿ ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅವರು ಅ. 21ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರ ಮುಂದೆ ಸಾಲು ಸಾಲು ಸಮಸ್ಯೆಗಳ ಪಟ್ಟಿ ಸಿದ್ಧವಾಗಿದೆ. ಅವುಗಳ ಬಗ್ಗೆ ಸಚಿವರು ಗಮನ ನೀಡಿ, ಇತ್ಯರ್ಥ ಮಾಡಬೇಕಿದೆ. ಜಿಲ್ಲೆಯು ಮೊದಲೇ ಬರಪೀಡಿತ ಎಂದು ಹಣೆಪಟ್ಟಿ ಹೊತ್ತುಕೊಂಡಿದೆ. ಕಳೆದ 18 ವರ್ಷದಲ್ಲಿ 12 ವರ್ಷ ಬರ ಕಂಡಿರುವ ಜಿಲ್ಲೆಯ ಜನತೆ ಕೆಲಸ ಅರಸಿ ಗುಳೆ ಹೋಗುವ ಸ್ಥಿತಿ ಬಂದೊಂದಿಗಿದೆ.

Advertisement

ಕುಡಿಯುವ ನೀರಿನ ಯೋಜನೆ :  ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಈ ಹಿಂದೆ ಹಲವು ಪ್ರಯತ್ನ ನಡೆದಿವೆಯಾದರೂ ಸಮರ್ಪಕ ಜಾರಿಯಾಗುತ್ತಿಲ್ಲ. ನಾರಾಯಣಪುರ ಜಲಾಶಯದಿಂದ ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಎಲ್ಲ ಹಳ್ಳಿಗಳಿಗೆ ನೀರು ಪೂರೈಕೆ ಉದ್ದೇಶದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯು ಈ ಹಿಂದಿನ ಸರ್ಕಾರದ ವೇಳೆ ಜಾರಿಯಾಗಿದೆ. ಇದು 700 ಕೋಟಿ ರೂ. ವೆಚ್ಚದ ಬೃಹತ್‌ ಯೋಜನೆಯಾಗಿದೆ. ಆದರೆ ಹುನಗುಂದ ಭಾಗದಲ್ಲಿ ಯೋಜನೆಗೆ ನೂರೆಂಟು ವಿಘ್ನ ಎದುರಾಗಿದ್ದು, ಕಾಮಗಾರಿ ಸ್ಥಗಿತವಾಗಿದೆ. ಈ ಯೋಜನೆ ಪೂರ್ಣಗೊಂಡು ಜಾರಿಯಾದರೆ ಎರಡು ತಾಲೂಕಿನ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.

ಇನ್ನೂ ಕೊಪ್ಪಳ ತಾಲೂಕಿನ ಮುಂಡರಗಿ 84 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 2011ರಲ್ಲೇ ಘೋಷಣೆಯಾಗಿದೆ. 2013ರಲ್ಲಿ] ಯೋಜನೆಗೆ ಚಾಲನೆ ಸಿಕ್ಕಿದೆ. ಆದರೆ ಡಿಸೈನ್‌ ವಿಫಲವಾಗಿದ್ದರಿಂದ ಕಾಮಗಾರಿ ಏಳು ವರ್ಷದಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ 60 ಕೋಟಿ ರೂ. ಗುತ್ತಿಗೆದಾರನಿಗೆ ಪಾವತಿ ಮಾಡಲಾಗಿದೆ. ಇದರಿಂದ 100 ಹಳ್ಳಿಗಳಿಗೆ ನೀರು ಪೂರೈಕೆಯಾಗಲಿದೆ. ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಈ ಬಗ್ಗೆ ಗಮನ ನೀಡಿ ಅಗತ್ಯ ಅನುದಾನ ಪೂರೈಸಬೇಕಿದೆ. ಇದಲ್ಲದೇ, ಕಾರಟಗಿ, ಕನಕಗಿರಿ ತಾಲೂಕಿನಲ್ಲಿ ಕೆಲವು ಕುಡಿಯುವನೀರಿನ ಯೋಜನೆಗೆ ಚಾಲನೆ ದೊರೆಯಬೇಕಿದೆ.

ನೆರೆ, ಬರ ಪರಿಹಾರವೇ ಬಂದಿಲ್ಲ:  ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಬರದ ಪರಿಸ್ಥಿತಿಯಿದ್ದ ವೇಳೆ ಕೊಪ್ಪಳ ಹಾಗೂ ಕುಷ್ಟಗಿ ತಾಲೂಕಿಗೆ ಬರ ಪರಿಹಾರವೇ ಬಂದಿಲ್ಲ. ಗಂಗಾವತಿ ಹಾಗೂ ಯಲಬುರ್ಗಾ ತಾಲೂಕಿಗೆ ಪರಿಹಾರ ಬಿಡುಗಡೆಯಾಗಿದೆ. ತುಂಗಭದ್ರಾ ನದಿ ಪಾತ್ರದಡಿಯ ಗಂಗಾವತಿ ತಾಲೂಕಿನ ಜನತೆಗೆ ಬರದ ತೀವ್ರತೆ ಎನ್ನುವಕಾರಣ ನೀಡಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನೂ ಇತ್ತೀಚೆಗೆ ತುಂಗಭದ್ರಾ ಡ್ಯಾಂ ಗೇಟ್‌ ಮುರಿದು ಮುನಿರಾಬಾದ್‌ನಲ್ಲಿ ನೂರಕ್ಕೂ ಹೆಚ್ಚು

ಮನೆಗಳು ಜಲಾವೃತವಾಗಿ ಸಂಕಷ್ಟ ಎದುರಿಸಿದ್ದಾರೆ. ಅವರಿಗೆ ತಲಾ 10 ಸಾವಿರ ರೂ. ಬಿಟ್ಟರೆ ಮತ್ತಾವ ಪರಿಹಾರವೂ ಬಿಡುಗಡೆಯಾಗಿಲ್ಲ.

Advertisement

17 ಸಾವಿರ ರೈತರಿಗಿಲ್ಲ ಬೆಳೆ ವಿಮೆ :  ಇನ್ನೂ ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಬರದ ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಕೆಲವು ರೈತರಿಗೆ ಪರಿಹಾರ ಬಿಡುಗಡೆ ಮಾಡಿದ್ದರೆ ಜಿಲ್ಲೆಯ 17 ಸಾವಿರ ರೈತರ ಖಾತೆ ಸೇರಿದಂತೆ ಇತರೆ ದಾಖಲೆಗಳು ಸರಿಯಿಲ್ಲ ಎಂಬ ಕಾರಣ ನೀಡಿ ವಿಮೆ ಮೊತ್ತವನ್ನೇ ಪಾವತಿ ಮಾಡಿಲ್ಲ. ನಿಜಕ್ಕೂ ವಿಮೆಯ ಮೇಲೆ ನಂಬಿಕೆಯನ್ನಿಟ್ಟಿದ್ದ ರೈತ ಸಮೂಹಕ್ಕೆ ತುಂಬ ನಿರಾಸೆಯಾಗುತ್ತಿದೆ. ಇದನ್ನೊಮ್ಮೆ ಸಚಿವ ಲಕ್ಷ್ಮಣ ಸವದಿ ಅವರು ಗಮನಿಸಬೇಕಿದೆ.

ಸೂಪರ್‌ ಸ್ಪೇಷಾಲಿಸಿ ಆಸ್ಪತ್ರೆ ಬೇಕು:  ಜಿಲ್ಲೆಯ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜನತೆಗೆ ತಕ್ಕಂತೆ ಆರೋಗ್ಯ ಕ್ಷೇತ್ರದಲ್ಲೂ ಸುಧಾರಣೆ ಕಾಣಬೇಕಿದೆ. ಸ್ಥಿತಿವಂತ ಜನತೆ ಉತ್ಕೃಷ್ಟ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರೆ ಬಡ, ಮಧ್ಯಮ ವರ್ಗದ

ಜನತೆ ಜಿಲ್ಲಾ ಆಸ್ಪತ್ರೆಗಳಗೆ ತೆರಳುತ್ತಿದ್ದಾರೆ. ಆದರೆ ನಿತ್ಯವೂ ಜಿಲ್ಲಾ ಆಸ್ಪತ್ರೆ ರೋಗಿಗಳಿಂದ ಜಿನುಗುಡುತ್ತಿದೆ. 400 ಹಾಸಿಗೆಯುಳ್ಳ ಆಸ್ಪತ್ರೆ ಯಾವುದಕ್ಕೂ ಸಾಲುತ್ತಿಲ್ಲ. ಕಿಮ್ಸ್‌ನಿಂದಲೂ ಈಗಾಗಲೇ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಮಂಜೂರಾತಿಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅದು ಮಂಜೂರಾಗಬೇಕಿದೆ. ಇನ್ನೂ ಜಿಲ್ಲೆಯಲ್ಲಿನ ತಾಲೂಕು, ಹೋಬಳಿ ಕೇಂದ್ರದಲ್ಲಿನ ಆಸ್ಪತ್ರೆಗಳ ಹುದ್ದೆ ಭರ್ತಿ ಮಾಡಬೇಕಿದೆ.

ಉಡಾನ್‌ ಯೋಜನೆಗೆ ಬೇಕಿದೆ ಭೂಮಿ :  ಕೇಂದ್ರ ಸರ್ಕಾರ ಮೊದಲ ಅವಧಿಯಲ್ಲೇ ಜಿಲ್ಲೆಗೆ ಉಡಾನ್‌ ಯೋಜನೆ ಘೋಷಣೆ ಮಾಡಿದೆ. ಆದರೆ ಎಂಎಸ್‌ಪಿಎಲ್‌ ಕಂಪನಿ ಸರ್ಕಾರದ ಒಪ್ಪಂದಕ್ಕೆ ಮನಸ್ಸು ಮಾಡುತ್ತಿಲ್ಲ. ಇದರಿಂದ ಹಿಂದುಳಿದ ಜಿಲ್ಲೆಯ ಉಡಾನ್‌ ಯೋಜನೆ ನನೆಗುದಿಗೆ ಬಿದ್ದಿದೆ. ಈ ಯೋಜನೆ ಜಾರಿಯಾದರೆ ಇಲ್ಲಿಂದ ನೇರವಾಗಿ ಅನ್ಯ ಜಿಲ್ಲೆ, ರಾಜ್ಯಗಳಿಗೆ ತೆರಳಲು ನೆರವಾಗಲಿದೆ.ಇದರ ಬಗ್ಗೆ ಕಾಳಜಿ ವಹಿಸಿ ಯೋಜನೆ ಜಾರಿಗೆ ಕಂಪನಿ ಜೊತೆಗೆ ಒಡಂಬಡಿಕೆ ಮಾಡುವ ಅಗತ್ಯವಿದೆ.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ಇಲ್ಲ ಜಿಲ್ಲೆಯಲ್ಲಿ ಹಲವು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಆದರೆ ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎನ್ನುವುದು ದೂರದ ಮಾತು. ಡಾ| ಸರೋಜಿನಿ ಮಹಿಷಿ ವರದಿ ಪೂರ್ಣ ಜಾರಿಯಾಗಿಲ್ಲ. ಅನ್ಯ ರಾಜ್ಯಗಳ ಜನತೆ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರು ಎಂದರೆ ಕಾರ್ಖಾನೆಗಳ ಸೆಕ್ಯೂರಿಟಿ ಗಾರ್ಡ್‌ಗಳೂ

ಒಳಗೆ ಬಿಟ್ಟುಕೊಳ್ಳದಂತ ಸ್ಥಿತಿ ನಿರ್ಮಾಣವಾಗಿದೆ. ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅವರು ಈ ಬಗ್ಗೆ ಕಾಳಜಿ ವಹಿಸಬೇಕಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಜ್ವಲಂತಸಮಸ್ಯೆಗಳ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ಗಮನ ನೀಡಬೇಕಿದೆ. ಕುಡಿಯುವ ನೀರಿನ ಸಮಸ್ಯೆ, ರೈತರ ಸಮಸ್ಯೆ, ಮರಳು ಮಾಫಿಯಾ, ಕೈಗಾರಿಕೆಗಳಲ್ಲಿ ಸ್ಥಳೀಯರ ನಿರಾಕರಣೆ ಸೇರಿ, ನೆರೆ, ಬರ, ವಿಮಾ ಪರಿಹಾರ ಸಕಾಲಕ್ಕೆ ರೈತರ ಖಾತೆಗೆ ತಲುಪುವಂತ ಕಾರ್ಯಕ್ಕೆ ಮುಂದಾಗಬೇಕಿದೆ.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next