Advertisement

ಪುತ್ತೂರು ಅಭಿವೃದ್ಧಿಗಾಗಿ ಸಿಎಂಗೆ ಬೇಡಿಕೆಗಳ ಪಟ್ಟಿ

03:13 PM Jan 07, 2018 | Team Udayavani |

ಪುತ್ತೂರು: ಗ್ರಾಮಾಂತರ ಜಿಲ್ಲೆಯಾಗಿ ಅಥವಾ ಜಿಲ್ಲಾ ಕೇಂದ್ರವಾಗಿ ಪುತ್ತೂರು ಘೋಷಣೆ ಆಗಬೇಕು ಎಂಬ
ನಿಟ್ಟಿನಲ್ಲಿ ಸಾಕಷ್ಟು ಹೇಳಿಕೆಗಳು ಹೊರ ಬಿದ್ದಿವೆ. ಆದರೆ ಇದಕ್ಕೆ ಪೂರಕವಾಗಿ ಆಗಬೇಕಾದ ಹಲವು ಕೆಲಸ ಸಾಲುಗಟ್ಟಿ ನಿಂತಿವೆ. ಬೇಡಿಕೆಗಳು ಒಂದೊಂದಾಗಿ ಪೂರೈಕೆ ಆದರೆ ಗುರಿ ಇನ್ನಷ್ಟು ಸನಿಹ ಆಗುತ್ತದೆ ಎಂಬ ವಿಶ್ವಾಸ ನಾಗರಿಕರದ್ದು.

Advertisement

ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವ ನಿಟ್ಟಿನಲ್ಲಿ ಪುತ್ತೂರು ವಕೀಲರ ಸಂಘ ನಿರ್ಣಯವನ್ನೂ ಕೈಗೊಂಡಿದೆ.
ವಿಟ್ಲವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿ, ಜಿಲ್ಲಾ ಕೇಂದ್ರವಾಗುವ ಪುತ್ತೂರಿಗೆ ಸೇರಿಸಬೇಕು ಎಂದು ವಕೀಲರು ತೀರ್ಮಾನಿಸಿದ್ದಾರೆ. ಇದಕ್ಕೆ ಆಡಳಿತಾ ರೂಢ ರಾಜ್ಯ ನಾಯಕರು ಒತ್ತಾಸೆಯಾಗಿ ನಿಂತರೆ, ಸದ್ಯಕ್ಕೆ ರೂಪು ಪಡೆಯಲಿರುವ ಕಡಬ ಸಹಿತ ಒಟ್ಟು ಐದು ತಾಲೂಕುಗಳು ಪುತ್ತೂರು ಜಿಲ್ಲೆಗೆ ಸೇರಲಿವೆ.

ಪುತ್ತೂರಿನಲ್ಲಿರಲ್ಲಿ ಎಸ್ಪಿ ಕಚೇರಿ
ಪೊಲೀಸ್‌ ಅಧೀಕ್ಷಕರ (ಎಸ್ಪಿ) ಕಚೇರಿ ಸದ್ಯ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಪರ್ಯಾಸ ಎಂದರೆ, ಎಸ್ಪಿಗೆ
ಮಂಗಳೂರು ಪಟ್ಟಣದಲ್ಲಿ ಯಾವುದೇ ಅಧಿಕಾರವಿಲ್ಲ. ಕಾರಣ, ಮಂಗಳೂರು ಕಮೀಷನರೇಟ್‌. ಪುತ್ತೂರಿನಿಂದ ಸುಮಾರು 55 ಕಿ.ಮೀ. ದೂರವಿರುವ ಉಪ ವಿಭಾಗ ಕೇಂದ್ರ ಪುತ್ತೂರಿಗೆ ಆಗಮಿಸಬೇಕಾದರೂ ಕನಿಷ್ಠ ಒಂದೂವರೆ ತಾಸು ಬೇಕು. ಸಂಪ್ಯ ಠಾಣೆ ಮುಂಭಾಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದಾಗ ಪೊಲೀಸ್‌ ಅಧೀಕ್ಷಕರು ಧಾವಿಸಿ ಬರುವಂತಾಗಿತ್ತು. ಎಸ್ಪಿ ಕಚೇರಿ ಪುತ್ತೂರಿನಲ್ಲಿ ಇರುತ್ತಿದ್ದರೆ, ಘಟನೆ ನಡೆಯಲು ಆಸ್ಪದವೇ ಇರಲಿಲ್ಲ. ಪೊಲೀಸ್‌ ತರಬೇತಿ ಕೇಂದ್ರವೂ ಪುತ್ತೂರಿನಲ್ಲಿ ಆರಂಭಿಸಲು ಈ ಹಿಂದೆ ಶಾಸಕಿ ಕಾರ್ಯೋನ್ಮುಖರಾಗಿದ್ದರು. ಆದ್ದರಿಂದ ಎಸ್ಪಿ ಕಚೇರಿ ಪುತ್ತೂರಿಗೆ ಬಂದರೆ, ಎಲ್ಲ ದೃಷ್ಟಿಯಿಂದಲೂ ಅನುಕೂಲ.

ತಂತ್ರಜ್ಞಾನದ ವಿಚಾರದಲ್ಲಿ ರಾಜ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರಿದೆ. ಆದರೆ ಇದನ್ನು ಆಡಳಿತಾತ್ಮಕವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಇದಕ್ಕೆ ಸ್ಥಳೀಯಾಡಳಿತವೂ ಹೊರತಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಇ-ಆಡಳಿತ ಜಾರಿಗೆ ಬಂದರೆ ಪಾರದರ್ಶಕ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ. ಸರಕಾರ ಜಾರಿಗೆ ತರುವ ಅತ್ಯಮೂಲ್ಯ ಯೋಜನೆಗಳು ಜನಸಾಮಾನ್ಯರನ್ನು ಸುಲಭವಾಗಿ ತಲುಪುತ್ತವೆ. ಮಧ್ಯವರ್ತಿಗಳಿಗೂ ಕಡಿವಾಣ ಹಾಕಬಲ್ಲುದು. ಇ-ಆಡಳಿತ ದೃಷ್ಟಿಯಿಂದ ರಾಜ್ಯ ಸರಕಾರ ಮಹತ್ವಪೂರ್ಣ ಆದೇಶ ಹೊರಡಿಸುವ ಅನಿವಾರ್ಯತೆ ಇದೆ.

ಪ್ರವಾಸೋದ್ಯಮ ಕೇಂದ್ರಗಳು
ಅವಳಿ ವೀರರಾದ ಕೋಟಿ- ಚೆನ್ನಯರ ಹುಟ್ಟೂರು ಪಡುಮಲೆ, ಕಡಲ ತಡಿಯ ಭಾರ್ಗವ ಡಾ| ಶಿವರಾಮ ಕಾರಂತರ ಕಾರ್ಯಕ್ಷೇತ್ರ ಬಾಲವನ, ದಕ್ಷಿಣ ಭಾರತದ ಏಕೈಕ ಬಿಸಿನೀರ ಬುಗ್ಗೆ ಇರುವ ಬೆಂದ್ರ್ತೀರ್ಥ, ಇಡಿಯ ಪುತ್ತೂರನ್ನೇ ಒಂದೇ ನೋಟಕ್ಕೆ ಸೆರೆಹಿಡಿಯಬಲ್ಲ ಬಿರುಮಲೆ ಗುಡ್ಡೆ ಪುತ್ತೂರಿನ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳು. ಆದರೆ ಇಲ್ಲೆಲ್ಲ ಅಭಿವೃದ್ಧಿ ಕಾಮಗಾರಿ ನಡೆಯದೇ ಪ್ರವಾಸಿಗರನ್ನು ಸೆಳೆಯುವಲ್ಲಿ ಅಕ್ಷರಶಃ ವಿಫಲವಾಗಿವೆ. ರಾಜ್ಯ ಸರಕಾರದ ಅನುದಾನ ಕೆಲ ಕೇಂದ್ರಗಳಿಗೆ ಸಿಕ್ಕಿದೆ ನಿಜ. ಆದರೆ ಇನ್ನೂ ಸೂಕ್ತ ರೀತಿಯಲ್ಲಿ ಬಳಕೆಯಾಗಿಲ್ಲ ಎನ್ನುವುದು ವಿಪರ್ಯಾಸ. ಇದಕ್ಕೆ ಇನ್ನಷ್ಟು ವೇಗ ನೀಡುವ ಕೆಲಸ ಅಗತ್ಯವಾಗಿ ಆಗಬೇಕಿದೆ.

Advertisement

ಅರ್ತಿಗುರಿ ಕಾಲನಿ
ಕರಾವಳಿ ಜಿಲ್ಲೆ ಸುಶಿಕ್ಷಿತವಾಗಿದೆ. ಆದರೆ ಇಲ್ಲಿನ ಕಾಲನಿಗಳ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಅರ್ತಿಗುರಿ ಮಾಯಿಲರ
ಕಾಲನಿಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ, 50 ಲಕ್ಷ ರೂ. ಅನುದಾನದ ಭರವಸೆ ನೀಡಿದ್ದರು. ಬಳಿಕ ಇದರ ಪ್ರಸ್ತಾಪವೇ ಇಲ್ಲ. ಕೂಲಿ ಕೆಲಸ ಮಾಡಿ, ಜೀವನ ನಿರ್ವಹಣೆಗೆ ಹೆಣಗಾಡುವ ಈ ಬಡವರಿಗೆ ರಾಜ್ಯ ಸರಕಾರ ಆಸರೆ ನೀಡುತ್ತದೆ ಎಂಬ ಭರವಸೆ ಇನ್ನೂ ಆರಿಲ್ಲ. ಈ ಕಾಲನಿ ಇರುವುದು ನಗರಸಭೆ ಅಧ್ಯಕ್ಷರ ಮನೆ ಹಿಂಭಾಗದಲ್ಲೇ.

ವೈದ್ಯಕೀಯ ಕಾಲೇಜು
ವೈದ್ಯಕೀಯ ಕಾಲೇಜಿಗಾಗಿ ಸೇಡಿಯಾಪು ಬಳಿ ಜಾಗ ಮೀಸಲಿರಿಸಲಾಗಿದೆ. ಆದರೆ ಯಾವುದೇ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿಲ್ಲ. ಆದಷ್ಟು ಶೀಘ್ರ ವೈದ್ಯಕೀಯ ಕಾಲೇಜು ಆರಂಭ ಮಾಡುವ ಕೆಲಸ ನಡೆಯಬೇಕಿದೆ. ಹೇಗಿದ್ದರೂ ಇದಕ್ಕೆ ಸ್ವಲ್ಪ ಸಮಯ ಬೇಕು. ಇದಕ್ಕೆ ಪೂರ್ವಭಾವಿಯಾಗಿ ಪುತ್ತೂರು ಸರಕಾರಿ ಆಸ್ಪತ್ರೆಯನ್ನು 100ರಿಂದ 300 ಹಾಸಿಗೆಗೆ ಏರಿಸುವ ಕೆಲಸ ನಡೆಯಬೇಕಿದೆ. ಜತೆಗೆ, ಸೂಕ್ತ ಸೌಲಭ್ಯ, ಸಿಬಂದಿ ವ್ಯವಸ್ಥೆಯೂ ಆಗಬೇಕಿದೆ .

ಮನವಿ ಮಾಡುವೆ
ವೈದ್ಯಕೀಯ ಕಾಲೇಜು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪುತ್ತೂರು ಜಿಲ್ಲಾ ಕೇಂದ್ರ, ಮಿನಿ ಏರ್‌ಪೋರ್ಟ್‌, ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಮೊದಲಾದ ಬೇಡಿಕೆ ಇದೆ. ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಜಾಗ ಕಾಯ್ದಿರಿಸಲು ಸೂಚಿಸಲಾಗಿದೆ. ಇವನ್ನೆಲ್ಲ ಮುಖ್ಯಮಂತ್ರಿಗಳ ಮುಂದೆ ಇಡಲಾಗುವುದು. ಮುಂದಿನ ಹಂತದಲ್ಲಿ ಕಾರ್ಯರೂಪಕ್ಕೆ ತರಲು ಮನವಿ ಮಾಡಲಾಗುವುದು.
ಶಕುಂತಳಾ ಶೆಟ್ಟಿ,
   ಶಾಸಕಿ 

ಪಕ್ಷ ಭೇದವಿಲ್ಲದೆ ಪ್ರಯತ್ನ
ಪ್ರಬಲ ಒತ್ತಡ ಪುತ್ತೂರಿಗರ ಕಡೆಯಿಂದ ಹೋಗಿಲ್ಲ ಎನ್ನುವುದೇ ಇದುವರೆಗಿನ ಹಲವು ಬೇಡಿಕೆ ಪೂರೈಸದಿರುವುದಕ್ಕೆ ಕಾರಣ. ಜಿಲ್ಲಾ ಕೇಂದ್ರ, ಇ-ಆಡಳಿತ, ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಬೇಡಿಕೆ ನಮ್ಮ ಮುಂದಿವೆ. ಈ ನಿಟ್ಟಿನಲ್ಲಿ ಪಕ್ಷ ಭೇದವಿಲ್ಲದೇ ಕೆಲಸ ಸಾಗಬೇಕು ಎನ್ನುವುದೇ ನಮ್ಮ ಕಾಳಜಿ.
–  ದಿನೇಶ್‌ ಭಟ್‌,
   ಸಾಮಾಜಿಕ ಹೋರಾಟಗಾರ

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next