Advertisement

ಹೆದ್ದಾರಿ ಪಕ್ಕದಲ್ಲಿ ಮದ್ಯದಂಗಡಿ ಬಂದ್‌: ಉತ್ತಮ ನಿರ್ಧಾರ

11:17 PM Jul 28, 2021 | Team Udayavani |

ದೇಶದಲ್ಲಿ ರಸ್ತೆ ಅಪಘಾತದಿಂದ ಸಾಯುವವರ ಸಂಖ್ಯೆ ಇನ್ನೂ ಅಧಿಕವಾಗಿಯೇ ಇದೆ. ಒಂದು ಸಮಾಧಾನಕರ ವಿಚಾರವೆಂದರೆ, ಕೊರೊನಾ ಕಾರಣದಿಂದಾಗಿ ಇಡೀ ದೇಶದಲ್ಲಿ ಲಾಕ್‌ಡೌನ್‌ ರೀತಿಯ ನಿರ್ಬಂಧ ವಿಧಿಸಲಾಗಿದ್ದು, ರಸ್ತೆ ಸಂಚಾರಕ್ಕೆ ಸೀಮಿತ ಅವಕಾಶ ನೀಡಲಾಗಿತ್ತು. ಹೀಗಾಗಿ ಈ ವರ್ಷ ಮತ್ತು ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

Advertisement

ಆದರೆ 2019ರಲ್ಲಿ ರಸ್ತೆ ಅಪಘಾತದ ಪ್ರಮಾಣ ಹೆಚ್ಚಾಗಿಯೇ ಇತ್ತು. ಹೆದ್ದಾರಿಗಳಲ್ಲಿ ಓಡಾಟ ಹೆಚ್ಚಿರುವಾಗ ಈ ಅಪಘಾತಗಳ ಪ್ರಮಾಣವೂ ಹೆಚ್ಚಾಗಿಯೇ ಇದೆ. ಹೀಗಾಗಿ ಈ ಕಳೆದ ಎರಡು ವರ್ಷಗಳಲ್ಲಿನ ರಸ್ತೆ ಅಪಘಾತದ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಜನರಲ್ಲಿ ರಸ್ತೆ ಸುರಕ್ಷತೆ ಮೂಡಿದೆ ಎಂದರ್ಥವಲ್ಲ. ಇದಷ್ಟೇ ಅಲ್ಲ, ಪ್ರತೀ ವರ್ಷ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಮಾಡಿ ಸುಮಾರು 12 ಸಾವಿರ ಮಂದಿ  ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತದ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಮನಗಂಡಿರುವ ಸುಪ್ರೀಂ ಕೋರ್ಟ್‌, ಮದ್ಯದ ಮೇಲೆ ನಿರ್ಬಂಧ ಹೇರಿದೆ. ಇನ್ನು ಮುಂದೆ ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿಗಳ ಸನಿಹದಲ್ಲಿ ಬಾರ್‌ಗಳು ಇರಬಾರದು.

ಸೋಮವಾರವಷ್ಟೇ ಸುಪ್ರೀಂ ಕೋರ್ಟ್‌ ಈ ಸಂಬಂಧ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಅಗತ್ಯ ಮಾರ್ಗಸೂಚನೆಗಳನ್ನು ನೀಡಿದೆ. ಈ ಪ್ರಕಾರವಾಗಿ ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಸರ್ವೀಸ್‌ ರಸ್ತೆಯಿಂದ 500 ಮೀಟರ್‌ ದೂರದಲ್ಲಿ ಮದ್ಯದಂಗಡಿಗಳು ಇರಬೇಕು. ಒಂದು ವೇಳೆ 20 ಸಾವಿರ

ಜನಸಂಖ್ಯೆಗಿಂತ ಕಡಿಮೆ ಇರುವ, ಸ್ಥಳೀಯಾಡಳಿತಗಳು ನೋಡಿಕೊಳ್ಳುವಲ್ಲಿ 220 ಮೀಟರ್‌ ದೂರದಲ್ಲಿ ಮದ್ಯದಂಗಡಿಗಳು ಇರಬೇಕು ಎಂದು ಸೂಚನೆ ನೀಡಲಾಗಿದೆ.

Advertisement

ಸುಪ್ರೀಂ ಕೋರ್ಟ್‌ 2016ರಲ್ಲಿಯೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸನಿಹದಲ್ಲಿ ಮದ್ಯದಂಗಡಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ಸದ್ಯ ಇರುವ ಅಂಗಡಿಗಳಿಗೆ ಇದು

ಅನ್ವಯವಾಗುವುದಿಲ್ಲ ಎಂದೂ ಹೇಳಿತ್ತು. ಜತೆಗೆ ಆಗಿನ ಆದೇಶದಲ್ಲಿ

ಹೆದ್ದಾರಿಗಳಿಂದ ಮದ್ಯದಂಗಡಿಗಳ ಜಾಹೀರಾತು ಅಥವಾ ಅಂಗಡಿಯ ನಾಮಫ‌ಲಕಗಳೂ ಕಾಣಿಸಬಾರದು ಎಂದೂ ಸೂಚಿಸಿತ್ತು. ಈಗ ಅದೇ ಮಾರ್ಗಸೂಚಿ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ನ ಈ ಮಾರ್ಗಸೂಚಿ ಹಿಂದೆ ಸಾಮಾಜಿಕ ಕಳಕಳಿ ಇದೆ. ಹೀಗಾಗಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯ ಜವಾಬ್ದಾರಿಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲಿದೆ. ಹೆದ್ದಾರಿ ಪಕ್ಕದ ಅಂಗಡಿಗಳ ಹೊಣೆ ರಾಜ್ಯ ಸರಕಾರಗಳ ಅಡಿಯಲ್ಲಿ ಬರುವುದರಿಂದ ಕೇಂದ್ರ ಸರಕಾರ ಇದರಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಸೋಮವಾರವಷ್ಟೇ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಹೀಗಾಗಿ ರಾಜ್ಯ ಸರಕಾರಗಳೇ ಹೆದ್ದಾರಿ ಸನಿಹದಲ್ಲಿ ಎಷ್ಟು ಮದ್ಯದಂಗಡಿಗಳು ಇವೆ, ಅವುಗಳನ್ನು ಅಲ್ಲಿಂದ ಹೇಗೆ ತೆರವು ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಕು. ಹಾಗೆಯೇ ಸುಪ್ರೀಂ ಕೋರ್ಟ್‌ ಹೇಳಿದಂತೆ ಹೆದ್ದಾರಿ ಪಕ್ಕದಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾರದು. ಈ ರೀತಿ ಮಾಡಿದಲ್ಲಿ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next