Advertisement

ಮದ್ಯದ ಅಂಗಡಿ ತೆರವು ಯತ್ನದ ಹಿಂದೆ ಷಡ್ಯಂತ್ರ?

10:35 AM Nov 09, 2018 | Team Udayavani |

ಅಜ್ಜಾವರ : ಅಜ್ಜಾವರ ಗ್ರಾಮದ ಪೆಲ್ತಾಡಿಯಲ್ಲಿ ಆರಂಭಿಸಲಾಗಿರುವ ಮದ್ಯದ ಅಂಗಡಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮದ್ಯದ ಅಂಗಡಿಯ ತೆರವಿಗೆ ಆಗ್ರಹಿಸುವ ಜನರಿಗಿಂತ ಮದ್ಯದ ಅಂಗಡಿ ಆರಂಭಿಸಲು ಬೆಂಬಲ ವ್ಯಕ್ತಪಡಿಸುವವರೇ ಜಾಸ್ತಿ ಇದ್ದಾರೆ. ಹೀಗಾಗಿ, ಮದ್ಯದ ಅಂಗಡಿ ವಿರೋಧದ ಹಿಂದೆ ವ್ಯವಸ್ಥಿತ ಷಡ್ಯಂತರವಿದೆಯೇ ಎಂಬ ಅನುಮಾನ ಕಾಡುತ್ತಿದೆ.

Advertisement

ನ. 2ರಂದು ರಾತ್ರಿ ತೆರೆಯಲಾದ ಮದ್ಯದ ಅಂಗಡಿ ಕುರಿತು ಜನರಿಗೆ ಮೊದಲೇ ತಿಳಿದಿತ್ತು. ಹೆಚ್ಚಿನ ನಿವಾಸಿಗಳು ಎರಡು ಗ್ರಾಮಗಳಿಗೆ ಒಂದು ವೈನ್‌ ಶಾಪ್‌ ಬರುವುದರ ಬಗ್ಗೆ ಹರ್ಷಪಟ್ಟಿದ್ದರು. ಮದ್ಯದ ಅಂಗಡಿ ತೆರವಿಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದವರು ಒಂದು ಕಡೆಯಾದರೆ, ಇನ್ನೂ ಹಲವರು ಮದ್ಯದ ಅಂಗಡಿ ಮುಚ್ಚಬಾರದೆಂದು ಮನವಿ ಮಾಡಿದ್ದಾರೆ.

ಅಕ್ರಮ ಸಾರಾಯಿ ಮಾರಾಟ ಜಾಲ
ಅಜ್ಜಾವರ- ಮಂಡೆಕೋಲು ಪರಿಸರದಲ್ಲಿ ಎಲ್ಲಿಯೂ ಮದ್ಯದ ಅಂಗಡಿ ಇಲ್ಲ. ಹೀಗಾಗಿ, ಅಜ್ಜಾವರದ ನೆಹರೂ ನಗರ, ಬಯಂಬು, ಮಂಡೆಕೋಲಿನ ಕಣೆಮಡ್ಕ ಮುಂತಾದ ಕಡೆಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯಿದೆ. ಪೊಲೀಸರು ಹಲವು ಬಾರಿ ದಾಳಿ ನಡೆಸಿದ್ದರೂ ಈ ದಂಧೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿದಿದೆ. ಜನರು ದುಪ್ಪಟ್ಟು ಹಣ ಕೊಟ್ಟು ಮದ್ಯ ಖರೀದಿಸಬೇಕಿದೆ. ಹೆಚ್ಚುವರಿ ಹಣದಲ್ಲಿ ಶೇ. 80ರಷ್ಟು ಅಕ್ರಮ ಸಾರಾಯಿ ಮಾರಾಟಗಾರರ ಪಾಲಾಗುತ್ತಿದೆ. ಸಂಜೆ ವೇಳೆ ಜನರ ಓಡಾಟ ಜಾಸ್ತಿ ಇದ್ದು, 2-3 ಗಂಟೆಗಳ ಅವಧಿಯಲ್ಲಿ ವ್ಯವಹಾರ ನಾಲ್ಕಂಕಿ ದಾಟಿರುತ್ತದೆ. ಮದ್ಯ ಬೇಕಿದ್ದರೆ 7 ಕಿ.ಮೀ. ದೂರದ ಸುಳ್ಯಕ್ಕೆ ತೆರಳಬೇಕಾದ ಕಾರಣ, ಜನ ಹೆಚ್ಚು ಬೆಲೆ ಕೊಟ್ಟು ಇಲ್ಲೇ ಖರೀದಿಸುತ್ತಾರೆ. ಇಲ್ಲಿ ಅಧಿಕೃತ ಮದ್ಯದ ಅಂಗಡಿ ಆರಂಭವಾದರೆ ವ್ಯವಹಾರಕ್ಕೆ ತಡೆಯಾಗುತ್ತದೆ. ನಷ್ಟ ಅನುಭವಿಸ ಬೇಕಾಗುತ್ತದೆ ಎಂಬ ಲೆಕ್ಕಾಚಾರವೇ ಮದ್ಯದಂಗಡಿಗೆ ವಿರೋಧದ ಹಿಂದೆ ಕೆಲಸ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮದ್ಯದ ಅಂಗಡಿಗೆ ಮಂಡೆಕೋಲು ಭಾಗದಿಂದಲೂ ಜನ ಬರುತ್ತಿದ್ದಾರೆ. ನಿತ್ಯ 150ರಿಂದ 200 ಗಿರಾಕಿಗಳಿದ್ದಾರೆ. ಚೈತನ್ಯ ಆಶ್ರಮ ಬಿಟ್ಟರೆ ಈ ಪರಿಸರದಲ್ಲಿ ಜನರ ಓಡಾಟ ಜಾಸ್ತಿ ಇಲ್ಲ ಎನ್ನುತ್ತಾರೆ, ಮದ್ಯದಂಗಡಿಯ ಮಾಲಕ ರಾಕೇಶ್‌ ಶೆಟ್ಟಿ. ಆದರೆ, ಸಂಸಾರ ಹಾಳಾಗುತ್ತದೆ ಎಂಬ ಆತಂಕದಲ್ಲಿ ಈ ಮದ್ಯದ ಅಂಗಡಿಗೆ ಮಹಿಳೆಯರ ವಿರೋಧವಿದೆ.

 ರೈಡ್‌ ಮಾಡಿದ್ದೇವೆ
ಮಂಡೆಕೋಲು- ಅಜ್ಜಾವರ ಭಾಗದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ನಡೆಯುತ್ತಿವೆ. ಈ ¬ಬಗ್ಗೆ ದೂರು  ಬಂದಿವೆ. ಕಳೆದ ತಿಂಗಳು ರೈಡ್‌ ನಡೆಸಲಾಗಿದೆ.
ಪ್ರಮೋದ್‌,
ಅಬಕಾರಿ ಇಲಾಖೆ ಸಿಬಂದಿ

Advertisement

ಅಕ್ರಮ ಮಾರಾಟ ನಿಲ್ಲಿಸಿ
ಸುಳ್ಯ ತಾಲೂಕಿನ ಹಲವು ಕಡೆ ಮದ್ಯದ ಅಂಗಡಿಗಳಿವೆ. ನಿಲ್ಲಿಸುವುದಾದರೆ ಎಲ್ಲವನ್ನೂ ನಿಲ್ಲಿಸಲಿ. ಎರಡು ಗ್ರಾಮಗಳನ್ನು ಜೊತೆಯಾಗಿಸಿ ಆರಂಭಿಸಲಾಗಿದೆ. ಅಕ್ರಮ ಸಾರಾಯಿ ಮಾರಾಟ ದಂಧೆ ನಿಲ್ಲಿಸುವುದು ನಮ್ಮ ಉದ್ದೇಶವಾಗಿತ್ತು.
ಚಂದ್ರಶೇಖರ ಅತ್ಯಾಡಿ,
  ಗ್ರಾ.ಪಂ. ಮಾಜಿ ಅಧ್ಯಕ್ಷ

 ಎಚ್ಚರಿಕೆ ವಹಿಸುತ್ತೇವೆ
ಅಕ್ರಮ ಮದ್ಯ ಮಾರಾಟದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ; ಮುಂದೆ ಇದರ ಬಗ್ಗೆ ಎಚ್ಚರಿಕೆ ವಹಿಸಲಾಗುವುದು.
– ಬೀನಾ ಕರುಣಾಕರ,
ಅಧ್ಯಕ್ಷೆ, ಗ್ರಾ.ಪಂ.,ಅಜ್ಜಾವರ 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next