ಬೆಂಗಳೂರು: ನಗರ ಪ್ರದೇಶಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳನ್ನು ಆರಂಭಿಸಬೇಕಾದರೆ, ರಾಷ್ಟ್ರೀಯ ಹೆದ್ದಾರಿಯನ್ನು ಕೇಂದ್ರ ಸರ್ಕಾರ ಡಿನೋಟಿಫೈಕೇಶನ್ ಮಾಡಬೇಕು. ಈ ಕುರಿತು
ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ್ದರೂ, ಕೇಂದ್ರಸರ್ಕಾರ ಇಲ್ಲಿಯವರೆಗೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ವಿಳಂಬ ಧೋರಣೆ ತಳೆದಿದೆ.
ಇದರಿಂದ ಅಲ್ಲಿನ ಮದ್ಯದಂಗಡಿಗಳು ಅತಂತ್ರ ಸ್ಥಿತಿ ಎದುರಿಸುತ್ತಿವೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮದ್ಯದಂಗಡಿ ತೆರವುಗೊಳಿಸದಂತೆ ರಾಜ್ಯ ಸರ್ಕಾರ ಈಗಾಗಲೇ ರಾಜ್ಯ ಹೆದ್ದಾರಿಗಳನ್ನ ಡಿನೋಟಿಫೈ ಮಾಡಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಲು ರಾಜ್ಯಸರ್ಕಾರಕ್ಕೆ ಅಧಿಕಾರ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿದರೆ, ಮದ್ಯದಂಗಡಿಗಳ ಗೊಂದಲ ನಿವಾರಣೆಯಾಗುತ್ತದೆ ಎಂದು ಹೇಳಿದರು.
ಕೆರೆ ಡಿನೋಟಿಫೈಕೇಶನ್: ಕೆರೆಗಳ ಡಿನೋಫೈಕೇಶನ್ ಬಗ್ಗೆ ಮಾತನಾಡಿದ ಸಚಿವರು, ಈ ಕುರಿತು ರಾಜ್ಯ ಸರ್ಕಾರ
ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈಗಾಗಲೇ ಒತ್ತುವರಿಯಾಗಿ ಕೆರೆಯ ಸ್ವರೂಪ ಕಳೆದುಕೊಂಡಿರುವ ಕೆರೆಗಳ ಡಿನೋಟಿಫೈಕೇಶನ್ ಬಗ್ಗೆ ಚಿಂತಿಸಿದ್ದೇವೆ. ಸರ್ಕಾರ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು.ಹೊಸದಾಗಿ ಕೆರೆಗಳನ್ನು ಡಿನೋಟಿಫೈ ಮಾಡಲು ಹೊರಟಿಲ್ಲ. ಕೆರೆಗಳ ಜೀರ್ಣೋದಾಟಛಿರ ಮಾಡಲು ಕ್ರಮ ಕೈಗೊಂಡಿದ್ದೇವೆ. ಕೆರೆಗಳನ್ನು ಉಳಿಸಿಕೊಳ್ಳುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು. ಯಡಿಯೂರಪ್ಪ ಪ್ರಧಾನ ಮಂತ್ರಿ ಕೃಷಿ ಸಂಚಯ ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ಕೊಡಿಸಿ ಹಣ ಕೊಡಿಸಲು ಮುಂದಾಗಲಿ. ಶಿವಮೊಗ್ಗದ ಕೆರೆಗಳನ್ನು ಮೊದಲು ಜೀರ್ಣೋದಾಟಛಿರ ಮಾಡುತ್ತೇವೆ ಎಂದು ಹೇಳಿದರು.
ಕನ್ನಡಿಗರಿಗೆ ಮೀಸಲಾತಿ: ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಕಾನೂನು ತಿದ್ದುಪಡಿ ಮಾಡಿ ರಾಜ್ಯಪಾಲರಿಗೆ ಕಳುಹಿಸಿದ್ದೇವೆ. ಅದು ವಿಳಂಬವಾಗುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಬಳಿ ತೆರಳಿ ಶೀಘ್ರ ಒಪ್ಪಿಗೆ ಕೊಡುವಂತೆ ಮನವಿ ಮಾಡಿದ್ದೇನೆ. ಬೇರೆ ರಾಜ್ಯಗಳಲ್ಲಿಯೂ ಮೀಸಲಾತಿ ಇರುವುದರಿಂದ ರಾಜ್ಯಪಾಲರುಶೀಘ್ರವೇ ಒಪ್ಪಿಗೆ ಕೊಡುವ ಭರವಸೆ ಇದೆ ಎಂದು ಹೇಳಿದರು. ಮಹದಾಯಿ ವಿಚಾರವಾಗಿ ಮೂರು ರಾಜ್ಯಗಳು ನ್ಯಾಯಾಲಯದ ಹೊರಗೆ ಬಗೆ ಹರಿಸಿಕೊಳ್ಳಲು ಕೋರ್ಟ್ ಹೇಳಿದೆ. ಪ್ರಧಾನ ಮಂತ್ರಿಗಳು ಮೂರು ರಾಜ್ಯಗಳನ್ನು ಸೇರಿಸಿ ಮಾತುಕತೆ ನಡೆಸಬೇಕು. ಈ ಹಿಂದೆ ಕುಡಿಯುವ ನೀರಿನ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಿದ ಉದಾಹರಣೆಗಳು ಸಾಕಷ್ಟಿವೆ. ಆದರೆ, ಪ್ರಧಾನಿಯವರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ನೀರಿನ ಸಮಸ್ಯೆಯನ್ನು ಬಗೆಹರಿಸುವ ಇಚ್ಛೆ ಪ್ರಧಾನಿಗೆ ಇಲ್ಲ ಎಂದು ಹೇಳಿದರು. ವೀರಶೈವ ಪ್ರತ್ಯೇಕ ಧರ್ಮವೆಂದು ನಿರ್ಧಾರ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸಮುದಾಯದ ಸಂಘಟನೆಗಳು ಮನವಿ ಸಲ್ಲಿಸಿದರೆ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ಹೇಳಿದರು.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಕದ್ದು ಮುಚ್ಚಿ ಮಾಡುತ್ತಿಲ್ಲ. ನಾವು ಯೋಜನೆ ಮಾಡುತ್ತಿರುವ ಬಗ್ಗೆ ತಮಿಳುನಾಡಿಗೂ ಗೊತ್ತಿದೆ. ನ್ಯಾಯಮಂಡಳಿಗೂ ಮಾಹಿತಿ ನೀಡಿದ್ದು, ಅದು ಯೋಜನೆಗೆ ಒಪ್ಪಿಗೆ ನೀಡಿದೆ. ಹೀಗಾಗಿ ನಾವು ಯೋಜನೆಯನ್ನು ಜಾರಿಗೊಳಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ.
– ಟಿ.ಬಿ.ಜಯಚಂದ್ರ, ಕಾನೂನು ಸಚಿವ