Advertisement

ಉಡುಪಿ-ದ.ಕ. ಜಿಲ್ಲೆ: ಹೆದ್ದಾರಿ ಬದಿಯ 600 ಮದ್ಯದಂಗಡಿ ಬಂದ್‌

03:55 AM Jun 29, 2017 | Team Udayavani |

ಕಾಪು: ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಜನಸಂಖ್ಯೆಯ ಪ್ರದೇಶ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳನ್ನು ಒಳಗೊಂಡಂತೆ ಕ್ರಮವಾಗಿ 220 ಮೀಟರ್‌ ಮತ್ತು 500 ಮೀಟರ್‌ ಸುತ್ತಳತೆಯ ಅಂತರದ ವ್ಯಾಪ್ತಿಯಲ್ಲಿ ಬರುವ ಮದ್ಯದಂಗಡಿ, ಬಾರ್‌ ಮತ್ತು ವೈನ್‌ಶಾಪ್‌ಗ್ಳನ್ನು ಜೂ. 30ರೊಳಗೆ ತೆರವುಗೊಳಿಸಲು ಸರಕಾರ ಆದೇಶ ಹೊರಡಿಸಿದ್ದು, ಕರಾವಳಿಯ ಹೆದ್ದಾರಿ ಪಕ್ಕದಲ್ಲಿರುವ ಸುಮಾರು 600 ಮದ್ಯದಂಗಡಿಗಳು ಶುಕ್ರವಾರ ಬಳಿಕ ಬಂದ್‌ ಆಗಲಿವೆ. ಇದರಿಂದ ಸಾವಿರಾರು ಕಾರ್ಮಿಕರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಸನಿಹದಲ್ಲಿರುವ ಮದ್ಯದಂಗಡಿಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಬಾರ್‌ ಆ್ಯಂಡ್‌ ಲಾಡ್ಜಿಂಗ್‌ ಮತ್ತು ವೈನ್‌ಶಾಪ್‌ಗ್ಳು ಜೂ. 30ರ ಮಧ್ಯರಾತ್ರಿಯಿಂದಲೇ ಮದ್ಯ ಮಾರಾಟದ ಚಟುವಟಿಕೆಯನ್ನು ಸ್ಥಗಿತಗೊಳಿಸಲಿವೆ. ಸುಪ್ರೀಂ ಕೋರ್ಟ್‌ ಸ್ಪಷ್ಟ ಸೂಚನೆ ನೀಡಿರುವುದರಿಂದ ಜೂ. 30ರಿಂದ ಆದೇಶ ಪಾಲನೆಗೆ ಅಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಈ ಆದೇಶದ ಕಟ್ಟುನಿಟ್ಟಿನ ಪಾಲನೆಯಿಂದಾಗಿ ಇನ್ನು ಮುಂದೆ ಹೆದ್ದಾರಿ ಬದಿಯಲ್ಲಿ ಮದ್ಯ ಸಿಗದು.

Advertisement

ಬಾರ್‌ ಮಾಲಕರಿಗೆ ಹೊರೆ, ಕಾರ್ಮಿಕರಿಗೆ ಬರೆ: ಜಿಲ್ಲೆಯ ನೂರಾರು ಮದ್ಯದಂಗಡಿಗಳು ಮುಚ್ಚಲ್ಪಡುವುದರಿಂದ ಮದ್ಯದಂಗಡಿಗಳ ಮಾಲಕರ ವ್ಯವಹಾರಕ್ಕೆ ಹೊಡೆತ ಬಿದ್ದು ಹೊರೆಯಾದರೆ, ಅಲ್ಲಿ ಕೆಲಸ ಮಾಡುತ್ತಿರುವವರ ಹೊಟ್ಟೆಗೇ ಬರೆ ಎಳೆದಂತಾಗುತ್ತದೆ. ಪ್ರತಿ ಬಾರ್‌ಗಳಲ್ಲಿರುವ ಹಲವು ಮಂದಿ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಗೊಳಗಾಗಿದ್ದಾರೆ.

ಆಕ್ಷೇಪಣೆ ರಹಿತ ಪ್ರದೇಶಕ್ಕೆ ಸ್ಥಳಾಂತರಿಸಲು ಅವಕಾಶ: ಅಬಕಾರಿ ಇಲಾಖೆಯೇ ತಿಳಿಸಿರುವಂತೆ ಈಗಿನ ವ್ಯಾಪ್ತಿಯಿಂದ ತೆರವುಗೊಳಿಸುವ ಸನ್ನದು (ಮದ್ಯದಂಗಡಿ)ಗಳನ್ನು ಸುಪ್ರೀಂ ಕೋರ್ಟ್‌ ಸೂಚಿಸಿರುವ ನಿಯಮಾವಳಿಯಂತೆ ಗ್ರಾ. ಪಂ. ವ್ಯಾಪ್ತಿಯಾದರೆ ಹೆದ್ದಾರಿ ರಸ್ತೆಗಿಂತ 220 ಮೀಟರ್‌ ಅಂತರ ಮತ್ತು ಪುರಸಭೆ / ನಗರಸಭೆ ವ್ಯಾಪ್ತಿಯಾದರೆ 500 ಮೀಟರ್‌ ದೂರದಲ್ಲಿ ಸ್ಥಳೀಯರ ಆಕ್ಷೇಪಣೆ ಇರದೇ ಇದ್ದಲ್ಲಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬಹುದಾಗಿದೆ. ಕೆಲವು ಮದ್ಯದಂಗಡಿಗಳ ಮಾಲಕರು ಅದಕ್ಕಾಗಿ ಈಗಾಗಲೇ ಸ್ಥಳವನ್ನು ಗೊತ್ತುಪಡಿಸಿದ್ದು, ಸ್ಥಳಾಂತರಕ್ಕೆ ಸಿದ್ಧತೆಯನ್ನು ನಡೆಸಿದ್ದಾರೆ.

ನೋಟಿಸ್‌ ಜಾರಿ
ಅಬಕಾರಿ ಇಲಾಖೆಯು ಈಗಾಗಲೇ ನಿಗದಿತ ಮಿತಿಯೊಳಗಿರುವ ಮದ್ಯದಂಗಡಿಗಳನ್ನು ಗುರುತಿಸಿದ್ದು, ಅಂತಹಸನ್ನದುಗಳ ತೆರವಿಗೆ ಅಥವಾ ಸ್ಥಳಾಂತರಕ್ಕೆ ನೋಟಿಸು ಜಾರಿ ಮಾಡಿದೆ. ಅಬಕಾರಿ ಇಲಾಖೆಯು ನೋಟಿಸ್‌ನಲ್ಲಿ ತಿಳಿಸಿರುವಂತೆ ಜೂ. 30ರೊಳಗೆ ಯಾವ ಮದ್ಯದಂಗಡಿಗಳು ಎಲ್ಲಿಗೆ ಸ್ಥಳಾಂತರಗೊಳ್ಳಲಿವೆ ಮತ್ತು ಯಾವ ಮದ್ಯದಂಗಡಿಗಳು ಮುಚ್ಚಲ್ಪಡಲಿವೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ರೆಸ್ಟೋರೆಂಟ್‌, ಲಾಡ್ಜಿಂಗ್‌
ಹೆದ್ದಾರಿ ಬದಿಯಲ್ಲಿ ನೂರಾರು ಬಾರ್‌ ಎಂಡ್‌ ರೆಸ್ಟೋರೆಂಟ್‌ಗಳು ಮತ್ತು ಬಾರ್‌ ಆ್ಯಂಡ್‌ ಲಾಡ್ಜ್ಗಳು ಜತೆ ಜತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿನ ಬಾರ್‌ಗಳ ಸ್ಟಾಕ್‌ ರೂಂಗೆ ಮಾತ್ರ ಜೂ. 30ರಿಂದ ಬೀಗ ಜಡಿಯುವ ಸಾಧ್ಯತೆಗಳಿವೆ ಎಂಬ ಮಾಹಿತಿ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ದೊರಕಿದೆ. ಮದ್ಯ ದಾಸ್ತಾನಿಗೆಂದೇ ಪ್ರತ್ಯೇಕ ಸ್ಟಾಕ್‌ ರೂಮ್‌ಗಳನ್ನು ಹೊಂದಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮತ್ತು ಲಾಡ್ಜ್ಗಳ ಸ್ಟಾಕ್‌ ರೂಂಗೆ ಬೀಗ ಜಡಿಯುವುದರಿಂದ ರೆಸ್ಟೋರೆಂಟ್‌ಗಳನ್ನು ಮುಂದುವರಿಸಲು ಅವಕಾಶವಿದೆ.

Advertisement

ಸ್ಥಳಾಂತರಿಸಲೂ ಅವಕಾಶವಿಲ್ಲ
ಬಾರ್‌ ಲೈಸೆನ್ಸ್‌ಗಳ ಪೈಕಿ ಸಿಎಲ್‌-7, ಸಿಎಲ್‌-9, ಸಿಎಲ್‌-2 ಸಹಿತ ಹಲವು ವಿಧಗಳಿವೆ. ಇವುಗಳ ಪೈಕಿ ಸಿಎಲ್‌-9 (ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌), ಸಿಎಲ್‌-2 (ವೈನ್‌ಶಾಪ್‌)ಗಳ ಲೈಸೆನ್ಸ್‌ ಹೊಂದಿರುವವರಿಗೆ ತಮ್ಮ ಬಾರ್‌ ಮತ್ತು ವೈನ್‌ಶಾಪ್‌ಗ್ಳನ್ನು ಸಾರ್ವಜನಿಕರ ಆಕ್ಷೇಪ ರಹಿತವಾದ ಪ್ರದೇಶಗಳಿಗೆ ಅಂದರೆ ನಿಗದಿ ಪಡಿಸಿದ ಜನಸಂಖ್ಯೆ ಹೊಂದಿದ ಪ್ರದೇಶಗಳ 220 ಮೀಟರ್‌ ಮತ್ತು 500 ಮೀಟರ್‌ ಸುತ್ತಳತೆಯ ಅಂತರದಿಂದ ದೂರಕ್ಕೆ ಸ್ಥಳಾಂತರಿಸಲು ಅವಕಾಶವಿದೆ. ಆದರೆ ಸಿಎಲ್‌ -7 (ಬಾರ್‌ ಎಂಡ್‌ ಲಾಡ್ಜಿಂಗ್‌) ಲೈಸೆನ್ಸ್‌ ಹೊಂದಿರುವವರಿಗೆ ತಮ್ಮ ಮದ್ಯದಂಗಡಿಗಳನ್ನು ಸ್ಥಳಾಂತರಿಸಲೂ ಅವಕಾಶವಿಲ್ಲದಂತಾಗಿದೆ.

ಉಡುಪಿ-225; ದ. ಕ. ಜಿಲ್ಲೆ – 350: ಮಾಹಿತಿಗಳ ಪ್ರಕಾರ ಉಡುಪಿ ಜಿಲ್ಲೆಯಲ್ಲಿರುವ 390 ಮದ್ಯದಂಗಡಿಗಳ ಪೈಕಿ 225ರಷ್ಟು ಮದ್ಯದಂಗಡಿಗಳು ತೆರವಾಗಲಿದ್ದು, ದ.ಕ. ಜಿಲ್ಲೆಯಲ್ಲಿರುವ 550 ಮದ್ಯದಂಗಡಿಗಳ ಪೈಕಿ 350ರಷ್ಟು ಹೆದ್ದಾರಿ ಬದಿಯಿಂದ ತೆರವಾಗಲಿವೆ.

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next