ಶಿವಮೊಗ್ಗ: ಸ್ವಾತಂತ್ರ್ಯೋತ್ಸವದ ದಿನ ಸಂಜೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರಣದಿಂದ ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಶಿವಮೊಗ್ಗ- ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಭದ್ರಾವತಿ ಮತ್ತು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಆಗಸ್ಟ್ 16 ರಂದು ಬೆಳಗ್ಗೆ ಆರು ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿದ್ದಾರೆ.
ಶಿವಮೊಗ್ಗದ ಎಎ ಸರ್ಕಲ್ ನಲ್ಲಿ ಸಾವರ್ಕರ್ ಫೋಟೊ ವಿಚಾರವಾಗಿ ಗಲಾಟೆ ನಡೆದಿತ್ತು. ಬಳಿಕ ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿತ್ತು. ಇದರಿಂದ ನಗರದಲ್ಲಿ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದೆ.
ಇದನ್ನೂ ಓದಿ:ಬೊಮ್ಮಾಯಿ ಆರ್ ಎಸ್ಎಸ್ ಕೈಗೊಂಬೆ: ಸಿದ್ದರಾಮಯ್ಯ ವಾಗ್ದಾಳಿ
ನಗರದಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನ ಗಂಡಸರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇದಿಸಲಾಗಿದೆ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತುಪಡಿಸಿ)
ರಾತ್ರಿ 9 ರಿಂದ ಬೆಳಗಿನ ಜಾವ 5 ರವರೆಗೆ ತುರ್ತು ಸಂದರ್ಭವನ್ನು ಹೊರತು ಪಡಿಸಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.