ಗುಳೇದಗುಡ್ಡ: ಸಮೀಪದ ಕೆಲವಡಿ-ಲಿಂಗಾಪುರ ಗ್ರಾಮದಲ್ಲಿ ಮಂಗಳವಾರ ನಡೆದ ಕನಕರಾಯರ ಜಾತ್ರೆಯಲ್ಲಿ ಭಕ್ತರು ನೆಚ್ಚಿನ ದೇವರಿಗೆ ಮದ್ಯ ನೈವೇದ್ಯ ಮಾಡಿದರಲ್ಲದೇ ಅರ್ಚಕರು ನೀಡಿದ ಮದ್ಯವನ್ನೇ ತೀರ್ಥವೆಂದು ಸ್ವೀಕರಿಸಿದರು. ಭಕ್ತರು ಬೆಳಿಗ್ಗೆಯಿಂದಲೇ ತಮಗಿಷ್ಟವಾದ ಮದ್ಯವನ್ನು ತಂದು ತಮ್ಮ ಇಷ್ಟಾರ್ಥ ನೆರವೇರಿಸಲು ಕನಕರಾಯನಿಗೆ ಭಕ್ತಿಯಿಂದ ಸಮರ್ಪಿಸಿದರು.
ಹಿನ್ನೆಲೆ: ಕೆಲವಡಿ ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವರು ಹಾಗೂ ಕನಕರಾಯ ಅಣ್ಣ ತಮ್ಮಂದಿರು. ಈ ಇಬ್ಬರೂ ತೀರ್ಥ ಪ್ರಿಯರೆಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ರಂಗನಾಥನಿಗೂ ಹಾಗೂ ಕನಕರಾಯನಿಗೂ ಯಾವುದೋ ವಿಷಯದಲ್ಲಿ ಮನಸ್ತಾಪ ಉಂಟಾಗಿ ಕನಕರಾಯ ಲಿಂಗಾಪೂರ-ಶಿರೂರ ಮಾರ್ಗದ ಮಧ್ಯ ನೆಲೆಸಿದ, ರಂಗನಾಥಸ್ವಾಮಿ ಕೆಲವಡಿ ಗ್ರಾಮದಲ್ಲಿ ನೆಲೆಸಿದನೆಂಬ ಪ್ರತೀತಿ ಇದೆ. ಪ್ರತಿವರ್ಷ ರಂಗನಾಥಸ್ವಾಮಿ ರಥೋತ್ಸವ ಎರಡು ದಿನ ಇರುವಾಗಲೇ ಹಂಸನೂರ ಅಮ್ಮನವರು ಕೆಲವಡಿ ಗ್ರಾಮಕ್ಕೆ ಬರುತ್ತಾರೆ. ರಂಗನಾಥಸ್ವಾಮಿ ತನ್ನ ಅಣ್ಣನಾದ ಕನಕರಾಯನನ್ನು ತನ್ನ ಜಾತ್ರೆಯ ಒಂದು ದಿನದ ಮುಂಚೆ ಜಾತ್ರೆಗೆ ಆಹ್ವಾನಿಸಲು
ಲಿಂಗಾಪೂರ-ಶಿರೂರ ಮಾರ್ಗದಲ್ಲಿನ ಕನಕರಾಯನ ಗುಡಿಗೆ ತೆರಳುತ್ತಾನೆಂಬುದು ಕೆಲವಡಿ, ಲಿಂಗಾಪೂರ ಗ್ರಾಮಸ್ಥರ ನಂಬಿಕೆಯಾಗಿದೆ.
ಕೆಲವಡಿಯ ಶ್ರೀ ಲಕ್ಷ್ಮೀ ರಂಗನಾಥ ಗುಡಿಯಿಂದ ಲಿಂಗಾಪುರ-ಶಿರೂರ ಮಾರ್ಗ ಮಧ್ಯದಲ್ಲಿ ಇರುವ ಕನಕರಾಯನ ಸನ್ನಿ ಧಿಗೆ ಭಕ್ತರು ಪಾಲಿಕೆಯನ್ನು ಮೆರವಣಿಗೆ ಮೂಲಕ ತಂದು ಪೂಜೆ ಮಾಡಿದ ನಂತರ ಭಕ್ತರು ಮದ್ಯದ ಪ್ರಸಾದ ಸ್ವೀಕರಿಸುತ್ತಾರೆ. ನಂತರ ಕನಕರಾಯನ ಗುಡಿಯಲ್ಲಿ ಭಕ್ತರು ಅನ್ನ ಸಂತರ್ಪಣೆ ಮಾಡುತ್ತಾರೆ.
ಬೇಡಿಕೆ ಈಡೇರಿಕೆಗೆ ಮದ್ಯ ನೈವೇದ್ಯ: ಕೆಲವಡಿ ರಂಗನಾಥ ಹಾಗೂ ಕನಕರಾಯರ ದೇವಸ್ಥಾನಗಳಿಗೆ ಬರುವ ಭಕ್ತರು ತಮ್ಮ ಕಷ್ಟಗಳು ನಿವಾರಣೆಯಾದರೆ ಅಥವಾ ದೇವರ ಸನ್ನಿ ಧಿಯಲ್ಲಿ ಭಕ್ತರು ಬೇಡಿಕೊಂಡ ಹರಕೆಗಳು ನೆರವೇರಿದರೆ ಇಂತಿಷ್ಟು ಮದ್ಯದ ಬಾಟಲಿಗಳನ್ನು ಸಮರ್ಪಿಸುವುದಾಗಿ ಬೇಡಿಕೊಳ್ಳುತ್ತಾರೆ. ಅದರಂತೆ ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರಿದಾಗ ಇಲ್ಲಿಗೆ ಬಂದು ಮದ್ಯದ ಬಾಟಲಿಗಳನ್ನು ತಂದು ದೇವರಿಗೆ ನೈವೇದ್ಯ ಅರ್ಪಿಸಿ, ತಮ್ಮ ಹರಕೆ ತೀರಿಸುತ್ತಾರೆ. ಜಾತ್ರೆಗೆ ಇನ್ನು ಐದು ದಿನಗಳು ಬಾಕಿ ಇರುವಾಗ ಲಕ್ಷ್ಮೀರಂಗನಾಥ ದೇವಸ್ಥಾನದಲ್ಲಿ ನಿತ್ಯ ವಿವಿಧ ರೀತಿಯ ಮೆರವಣಿಗೆ ನಡೆದು ದೇವರಿಗೆ ಅಭಿಷೇಕ, ಅರ್ಚನೆ ನಡೆಯುತ್ತದೆ. ಬೇರೆ ಊರಿನಿಂದ ಬರುವ ಭಕ್ತರು ಉತ್ತಮ ದರದ ಮದ್ಯ ಹಿಡಿದು ಬಿಯರ್, ವಿಸ್ಕಿ, ರಮ್ ಹೀಗೆ ತಮ್ಮ ಭಕ್ತಿ ಹಾಗೂ ತಾವು ಸೇವಿಸುವ ಇಷ್ಟದ ಮದ್ಯವನ್ನು ತೆಗೆದುಕೊಂಡು ಹೋಗಿ ನೈವೇದ್ಯ ಅರ್ಪಿಸುತ್ತಾರೆ. ಕೆಲವಡಿ, ಲಿಂಗಾಪೂರ ಗ್ರಾಮಗಳಿಂದ ಕೆಲಸಕ್ಕಾಗಿ ಬೆಂಗಳೂರು, ಮಂಗಳೂರು, ಗೋವಾ ಮುಂತಾದ ಕಡೆಗಳಲ್ಲಿ ತೆರಳಿದ್ದ ಜನರು ತಪ್ಪದೇ ತಮ್ಮ ನೆಚ್ಚಿನ ದೇವರ ಜಾತ್ರೆಗೆ ಆಗಮಿಸುತ್ತಾರೆ.
ಮಲ್ಲಿಕಾರ್ಜುನ ಕಲಕೇರಿ