ಚಿಕ್ಕಮಗಳೂರು: ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ಇಡೀ ಜಿಲ್ಲಾದ್ಯಂತ ಲಾಕ್ ಡೌನ್ ವಿಧಿಸಿ ಜನಸಂಚಾರಕ್ಕೆ ತಡೆ ಒಡ್ಡಲಾಗಿದೆ. ಅಗತ್ಯ ವಸ್ತುಗಳ ಮಳಿಗೆಯನ್ನು ಹೊರತುಪಡಿಸಿ ಉಳಿದಂತ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಅದರಂತೆ ಮದ್ಯ ಮಾರಾಟ ಮಳಿಗೆ, ಬಾರ್ ಅಂಡ್ ರೆಸ್ಟೋರೆಂಟ್‍ಗಳನ್ನು ಮುಚ್ಚಿಸಲಾಗಿದ್ದು, ಕಳ್ಳರು ಮದ್ಯ ಕದಿಯಲು ಮುಂದಾಗಿದ್ದಾರೆ.
ಲಾಕ್ ಡೌನ್ ಪ್ರಾರಂಭವಾದ ನಂತರ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಳ್ಳರು ಮದ್ಯ ಮಾರಾಟ ಮಳಿಗೆಗಳಿಗೆ ಕನ್ನ ಹಾಕಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈಗ ಕಾಫಿನಾಡಿನಲ್ಲೂ ಮದ್ಯ ಮಳಿಗೆಗಳಿಗೆ ಕನ್ನ ಹಾಕಲು ಕಳ್ಳರು ಶುರುವಿಟ್ಟುಕೊಂಡಿದ್ದು, ನಗರದ ಪಾರ್ಕ್ ಇನ್ ರೆಸ್ಟೋರೆಂಟ್‍ಗೆ ನುಗ್ಗಿ ಕಳ್ಳರು ಮದ್ಯ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಶನಿವಾರ ರಾತ್ರಿ ವೇಳೆ ಪಾರ್ಕ್ ಇನ್ ರೆಸ್ಟೋರೆಂಟ್‍ನ ಕಿಟಕಿ ಮುರಿದು ಒಳ ನುಗ್ಗಿರುವ ಕಳ್ಳರು ಆರು ಬಾಕ್ಸ್ ಮದ್ಯವನ್ನು ಕಳ್ಳತನ ಮಾಡಿದ್ದಾರೆ. ರೆಸ್ಟೋರೆಂಟ್ ನಲ್ಲಿ ಭಾರಿ ಮುಖಬೆಲೆಯ ಮದ್ಯಗಳಿದ್ದರೂ, ಅವುಗಳನ್ನು ಮುಟ್ಟದೇ ಸಾಮಾನ್ಯ ಮುಖಬೆಲೆಯ 50 ಸಾವಿರ ಮೌಲ್ಯದ ಮದ್ಯವನ್ನು ಕದ್ದೊಯ್ದಿದ್ದಾರೆ.
ಭಾನುವಾರ ರೆಸ್ಟೋರೆಂಟ್ ಮಾಲೀಕರು ರೆಸ್ಟೋರೆಂಟ್ ನೋಡಿಕೊಂಡು ಹೋಗಲು ಬಂದ ಸಂದರ್ಭದಲ್ಲಿ ಕಿಟಕಿ ಒಡೆದಿರುವುದು ಕಂಡು ಬಂದಿದೆ. ತಕ್ಷಣ ನಗರ ಪೊಲೀಸ್ ಠಾಣೆ ಮತ್ತು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಿಟಕಿ ಸರಳು ಕತ್ತರಿಸಿ ಒಳನುಗ್ಗಿರುವ ಕಳ್ಳುರು 50 ಸಾವಿರ ರೂ. ಮೌಲ್ಯದ ಲೋಕಲ್ ಮದ್ಯ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.