ಮೆಸ್ಸಿ, ಮೆಸ್ಸಿ, ಮೆಸ್ಸಿ… ಪ್ರಸಕ್ತ ಫುಟ್ಬಾಲ್ ಜಗತ್ತಿನಲ್ಲಿ ಈ ಮೆಸ್ಸಿ ಎಂಬ ಹೆಸರಿನ ಮೇಲೆ ಇರುವ ಪ್ರೀತಿ, ಅಭಿಮಾನ ಬೇರೆಯವರಿಗೆ ಇರುವ ಸಾಧ್ಯತೆ ತೀರಾ ಕಡಿಮೆ. ಅರ್ಜೆಂಟೀನಾದ ಈ ಫಾರ್ವರ್ಡ್ ಆಟಗಾರ, ಒಂದು ರೀತಿ ಭಾರತದಲ್ಲಿ ಸಚಿನ್ ತೆಂಡೂಲ್ಕರ್ ಇದ್ದ ಹಾಗೆ. ನಮಗೆ ಸಚಿನ್ ದೇವರಾದರೆ, ಅರ್ಜೆಂಟೀನಾ ಮತ್ತು ದೇಶಗಳ ಗಡಿ ದಾಟಿ ಫುಟ್ಬಾಲ್ ಅಭಿಮಾನಿಗಳಿಗೆ ಲಿಯೋನೆಲ್ ಮೆಸ್ಸಿ ಕೂಡ ದೇವರೇ. ಸಚಿನ್ ಮತ್ತು ಮೆಸ್ಸಿಯಲ್ಲಿ ತೀರಾ ಸಾಮ್ಯತೆವುಂಟು. ಅತೀ ಕಡಿಮೆ ವಯಸ್ಸಿಗೇ ಫುಟ್ಬಾಲ್‌ಗೆ ಪದಾರ್ಪಣೆ, ಅತೀ ಹೆಚ್ಚು ಪಂದ್ಯ, ಅತಿ ಹೆಚ್ಚು ಗೋಲು ಹೀಗೆ ಮೆಸ್ಸಿ ಮಾಡಿದ್ದೆಲ್ಲವೂ ದಾಖಲೆಗಳೇ.
ಮಂಗಳವಾರ ರಾತ್ರಿಯೂ ಅರ್ಜೆಂಟೀನಾ ಪರ ಗೆಲುವಿನ ಮೊದಲ ಹೆಜ್ಜೆಯಂತೆ ಮೊದಲ ಗೋಲು ಬಾರಿಸಿದ್ದೂ ಅಲ್ಲದೇ ಮತ್ತೂಂದು ಗೋಲಿಗೆ ಅದ್ಭುತವಾಗಿ ಸಹಾಯ ಮಾಡಿ ಅಭಿಮಾನಿಗಳ ಮನಸ್ಸನ್ನು ಗೆದ್ದು ಬಿಟ್ಟರು ಮೆಸ್ಸಿ.
ಅಂದ ಹಾಗೆ ಮೆಸ್ಸಿಗಿದು ಕೊನೆಯ ಫಿಫಾ ಫುಟ್ಬಾಲ್ ವಿಶ್ವಕಪ್. ರವಿವಾರವೇ ನನ್ನ ಕಡೆಯ ಪಂದ್ಯ ಎಂದಿದ್ದಾರೆ ಮೆಸ್ಸಿ. ಆದರೆ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಆಡುತ್ತಾರೋ ಇಲ್ಲವೋ ಇನ್ನೂ ಖಚಿತವಾಗಿಲ್ಲ. ಕೇವಲ 13ನೇ ವಯಸ್ಸಿಗೇ ಫುಟ್ಬಾಲ್ ಅಂಗಳಕ್ಕೆ ಕಾಲಿಟ್ಟ ಮೆಸ್ಸಿ, ಎಂದಿಗೂ ಹಿಂದಿರುಗಿ ನೋಡಲಿಲ್ಲ. ಅಷ್ಟೇ ಅಲ್ಲ, ಇವರ ಹೆಸರಿನಲ್ಲಿ ಮುಂದೆ ಅಳಿಸುವುದು ಕಷ್ಟ ಎಂಬ ದಾಖಲೆಗಳೂ ಇವೆ.
ಅಂದ ಹಾಗೆ ಮೆಸ್ಸಿ ಹುಟ್ಟಿದ್ದು 1987ರ ಜೂ.24ರಂದು. ಐದನೇ ವಯಸ್ಸಿನಲ್ಲೇ ತಮ್ಮ ತಂದೆಯ ಕ್ಲಬ್‌ನಲ್ಲಿ ಆಡಲು ಶುರು ಮಾಡಿದ್ದರು. ಬಳಿಕ ನ್ಯೂವೆಲ್ ಎಂಬ ಕ್ಲಬ್ ಸೇರಿಕೊಂಡರು. ಇದು 4 ವರ್ಷಗಳಲ್ಲಿ ಸೋತಿದ್ದು ಒಂದೇ ಒಂದು ಗೇಮ್ ಮಾತ್ರ. ಆದರೆ ಮೆಸ್ಸಿಗೆ ಕಾಡಿದ್ದು ಆರೋಗ್ಯ ಸಮಸ್ಯೆ. ಹಾರ್ಮೋನ್ ಕೊರತೆ ಕಾಡಿದ್ದು, ಇದಕ್ಕೆ ಸಹಾಯ ಮಾಡಿದ್ದು ಬಾರ್ಸಿಲೋನಾ ಕ್ಲಬ್. ಇಲ್ಲಿ ಯೂತ್ ಅಕಾಡೆಮಿಯಲ್ಲಿ ಸೇರಿಕೊಂಡಿತ್ತು. 2004ರಲ್ಲಿ ಮೆಸ್ಸಿ ಅಧಿಕೃತವಾಗಿ ಬಾರ್ಸಿಲೋನಾ ಪರವಾಗಿ ಆಡಲು ಶುರು ಮಾಡಿದರು. ಆಗ ಇವರ ವಯಸ್ಸು 17.
ಬಾರ್ಸಿಲೋನಾ ಮತ್ತು ಅರ್ಜೆಂಟೀನಾ ಎರಡೂ ಸೇರಿಸಿ 700ಕ್ಕೂ ಹೆಚ್ಚು ಗೋಲು ಬಾರಿಸಿದ್ದಾರೆ. ಇದರಲ್ಲಿ 400 ಗೋಲು ಲಾ ಲಿಗಾ ಮ್ಯಾಚ್‌ಗಳಿಗೇ ಸೇರಿದವುಗಳಾಗಿವೆ. ಅರ್ಜೆಂಟೀನಾ ಪರ ಮೆಸ್ಸಿ 140ಕ್ಕೂ ಹೆಚ್ಚು ಬಾರಿ ಆಡಿದ್ದಾರೆ.
ಮೆಸ್ಸಿ ಏಳು ಬಾರಿ ವರ್ಷದ ಫುಟ್ಬಾಲಿಗ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಆರು ಬಾರಿ ಯೂರೋಪಿಯನ್ ಗೋಲ್ಡನ್ ಶೂ ಪ್ರಶಸ್ತಿ ಗೆದ್ದಿದ್ದಾರೆ.
ಐದು ಫುಟ್ಬಾಲ್ ವಿಶ್ವಕಪ್‌ನ 25 ಪಂದ್ಯಗಳಲ್ಲಿ ಆಡಿ ದಾಖಲೆ ನಿರ್ಮಾಣ. ಇದರಲ್ಲಿ 18 ಬಾರಿ ಪಂದ್ಯದ ನಾಯಕರಾಗಿದ್ದಾರೆ. ಒಟ್ಟಾರೆಯಾಗಿ ಅರ್ಜೆಂಟೀನಾ ಪರ 11 ಗೋಲು ಹೊಡೆದು ಗರಿಷ್ಠ ಗೋಲುಗಳ ದಾಖಲೆ ಸರದಾರರೂ ಮೆಸ್ಸಿಯೇ.