Advertisement

ತಮಿಳಿಗರಿಗೆ ವಿಶ್ವಮಾನವ ಸಂದೇಶ

06:00 AM Apr 09, 2018 | |

ಬೆಂಗಳೂರು: ಕಾವೇರಿ ವಿಚಾರದಲ್ಲಿ ಸದಾಸಂಘರ್ಷವನ್ನೇ ಕಾಣುವ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಂಬಂಧ ಬೆಸೆವ ಕೆಲಸಕ್ಕೆ ಮುಂದಾಗಿರುವ ಕುವೆಂಪು ಭಾಷಾ ಭಾರತಿ, ರಾಷ್ಟ್ರ ಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ತಮಿಳುನಾಡಿಗೂ ಪಸರಿಸಲು ಚಿಂತನೆ ನಡೆಸಿದೆ.

Advertisement

ತಮ್ಮ ಕಾವ್ಯ, ಬರಹಗಳ ಮೂಲಕ ಯುಗದ ಕವಿ ಎಂದು ಬಣ್ಣಿಸಿಕೊಂಡ ಜ್ಞಾನಪೀಠ ಪುರಸ್ಕೃತ ಕುವೆಂಪು ಅವರ ಸಾಹಿತ್ಯ ತಮಿಳು ಭಾಷೆಯ ಓದುಗರಿಗೂ ಸಿಗಬೇಕು ಎಂಬ ಉದ್ದೇಶದೊಂದಿಗೆ ಕುವೆಂಪು ಭಾಷಾ ಪ್ರಾಧಿಕಾರ ರಾಷ್ಟ್ರಕವಿ ಕುವೆಂಪು ಅವರ ಕಾವ್ಯಗಳನ್ನು ಒಟ್ಟುಗೂಡಿಸಿ ಇದೀಗ ತಮಿಳು ಭಾಷೆಯಲ್ಲಿ “ಸಮಗ್ರ ಕಾವ್ಯವನ್ನು’ ಪ್ರಕಟಿಸುವ ಆಲೋಚನೆಯಲ್ಲಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇರಿಸಿರುವ ಪ್ರಾಧಿಕಾರದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಮತ್ತು ಬೆಂಗಳೂರಿನ ಖಾಸಗಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿಯೊಬ್ಬರು ಮಾತುಕತೆ ನಡೆಸಿದ್ದು ಕುವೆಂಪು ಅವರ ಕಾವ್ಯಗಳ ತಮಿಳು ಭಾಷಾಂತರ ಮಾಡಲು ಉತ್ಸುಕತೆ ತೋರಿದ್ದಾರೆ. ಈ ಬಗ್ಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಈ ಹಿಂದೆ ಪ್ರಾಧಿಕಾರವು ಕುವೆಂಪು ಅವರ ಆಯ್ದ ಬರಹಗಳ ಸಂಕಲನವನ್ನು ತಮಿಳು ಭಾಷೆಯಲ್ಲಿ ಪ್ರಕಟಿಸಿದೆ. ಇದೀಗ ಕುವೆಂಪು ಅವರ ಸಮಗ್ರ ಕಾವ್ಯವನ್ನು ಪ್ರಕಟಿಸಲು ಮುಂದಾಗಿದೆ. ಅದಕ್ಕಾಗಿ ತಮಿಳು ಭಾಷೆಯ ಪ್ರಕಾಶಕರ ಹುಡುಕಾಟದಲ್ಲಿ ನಿರತವಾಗಿದೆ.  ತಮಿಳು ಭಾಷೆಯ ಪ್ರಕಾಶಕರು ಈ ಪುಸ್ತಕಗಳನ್ನು ಪ್ರಕಟಿಸಿದರೆ ಅವರು ಓದುಗರಿಗೆ ಹೆಚ್ಚು ತಲುಪಿಸುತ್ತಾರೆ. ಆಗ ನಮ್ಮ ಕೆಲಸಕ್ಕೂ ಸಾರ್ಥಕತೆ ಸಿಗುತ್ತದೆ ಎಂಬ ಉದ್ದೇಶದಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ತಮಿಳು ಭಾಷೆಯ ಪ್ರಕಾಶರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.

ಕುವೆಂಪು ಅವರ ಸಮಗ್ರ ಕಾವ್ಯಗಳನ್ನು ತಮಿಳಿಗೆ ಭಾಷಾಂತರಿಸಬೇಕು ಎಂಬ ಆಶಯ ಪ್ರಾಧಿಕಾರದ ಮುಂದೆ ಇದೆ. ಈ ನಿಟ್ಟಿನಲ್ಲಿ ಮಾತುಕತೆಗಳು ಕೂಡ ಸಾಗಿದೆ. ಇದಕ್ಕೆ ಕಾಲ ಹಿಡಿಯಬಹುದು. ಒಂದೆರಡು ವರ್ಷದಲ್ಲಿ ಈ ಪ್ರಕ್ರಿಯೆ ಸಂಪೂರ್ಣ ಪೂರ್ಣಗೊಳ್ಳಲಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ. ಕುವೆಂಪು ಅವರ ಕಾವ್ಯಗಳ ಜತೆಗೆ ಅವರ ಸಮಗ್ರ ನಾಟಕಗಳನ್ನೂ ತಮಿಳು ಭಾಷೆಗೆ ಭಾಷಾಂತರಿಸಬೇಕಂಬ ಆಲೋಚನೆ ಪ್ರಾಧಿಕಾರದ ಮುಂದೆ ಇದೆ. ಸಮಗ್ರ ಕಾವ್ಯಗಳ ತಮಿಳು ಭಾಷಾಂತರ ಕಾರ್ಯ ಮುಗಿದ ತಕ್ಷಣ ನಾಟಕಗಳನ್ನು ತಮಿಳಿಗೆ ಭಾಷಾಂತರಿಸುವ ಕಾರ್ಯ ನಡೆಯಲಿದೆ ಎಂದಿದ್ದಾರೆ.

Advertisement

ಕುವೆಂಪು ಅವರ ಸಮಗ್ರ ಕಾವ್ಯಗಳನ್ನು ತಮಿಳಿಗೆ ಭಾಷಾಂತರಿಸಬೇಕು ಎಂಬ ಆಶಯ ಪ್ರಾಧಿಕಾರದ ಮುಂದೆ ಇದೆ. ಈ ನಿಟ್ಟಿನಲ್ಲಿ ಮಾತುಕತೆಗಳು ಕೂಡ ಸಾಗಿದೆ. ಇದಕ್ಕೆ ಕಾಲ ಹಿಡಿಯಬಹುದು. ಒಂದೆರಡು ವರ್ಷದಲ್ಲಿ ಈ ಪ್ರಕ್ರಿಯೆ ಸಂಪೂರ್ಣ ಪೂರ್ಣಗೊಳ್ಳಲಿದೆ. ಅವರ ನಾಟಕಗಳನ್ನೂ ತಮಿಳಿಗೆ ಭಾಷಾಂತರಿಸುವ ಉದ್ದೇಶವಿದೆ.
– ಡಾ.ಕೆ.ಮರುಳಸಿದ್ದಪ್ಪ, ಕುವೆಂಪು ಭಾಷಾ ಭಾರತಿ ಪ್ರಧಿಕಾರದ ಅಧ್ಯಕ್ಷ

ನಾವೆಲ್ಲರೂ ದ್ರಾವಿಡ ಭಾಷೆಯ ಸೋದರರು. ಕುವೆಂಪು ಅವರ ಸಾಹಿತ್ಯಗಳು, ನಾಟಕಗಳು ಆಂಗ್ಲ, ಹಿಂದಿ ಭಾಷೆಗಳಿಗೆ ಭಾಷಾಂತರಿಸುವುದು ಬೇರೆ ವಿಚಾರ.ಆದರೆ, ಅವು ತೆಲಗು, ತಮಿಳು ಮತ್ತು ಮಲೆಯಾಳಂ ಸೇರಿದಂತೆ ನಮ್ಮ ನೆರೆ ಹೊರೆಯ ಭಾಷೆಗಳಲ್ಲಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಬಂದಿರುವ ಆಲೋಚನೆ ಪ್ರಶಂಸನೀಯ.
– ಹಂಪ.ನಾಗರಾಜಯ್ಯ, ಸಾಹಿತಿ

ಕುವೆಂಪು ಅವರ ಸಮಗ್ರ ಕಾವ್ಯಗಳು ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಬಾರದು. ಎಲ್ಲಾ ಭಾಷೆಗಳಿಗೂ ತರ್ಜುಮೆಯಾಗಿ ಅಲ್ಲಿನ ಓದುಗರಿಗೂ ಲಭ್ಯವಾಗಬೇಕು. ಸಮರ್ಥ ಭಾಷಾಂತರಗಾರರಿಂದಲೇ ಈ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕೆಲಸ ಸಂತಸ ಪಡುವಂತಹದ್ದು.
 - ವೈದೇಹಿ, ಖ್ಯಾತ ಲೇಖಕಿ

ಕುವೆಂಪು ಅವರ ಕವಿತೆಗಳ ಪೈಕಿ ಶೇ. 60ರಿಂದ 70ರಷ್ಟು ಕವಿತೆಗಳು ಸರಳ ಮತ್ತು ನೇರವಾಗಿವೆ. ಭಾಷಾಂತರಕ್ಕೂ ಒಗ್ಗುತ್ತವೆ. ರಾಮಾಯಾಣ ದರ್ಶನಂ ಸೇರಿದಂತೆ ಕೆಲವು ಕಾವ್ಯಗಳನ್ನು ಬಿಟ್ಟು ಉಳಿದವು ಅನುವಾದಕ್ಕೆ ಸುಲಭವಾಗಿವೆ. ಕುವೆಂಪುರ ಅವರ ಕಾವ್ಯಗಳು ತಮಿಳು ಅಷ್ಟೇ ಅಲ,ತೆಲುಗು ಸೇರಿದಂತೆ ಎಲ್ಲಾ ಭಾಷಗಳಲ್ಲೂ ದೊರೆಯುವಂತಾಗಬೇಕು.
– ಬಿ.ಆರ್‌.ಲಕ್ಷ್ಣಣ್‌ ರಾವ್‌, ಕವಿ

ಕುವೆಂಪು ಅವರ ಸಮಗ್ರ ಕಾವ್ಯಗಳನ್ನು ತಮಿಳಿಗೆ ಭಾಷಾಂತರಿಸುವ ಕಾರ್ಯಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮುಂದಾಗಿರುವುದು ಸಂತೋಷದ ವಿಷಯ. ಕುವೆಂಪು ಅಷ್ಟೇ ಅಲ್ಲ, ತೇಜಸ್ವಿ, ಲಂಕೇಶ್‌ ಮತ್ತು ಅನಂತ ಮೂರ್ತಿ ಸೇರಿದಂತೆ ಹಲವು ಸಾಹಿತಿಗಳ ಕೃತಿಗಳು ಬೇರೆ-ಬೇರೆ ಭಾಷೆಗಳಿಗೆ ಭಾಷಾಂತರವಾಗಬೇಕು.
– ಕುಂ.ವೀರಭದ್ರಪ್ಪ, ಖ್ಯಾತ ಕಾದಂಬರಿಕಾರ

– ದೇವೇಶ್‌ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next