ಬೆಳಗಾವಿ: ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ದಿಗಾಗಿ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ವಿವಿಧ ಬಸವ ಪರ ಸಂಘಟನೆಗಳು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಒತ್ತಾಯಿಸಿವೆ.
ಗುರುವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ, ಇತ್ತೀಚೆಗೆ ಕೆಲವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದಾರೆ.
ಈ ಮೂಲಕ ಕೆಲ ಜನರು ಸರಕಾರದ ಹಾಗೂ ಸಮಾಜದ ದಾರಿ ತಪ್ಪಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪಿಸುವದರಿಂದ ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತರಿಗೆ ಯಾವ ಪ್ರಯೋಜನ ಆಗುವದಿಲ್ಲ. ವೀರಶೈವ ಲಿಂಗಾಯತ ಎಂದು ಲಿಂಗಾಯತರ ಯಾವ ದಾಖಲೆಗಳಲ್ಲಿಯೂ ಇಲ್ಲ. ಕೇವಲ ಲಿಂಗಾಯತ ಎಂಬ ದಾಖಲೆ ಇದೆ.
ಮನವಿ ಸಲ್ಲಿಸಿದವರ ಶಾಲಾ ದಾಖಲೆಗಳಲ್ಲೂ ಲಿಂಗಾಯತ ಎಂಬ ದಾಖಲೆ ಇದೆ. ಈ ಎಲ್ಲ ಸತ್ಯಗಳನ್ನು ಪರಿಶೀಲಿಸಿ, ಮುಖ್ಯಮಂತ್ರಿಗಳು ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪಿಸಬೇಕು. ನಿಗಮಕ್ಕೆ ಗೌರವಯುತವಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷ ಶಂಕರ ಗುಡಸ್ ಮಾತನಾಡಿ, ರಾಜ್ಯ ಸರಕಾರವೇ ಹೊರಡಿಸಿರುವ ಸುತ್ತೋಲೆಗಳಲ್ಲಿ ಲಿಂಗಾಯತ ಧರ್ಮವು 101 ಜಾತಿ, ಉಪ ಜಾತಿ, ಪಂಗಡ, ಒಳಪಂಗಡಗಳನ್ನು ಹೊಂದಿದೆ. 101 ಒಳಪಂಗಡಗಳಲ್ಲಿ ವೀರಶೈವವೂ ಒಂದು. ಎಲ್ಲಿಯೂ ವೀರಶೈವ ಲಿಂಗಾಯತ ಎಂಬುದಿಲ್ಲ. ಲಿಂಗಾಯತದಲ್ಲಿ ವೀರಶೈವ ಇದೆಯೇ ಹೊರತು. ವೀರಶೈವದಲ್ಲಿ ಲಿಂಗಾಯತ ಇಲ್ಲ.
ಒಳಪಂಗಡ ಅಥವಾ ಉಪಪಂಗಡದ ಹೆಸರಿನಿಂದ ಅಭಿವೃದ್ದಿ ನಿಗಮ ಸ್ಥಾಪಿಸುವದು ನ್ಯಾಯ ಸಮ್ಮತವೂ ಅಲ್ಲ. ಕಾನೂನು ಸಮ್ಮತವೂ ಅಲ್ಲ. ಹಾಗಾಗಿ ಯಾವುದೊ ಒತ್ತಡಕ್ಕೆ ಮಣಿದು ವೀರಶೈವ ಲಿಂಗಾಯತ ಎಂಬ ನಿಗಮ ಸ್ಥಾಪಿಸಬಾರದು ಎಂದು ಆಗ್ರಹಿಸಿದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಅರವಿಂದ ಪರುಶೆಟ್ಟಿ, ಸಮಾಜದ ಮುಖಂಡರಾದ ಎಸ್.ಜಿ. ಸಿದ್ನಾಳ, ರಾಜಶೇಖರ ಭೋಜ, ವಿ.ಕೆ.ಪಾಟೀಲ, ರಾಜು ಕುಂದಗೋಳ, ಮುಂತಾದವರು ಉಪಸ್ಥಿತರಿದ್ದರು.