Advertisement

ಸ್ವಪಕ್ಷೀಯರ ವಿರುದ್ಧವೇ ರಾಯರಡ್ಡಿ ಗರಂ

07:00 AM Sep 11, 2017 | Team Udayavani |

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ಇದೇ ಮೊದಲ ಬಾರಿಗೆ ಸ್ವ ಪಕ್ಷದ ಮಾಜಿ ಮಂತ್ರಿಗಳ, ಸಚಿವರ ವಿರುದ್ಧ ಮತ್ತು ಪಂಚಪೀಠ, ವಿರಕ್ತ ಪೀಠದ ಸ್ವಾಮಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಸವ ಸಮಿತಿ ವತಿಯಿಂದ ಭಾನುವಾರ ನಗರದ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪನ ದಿನಾಚರಣೆ ಹಾಗೂ ಡಾ.ಬಸಪ್ಪ ದಾನಪ್ಪ ಜತ್ತಿಯವರ 105ನೇ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,  ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ಹೊಂದಿರುವ ಪ್ರತಿಷ್ಠೆಯಿಂದ ಲಿಂಗಾಯತ ಸಮಾಜದ ಮರ್ಯಾದೆ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಆಗಲೇ ಬೇಕು. ವೈಚಾರಿಕತೆ ಹಾಗೂ ಸಮಾಜ ಉದ್ಧಾರಕ್ಕಾಗಿ ಪಂಚಪೀಠ ಹಾಗೂ ವಿರಕ್ತ ಮಠದ ಸ್ವಾಮೀಜಿಗಳು ಅಹಂ ಬಿಟ್ಟು ಒಂದಾಗಬೇಕು. ಮಾಜಿ ಸಚಿವ ಶ್ಯಾಮನೂರ ಶಿವಶಂಕರಪ್ಪ, ಸಚಿವರಾದ ಎಂ.ಬಿ.ಪಾಟೀಲ್‌, ಈಶ್ವರ್‌ ಖಂಡ್ರೆ ಮೊದಲಾದವರು ಭಿನ್ನ ಭಿನ್ನವಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದು ಕಟುವಾಗಿ ಸೂಚಿಸಿದರು.

ಸಿಂಧು ಸಂಸ್ಕೃತಿಯಿಂದ ಹಿಂದು ಧರ್ಮ ಹುಟ್ಟಿಕೊಂಡಿದೆ. ಇಲ್ಲಿರುವ ವರ್ಣಭೇದ ನೀತಿ, ಜಾತಿ ವ್ಯವಸ್ಥೆ ಹಾಗೂ ಪುರುಷ ಪ್ರಧಾನ್ಯತೆಯಿಂದ ಮುಕ್ತರಾಗಲು ಮತ್ತು ಬಸವ ತತ್ವಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸಲು ಲಿಂಗಾಯತ ಪ್ರತ್ಯೇಕ ಧರ್ಮದ ಅವಶ್ಯಕತೆ ಇದೆ. ಲಿಂಗಾಯತ ಧರ್ಮದ ಉಪ ಜಾತಿಗಳ ಆಚರಣೆ ಬಸವ ತತ್ವಕ್ಕೆ ವಿರುದ್ಧವಾಗಿದೆ. ರಾಜಕಾರಣಿಗಳಿಂದ ಮತ್ತು ಸ್ವಾಮೀಜಿಗಳಿಂದಲೇ ಲಿಂಗಾಯತ ಜಾತಿಯಲ್ಲಿ ಉಪಜಾತಿಗಳ ಆಚರಣೆ ಜೀವಂತವಾಗಿದೆ. 

ಜಾತಿಗೆ ಒಂದು ಮಠ ನಿರ್ಮಾಣ ಮಾಡುವುದುನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಲಿಂಗಾಯತ ಸಮಾಜ ದುರಂತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಇಂದಿನ ರಾಜಕಾರಣಿಗಳಲ್ಲಿ ಹಾಗೂ ರಾಜಕೀಯ ಪಕ್ಷದಲ್ಲಿ ಪ್ರಾಮಾಣಿಕತೆ, ಸಜ್ಜನಿಕೆ, ನೇರ ನಿಷ್ಠುರತೆ ಇಲ್ಲದಾಗಿದೆ. ಇದಕ್ಕೆ ಸಮಾಜ ಹಾಗೂ ವಿದ್ವಾಂಸರೂ ಹೊರತಾಗಿಲ್ಲ. ಹಿರಿಯರ ಆದರ್ಶವನ್ನು ಮರೆತ ಪರಿಣಾಮವಾಗಿ ವ್ಯವಸ್ಥೆಯೇ ಕುಲಗೆಟ್ಟು ಹೋಗಿದೆ. ಎಲ್ಲರೂ ಭವಿಷ್ಯದ ಬಗ್ಗೆಯೇ ಯೋಚಿಸುತ್ತಿದ್ದಾರೆ. ಇತಿಹಾಸವನ್ನು ಯಾರೂ ಓದುತ್ತಿಲ್ಲ. ವರ್ಣ ವ್ಯವಸ್ಥೆ, ಜಾತಿ ಪದ್ಧತಿ, ಅಂಧಶ್ರದ್ಧೆ, ಕಂದಾಚಾರಗಳಿಂದ ಮನುಷ್ಯ ಮನುಷ್ಯನಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಅಸ್ಪೃಶ್ಯತೆ ನಿವಾರಣೆಯಾಗಿಲ್ಲ, ಸ್ತ್ರೀಯರಿಗೆ ದೇವಸ್ಥಾನದಲ್ಲಿ ಪೂಜೆ ಮಾಡುವ ಅವಕಾಶ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಸಚಿವ ಅನಂತ್‌ ಕುಮಾರ್‌ ಮಾತನಾಡಿ, ನೂರಾರು ವರ್ಷಗಳ ಹಿಂದೆಯೇ ಬಸವಣ್ಣನವರು ಸಂಸತ್‌ ಮಾದರಿಯಲ್ಲೇ ಅನುಭವ ಮಂಟಪ ನಡೆಸುತ್ತಿದ್ದರು. ಜಾಗತಿಕ, ವಿಶ್ವ ಮಾನವೀಯ ಮೌಲ್ಯವನ್ನು ಆ ಕಾಲದಲ್ಲಿಯೇ ಬಸವಣ್ಣನವರು ಎತ್ತಿ ತೋರಿಸಿದ್ದಾರೆ. ಬಿ.ಡಿ.ಜತ್ತಿಯವರ ಆತ್ಮಚರಿತ್ರೆ ಕಿರು ಪುಸ್ತಕವಾಗಿ ಬರಬೇಕು ಮತ್ತು ಅದು ಶಾಲಾ ಮಕ್ಕಳಿಗೂ ತಲುಪುವಂತೆ ಆಗಬೇಕು. ಅತ್ಯಂತ ದೊಡ್ಡ ಸಾಧನೆ ಮಾಡಿದ ಬಿ.ಡಿ.ಜತ್ತಿಯವರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.

ಬಸವ ತತ್ವ ಪ್ರತಿಪಾದನೆಯಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಲಾಯಿತು. ಪ್ರೊ. ಟಿ.ಆರ್‌.ಮಹಾದೇವಯ್ಯ
ನವರು ಸಂಪಾದಿಸಿದ ಬಸವೇಶ್ವರ ಸಮಕಾಲೀನರು ಗ್ರಂಥ ಲೋಕಾರ್ಪಣೆ ಮಾಡಲಾಯಿತು.ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌.ದೇವಾಡಿಗ, ಕೋಶಾಧಿಕಾರಿ ಡಿ.ಎಂ.ಶ್ರೀಧರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next