Advertisement

ಲಿಂಗಾಯತ ಧರ್ಮ ಸಂಕಟದಲ್ಲಿ ಸಿಎಂ

06:00 AM Mar 15, 2018 | |

ಬೆಂಗಳೂರು: ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡುವ ಕುರಿತು ತೀರ್ಮಾನ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

Advertisement

ವೀರಶೈವ ಲಿಂಗಾಯತ ಸಮುದಾಯವರು ಪ್ರತ್ಯೇಕ ಧರ್ಮದ ಮಾನ್ಯತೆಗೆ ಮನವಿ ಸಲ್ಲಿಸಿದ ನಂತರ ರಾಜಕೀಯ ಲಾಭ ಲೆಕ್ಕಾಚಾರದಲ್ಲಿ ಪರೋಕ್ಷವಾಗಿ ಲಿಂಗಾಯತ ಸಮುದಾಯದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟದಲ್ಲಿಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿರುವುದು ಇಕ್ಕಟ್ಟಿಗೆ ಸಿಲುಕಿಸಿದೆ.

ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡುವ ಬಗ್ಗೆ ರಾಜ್ಯ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳಬಹುದು ಎಂಬ ಸಮಿತಿಯ ಶಿಫಾರಸ್ಸು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರವೇ ಲಿಂಗಾಯತರಿಗೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿದರೆ ಮುಸ್ಲಿಂ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಇದು ಮುಖ್ಯಮಂತ್ರಿ ಹಿಂದೇಟು ಹಾಕಲು ಕಾರಣ ಎನ್ನಲಾಗಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯವನ್ನೂ ಪಡೆದಿದ್ದಾರೆ ಎನ್ನಲಾಗಿದೆ. ಚುನಾವಣೆ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ವಿರೋಧ ಕಟ್ಟಿಕೊಂಡರೆ ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆಗೆ ಕಾರಣವಾಗುವ ಆತಂಕ ಮುಖ್ಯಮಂತ್ರಿಗೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಬುಧವಾರದ ಸಂಪುಟ ಸಭೆಯಲ್ಲಿ ಲಿಂಗಾಯತ ವಿಷಯ ಅಂತಿಮವಾಗುತ್ತದೆ ಎಂಬ ನಂಬಿಕೆಯಲ್ಲಿ ಲಿಂಗಾಯತ ಬಣದ ಎಂ.ಬಿ. ಪಾಟೀಲ್‌, ವಿನಯಯ್‌ ಕುಲಕರ್ಣಿ,  ಬಸವರಾಜ್‌ ರಾಯರೆಡ್ಡಿ, ಡಾ. ಶರಣ ಪ್ರಕಾಶ್‌ ಪಾಟೀಲ್‌ ಉತ್ಸಾಹದಲ್ಲಿದ್ದರು, ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್‌ ಆರೋಗ್ಯದ ಸಮಸ್ಯೆ ಹೇಳಿ ಸಂಪುಟ ಸಭೆಯನ್ನು ಸೋಮವಾರಕ್ಕೆ ಮೂಂದೂಡಿದ್ದಕ್ಕೆ ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾರೋಗ್ಯದ ನೆಪ ಹೇಳಿ ಇತರ ಕಾರ್ಯಕ್ರಮಗಳಿಗೆ ಹಾಜರಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅವರ ದಿಢೀರ್‌ ನಿರ್ಧಾರದ ಬಗ್ಗೆ ಲಿಂಗಾಯತ ನಾಯಕರು  ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕೆಂಬ ಒತ್ತಾಯ ಲಿಂಗಾಯತ ಬಣದ ಸಚಿವರದ್ದಾಗಿದ್ದು, ಲಿಂಗಾಯತ ವೀರಶೈವ ಎರಡೂ ಬಣಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವೇ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿ ನಂತರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆನ್ನುವುದು ವೀರಶೈವ ಬಣದ ಸಚಿವರಾದ ಈಶ್ವರ್‌ ಖಂಡ್ರೆ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಒತ್ತಾಯವಾಗಿದೆ.

ನೀತಿ ಸಂಹಿತೆ ನಿರೀಕ್ಷೆ: ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ವಿಷಯದಲ್ಲಿ ಲಿಂಗಾಯತರ ಪರವಾಗಿ ಪರೋಕ್ಷವಾಗಿ ಬೆಂಬಲಿಸಿದ್ದ ಸಿದ್ದರಾಮಯ್ಯ ಈಗ  ವೀರಶೈವರ ವಿರೋಧ ಕಟ್ಟಿಕೊಳ್ಳುವುದರ ಜೊತೆಗೆ ಅಲ್ಪ ಸಂಖ್ಯಾತ ಸಮುದಾಯದ ಕೆಂಗಣ್ಣಿಗೂ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಕಾಲ ವಿಳಂಬ ಮಾಡಿ, ನೀತಿ ಸಂಹಿತೆ ಜಾರಿಯಾದರೆ, ಗಂಡಾಂತರದಿಂದ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಅಲ್ಲದೇ ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿಯೂ ಒಮ್ಮತ ಮೂಡದೇ ಇದ್ದರೆ, ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿಯ ಸಾಧಕ ಬಾಧಕ ಪರಿಶೀಲಿಸಲು ಸಂಪುಟ ಉಪ ಸಮಿತಿ ರಚನೆ ಮಾಡಿ ಸಾಗ ಹಾಕುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತರಿಗೆ ಅಲ್ಪ ಸಂಖ್ಯಾತ ಮಾನ್ಯತೆ ನೀಡುವ ತೀರ್ಮಾನ ಕೈಗೊಂಡರೆ ಮುಸ್ಲಿàಮರು ಹಾಗೂ ವೀರಶೈವ ಸಮುದಾಯಗಳ ವಿರೋಧ ಕಟ್ಟಿಕೊಳ್ಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲಿಯೇ ಈ ರೀತಿಯ ಜಾರಿಕೊಳ್ಳುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಗುರು ವಿರಕ್ತ ಮಠಾಧೀಶರಿಂದ ಇಂದು ಸಿಎಂ ಭೇಟಿ
ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡಬಾರದು ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೊಪ್ಪಳ ಗವಿ ಮಠದ ಸಂಗನ ಬಸವ ಸ್ವಾಮೀಜಿ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಗುರು ವಿರಕ್ತ ಮಠಾಧೀಶರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.

ಲಿಂಗಾಯತ ಸಮುದಾಯವನ್ನು ವೀರಶೈವದಿಂದ ಪ್ರತ್ಯೇಕಿಸಿ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿದರೆ, ರಾಜ್ಯ ಸರ್ಕಾರದ ವಿರುದ್ಧ ಬೃಹತ್‌ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆಯನ್ನೂ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next