ರಾಜ್ಯದಲ್ಲಿ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಮುನ್ನೆಲೆಗೆ ಬಂದಿದ್ದು ರಾಜ್ಯದ ಲಿಂಗಾಯತ ಸಮುದಾಯಕ್ಕೆ ಸೇರಿದ ವಿವಿಧ ಮಠಗಳ ಸ್ವಾಮೀಜಿಗಳು ಈ ಸಂಬಂಧ ರಾಜ್ಯ ಸರಕಾರದ ಗಮನ ಸೆಳೆದಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಸ್ವಾಮೀಜಿಗಳು ಮುಂದಿಟ್ಟಿರುವ ಬೇಡಿಕೆ, ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಅತ್ತ ಉಗುಳಲೂ ಆಗದ, ಇತ್ತ ನುಂಗಲೂ ಆಗದ ನಾಲಗೆ ಮೇಲಣ ಬಿಸಿ ತುಪ್ಪದಂತಾಗುವ ಎಲ್ಲ ಸಾಧ್ಯತೆಗಳಿವೆ.
2018ರ ವಿಧಾನಸಭೆ ಚುನಾವಣೆಗೂ ಮುನ್ನ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮವಾಗಿ ಘೋಷಿಸುವಂತೆ ಆಗ್ರಹಿಸಿ ಭಾರೀ ಹೋರಾಟಗಳು ನಡೆದಿದ್ದವು. ಈ ವೇಳೆ ಆಗಿನ ಕಾಂಗ್ರೆಸ್ ಸರಕಾರ ಈ ಬಗ್ಗೆ ಪರಿಶೀಲನೆ ನಡೆಸಲು ನ್ಯಾ| ಎಚ್.ಎನ್.ನಾಗಮೋಹನದಾಸ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ನೀಡಿದ ವರದಿಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಮಂಡಿಸಿ, ಹಿಂದುಳಿದ ವರ್ಗಗಳ ಇಲಾಖೆಯ ಅಭಿಪ್ರಾಯದಂತೆ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿತ್ತು.
ಆದರೆ ಕೇಂದ್ರ ಸರಕಾರ ಈ ಪ್ರಸ್ತಾವನೆಯನ್ನು ವಾಪಸು ಕಳುಹಿಸುವ ಮೂಲಕ ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಯ ಪರವಾಗಿನ ರಾಜ್ಯ ಸರಕಾರದ ನಿಲುವಿಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ರಚನೆಯ ವಿಷಯವನ್ನು ಬಿಜೆಪಿ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ಧರ್ಮ ವಿಭಜನೆಗೆ ಮುಂದಾಗಿದೆ ಎಂದು ನೇರವಾಗಿ ಆರೋಪಿಸಿತ್ತು. ಇದು ಚುನಾವಣ ಫಲಿತಾಂಶದ ಮೇಲೂ ಪರಿಣಾಮ ಬೀರಿ ಕಾಂಗ್ರೆಸ್‌ಗೆ ಹಿನ್ನಡೆಯನ್ನುಂಟು ಮಾಡಿತ್ತು. ಬಳಿಕ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮತ್ತು ಬಿಜೆಪಿ ಈ ವಿಚಾರದಲ್ಲಿ ತಟಸ್ಥ ಧೋರಣೆಯನ್ನು ಅನುಸರಿಸಿದ್ದರಿಂದ ಈ ವಿಚಾರ ಹಿನ್ನೆಲೆಗೆ ಸರಿದಿತ್ತು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಪ್ರತಿಧ್ವನಿಸಲಾರಂಭಿಸಿದೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ರವಿವಾರ ಧಾರವಾಡದಲ್ಲಿ ಆಯೋಜಿಸಲಾಗಿದ್ದ ಲಿಂಗಾಯತ ಧರ್ಮ ಚಿಂತನ ಶಿಬಿರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಯ ಅಗತ್ಯತೆ ಮತ್ತು ಮಹತ್ವದ ಕುರಿತಂತೆ ಚರ್ಚಿಸಲಾಯಿತಲ್ಲದೆ ಸರಕಾರ ಒಕ್ಕೂಟದ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ಆರಂಭಿಸುವ ಕುರಿತಂತೆ ಸಮಾಲೋಚನೆ ನಡೆಸಲಾಗಿದೆ. ಸಭೆಯ ಅಂತ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪದಾಧಿಕಾರಿಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ಸಂಬಂಧ ಕೇಂದ್ರ ಸರಕಾರಕ್ಕೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಅಲ್ಲದೆ ಈ ಸಂಬಂಧ ರಾಜ್ಯದ ಸಂಸದರುಗಳಿಗೂ ಮನವರಿಕೆ ಮಾಡಿ, ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ಒಂದು ವೇಳೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಸಕಾರಾತ್ಮಕ ಸ್ಪಂದನೆ ಲಭಿಸದೇ ಹೋದಲ್ಲಿ ಕಾನೂನು ಹೋರಾಟ ನಡೆಸಲೂ ಒಕ್ಕೂಟ ಚಿಂತನೆ ನಡೆಸಿರುವುದಾಗಿಯೂ ತಿಳಿಸಿದ್ದಾರೆ. ಸ್ವಾಮೀಜಿಗಳ ಈ ನಡೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ಬಲುದೊಡ್ಡ ಸವಾಲಾಗಲಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳು ಪ್ರತ್ಯೇಕ ಧರ್ಮಕ್ಕಾಗಿನ ಹೋರಾಟಕ್ಕೆ ಮರುಚಾಲನೆ ನೀಡಲು ಸಜ್ಜಾಗಿರುವುದು ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುವ ಸಾಧ್ಯತೆಗಳಿವೆ. ಇದೊಂದು ಅತ್ಯಂತ ಸೂಕ್ಷ್ಮ ಮತ್ತು ಧಾರ್ಮಿಕ ನಂಬಿಕೆಯ ವಿಚಾರವಾಗಿರುವುದರಿಂದ ರಾಜ್ಯ ಸರಕಾರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅತ್ಯಂತ ಜಾಣ್ಮೆಯ ಮತ್ತು ಸಮಚಿತ್ತದ ನಡೆಯನ್ನು ಅನುಸರಿಸಬೇಕು.
ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಭಾರತೀಯ ರೈಲ್ವೇ ಜನರ ಪಾಲಿಗೆ ಜೀವನಾಡಿಯಾಗಿದೆ. ದೇಶದ ವಾಣಿಜ್ಯ ರಾಜಧಾನಿಯಾದ ಮುಂಬಯಿಯಲ್ಲಂತೂ ರೈಲು ಸೇವೆ ಜನರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿದ್ದು ಇಲ್ಲಿನ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತ ಅನುಭವ. ಕಳೆದೊಂದು ದಶಕದ ಅವಧಿಯಲ್ಲಿ ಭಾರತೀಯ ರೈಲ್ವೇ ಸಾಕಷ್ಟು ಸುಧಾರಣೆಗಳನ್ನು ಕಂಡಿದೆ. ರೈಲ್ವೇ ಇಲಾಖೆ ತನ್ನ ಕಾರ್ಯಾಚರಣೆ ಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು, ಸುರಕ್ಷೆಗೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ. ಅಷ್ಟು ಮಾತ್ರವಲ್ಲದೆ ರೈಲು ಹಳಿಗಳ ವಿಸ್ತರಣೆ, ನಿಲ್ದಾಣಗಳ ಅಭಿವೃದ್ಧಿ, ಹೊಸದಾಗಿ ರೈಲು ಮಾರ್ಗಗಳ ನಿರ್ಮಾಣ, ನಗರಗಳ ನಡುವೆ ಹೊಸ ರೈಲುಗಳ ಓಡಾಟ, ರೈಲು ಸೇವೆಗಳಲ್ಲಿ ಸುಧಾರಣೆ ಮತ್ತಿತರ ಕ್ರಮಗಳ ಮೂಲಕ ಭಾರತೀಯರೈಲ್ವೇ ಮತ್ತಷ್ಟು ಜನಸ್ನೇಹಿ ಯಾಗಿ ಕಾರ್ಯಾಚರಿಸುತ್ತಿದೆ.