ಬೆಳಗಾವಿ: ಕಾಂತರಾಜ ಆಯೋಗದ ವರದಿ ವಿರೋಧಿಸಿ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳು ಸಹಿ ಸಂಗ್ರಹ ನಡೆಸಿದ ಬೆನ್ನಲ್ಲೇ ಈಗ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಸಚಿವರು, ಶಾಸಕರು ಕೂಡ ಅದೇ ಹಾದಿ ತುಳಿದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ವಾಗಿದೆ. ಜತೆಗೆ ಪಕ್ಷಬೇಧ ಮರೆತು ಎಲ್ಲ ಶಾಸಕರು ಕೈ ಜೋಡಿ ಸಿದ್ದು ಸಹಿಸಂಗ್ರಹ ಅಭಿಯಾನಕ್ಕೆ ಆನೆಬಲ ಬಂದಿದೆ.
ಆಯೋಗದ ವರದಿ ವಿರೋಧಿಸಿ ಅಖೀಲ ಭಾರತ ವೀರಶೈವ ಮಹಾಸಭಾ ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ಪ್ರಬಲ ಸಚಿವರಾಗಿರುವ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಶಿವಾನಂದ ಎಸ್. ಪಾಟೀಲ್ ಸೇರಿದ್ದಾರೆ. ಕಾಂಗ್ರೆಸ್‌ನ ಹಲವು ಶಾಸಕರಲ್ಲದ ನಾಯಕರು, ಸಿ.ಸಿ. ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಬಿಜೆಪಿ ಶಾಸಕರು ಕೂಡ ಸಹಿ ಹಾಕಿದ್ದಾರೆ. ಒಕ್ಕಲಿಗರ ಸಂಘದ ಬಳಿಕ ವೀರಶೈವ ಮಹಾಸಭಾ ಆರಂಭಿಸಿರುವ ಈ ಅಭಿಯಾನ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಶಾಸಕ ಡಾ| ಶಾಮನೂರು ಶಿವಶಂಕರಪ್ಪ ನೇತೃತ್ವದ ನಿಯೋಗ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವೈಜ್ಞಾನಿಕ ಮತ್ತು ವಾಸ್ತವಾಂಶ ಆಧಾರಿತ ಹೊಸ ಜಾತಿ ಜನಗಣತಿ ನಡೆಸುವಂತೆ ಮನವಿ ಸಲ್ಲಿಸಿದೆ.
ಈಗಾಗಲೇ ಮಹಾಸಭಾ ಅನೇಕ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಭೆಗಳಲ್ಲಿ ಪ್ರಸ್ತಾವಿಸಿದಾಗ ಅನೇಕರು ನಮ್ಮ ಮನೆಗೆ ಸರಕಾರಿ ಅಧಿಕಾರಿಗಳು ಬಂದಿಲ್ಲ ಮತ್ತು ಕುಟುಂಬದ ಯಾವುದೇ ಮಾಹಿತಿ ಪಡೆದಿಲ್ಲ. ಕಚೇರಿ ಯಲ್ಲೇ ಕುಳಿತು ವರದಿ ಸಿದ್ಧಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖೀಸಲಾಗಿದೆ.