ಶಿವಮೊಗ್ಗ: ಸಂತೋಷ ಪಾಟೀಲ್ ಸಾವಿನ ಬೆನ್ನಲ್ಲೇ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳಲು ವೇದಿಕೆ ಸಿದ್ಧವಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಶಿವಮೊಗ್ಗದಲ್ಲಿ ಲಿಂಗಾಯತ ಮುಖಂಡರ ಸಭೆ ನಡೆದಿದೆ.
ಸಂತೋಷ ಪಾಟೀಲ್ ಅವರನ್ನು ಅಷ್ಟು ಹೀನಾಯವಾಗಿ ನಡೆಸಿಕೊಂಡರೂ ಬಿಜೆಪಿಯಲ್ಲಿರುವ ಸಮುದಾಯದ ಲೀಡರ್‌ಗಳು ತುಟಿ ಬಿಚ್ಚಲಿಲ್ಲ. ಅಷ್ಟೇ ಅಲ್ಲ ಸಮುದಾಯದ ಸ್ವಾಮೀಜಿಗಳು ಧ್ವನಿ ಎತ್ತಲಿಲ್ಲ. ನಮ್ಮ ಸಮುದಾಯ ಏಕೆ ಹೀಗಾಯ್ತು ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ತಾಲೂಕುವಾರು ಮುಖಂಡರು ಮನೆ-ಮನೆಗೆ ತಲುಪಿ ದೇಣಿಗೆ ಸಂಗ್ರಹಿಸಲಿದ್ದಾರೆ. ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಲಿಂಗಾಯತ ಸಮುದಾಯ ಇದ್ದು ಪ್ರತಿಯೊಬ್ಬರೂ ಕೈಲಾದಷ್ಟು ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ.
ಇದಕ್ಕಾಗಿ ಸಂತೋಷ್ ಪಾಟೀಲ್ ಭಾವಚಿತ್ರವುಳ್ಳ ವಾಹನ ಶಿವಮೊಗ್ಗ ನಗರದಲ್ಲಿ ಸಂಚರಿಸಲಿದೆ. ಅದಕ್ಕೂ ಮೊದಲು ಸಮುದಾಯದ ಹಿರಿಯ ಮುಖಂಡರು ದೇಣಿಗೆ ಡಬ್ಬಿ ಹಿಡಿದು ಲಿಂಗಾಯತರು ಹೆಚ್ಚು ಭೇಟಿ ಕೊಡುವ ದೇವಸ್ಥಾನಗಳಿಗೆ, ಸಮುದಾಯದ ಹಿರಿಯರ ಮನೆಗೆ ಸಂಚರಿಸಲಿದೆ. ನಂತರ ಸಂಗ್ರಹವಾದ ಹಣವನ್ನು ಸಂತೋಷ ಪಾಟೀಲ್ ಕುಟುಂಬಕ್ಕೆ ನೀಡಲು ತೀರ್ಮಾನಿಸಲಾಗಿದೆ.
ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಮೌನವಾಗಿರುವುದಕ್ಕೆ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ನಾಲ್ಕು ಬಾರಿ ಸಿಎಂ ಆಗಿರುವುದಕ್ಕೆ ಬಿಜೆಪಿ ಕಾರಣವಲ್ಲ. ಸಮುದಾಯದ ಮುಖಂಡರೆನ್ನುವ ಕಾರಣಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಲಾಗಿದೆ. ಆದರೆ ಅವರು ಏಕೆ ಮಾತನಾಡುತ್ತಿಲ್ಲ. ಕೆಲಸ ಮಾಡಿಸಿಕೊಂಡು, ಹೀನಾಯವಾಗಿ ನಡೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ. ಇದನ್ನು ಖಂಡಿಸಬೇಕಿತ್ತು. ಸಾಂತ್ವನ ಹೇಳಿ ಸಹಾಯಧನ ನೀಡಬೇಕಿತ್ತು. ಆದರೆ ಅದ್ಯಾವುದೂ ಆಗಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಸಂತೋಷ ಪಾಟೀಲ್‌ಗೆ ಶಿವಮೊಗ್ಗದಿಂದಲೇ ಅನ್ಯಾಯವಾಗಿದ್ದು ದೇಣಿಗೆ ಅಭಿಯಾನವನ್ನು ಶಿವಮೊಗ್ಗದಿಂದಲೇ ಆರಂಭಿಸಿ ನಾಡಿನಾದ್ಯಂತ ವಿಸ್ತರಿಸಲು ಯೋಚಿಸಲಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಮುಂಚೂಣಿಯಲ್ಲಿದ್ದಾರೆ. ಪಕ್ಷಾತೀತವಾಗಿ ಕಾರ್ಯಕ್ರಮ ರೂಪಿಸಲು ರೂಪುರೇಷೆ ಸಿದ್ಧಗೊಂಡಿದೆ.
–ಶರತ್ ಭದ್ರಾವತಿ