Advertisement
ವೀರಶೈವ ಮಹಾಸಭೆಗೆ ಲಿಂಗಾಯತ ಪದ ಸೇರಿಸಬೇಕೆಂದು ದಶಕಗಳಿಂದಲೂ ಬೇಡಿಕೆ ಇತ್ತು. ಈ ಬಗ್ಗೆ ವೀರಶೈವ ಮಹಾಸಭೆಯಲ್ಲಿ ಹಲವು ಬಾರಿ ಚರ್ಚೆಯಾಗಿದೆ. ಆದರೆ, ಅಂತಿಮ ತೀರ್ಮಾನ ಕೈಗೊಂಡಿಲ್ಲ. ಭಾನುವಾರ ನಡೆಯುವ ವೀರಶೈವ ಮಹಾಸಭೆಯ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಮಹಾಸಭೆಗೆ ವೀರಶೈವದ ಜತೆಗೆ ಲಿಂಗಾಯತ ಪದ ಸೇರಿಸುವ ಕುರಿತಂತೆಯೂ ವಿಷಯ ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Related Articles
Advertisement
ಹೆಸರು ಬದಲಾವಣೆ ಅಜೆಂಡಾ: ಭಾನುವಾರ ನಡೆಯುವ ವಾರ್ಷಿಕ ಸಾಮಾನ್ಯ ಸಭೆಯ ನಂತರ 15 ವರ್ಷಗಳ ನಂತರ ವಿಶೇಷ ಸಾಮಾನ್ಯ ಸಭೆಯನ್ನು ಪ್ರತ್ಯೇಕವಾಗಿ ನಡೆಸಲು ಮಹಾಸಭೆ ನಿರ್ಧರಿಸಿದೆ. ಸಾಮಾನ್ಯ ಸಭೆಗೆ ಸುಮಾರು 16 ಸಾವಿರ ಸದಸ್ಯರಿದ್ದು, ಎಲ್ಲರಿಗೂ ಆಹ್ವಾನಿಸಲಾಗಿದೆ. ಆ ಸಭೆಯಲ್ಲಿ ಪ್ರಮುಖವಾಗಿ ಮಹಾಸಭೆಗೆ ನಡೆಯುವ ಚುನಾವಣೆ ನಿಯಮಗಳ ಬದಲಾವಣೆ ಮಾಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಆದರೆ, ಸಭೆಯಲ್ಲಿ ಪ್ರಮುಖವಾಗಿ ಮಹಾಸಭೆಯ ಹೆಸರು ಬದಲಾಯಿಸಬೇಕೇ ಅಥವಾ ಈಗಿರುವ ಹೆಸರನ್ನೇ ಮುಂದುವರಿಸಬೇಕೆ ಎಂಬ ಕುರಿತು ಚರ್ಚೆ ನಡೆಯಲಿದೆ.
ಮಹಾಸಭೆ ಒಲವು: ಇದುವರೆಗೂ ಲಿಂಗಾಯತ ಹೆಸರು ಸೇರಿಸಲು ಹಿಂದೇಟು ಹಾಕುತ್ತಿದ್ದ ವೀರಶೈವ ಮಹಾಸಭೆ ಸಂಘಕ್ಕೆ ವೀರಶೈವ ಲಿಂಗಾಯತ ಮಹಾಸಭೆ ಎಂದು ಮರು ನಾಮಕರಣ ಮಾಡಲು ಒಲವು ತೋರಿದೆ ಎನ್ನಲಾಗಿದೆ. ಆದರೆ, ಲಿಂಗಾಯತ ಪ್ರತ್ಯೇಕ ಹೋರಾಟಗಾರರು ವೀರಶೈವರಿಗೂ ಲಿಂಗಾಯತರಿಗೂ ಯಾವುದೇ ಸಂಬಂಧವಿಲ್ಲ ಎಂಬ ವಾದ ಮಾಡುತ್ತಿರುವುದರಿಂದ ಸದ್ಯ ಯಾವುದೇ ತೀರ್ಮಾನ ತೆಗೆದುಕೊಂಡರೂ ಲಿಂಗಾಯತ ಹೋರಾಟಗಾರರಿಗೆ ಮಣಿದ ಹಾಗಾಗುತ್ತದೆಂಬ ಮಾತು ಮಹಾಸಭೆಯ ಮುಖಂಡರಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಸದ್ಯಕ್ಕೆ ಹೆಸರು ಬದಲಾವಣೆ ಮಾಡಬಾರದೆಂಬ ವಾದವೂ ಕೇಳಿ ಬರುತ್ತಿದೆ.
ಲಿಂಗಾಯತ ಮುಖಂಡರ ಗೈರು?:ವೀರಶೈವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೋರಾಟ ನಡೆಸುತ್ತಿರುವ ಲಿಂಗಾಯತ ಮುಖಂಡರು ಮಹಾಸಭೆಯ ಸಾಮಾನ್ಯ ಸಭೆಯಿಂದ ದೂರ ಉಳಿಯುವ ಸಾಧ್ಯತೆಯಿದೆ. ಭಾನುವಾರ ಮಹಾಸಭೆಯ ಸಾಮಾನ್ಯ ಸಭೆ ನಡೆಯಲಿದೆ. ಎಲ್ಲ ಸದಸ್ಯರಿಗೂ ಅಧಿಕೃತ ಆಹ್ವಾನ ಕಳುಹಿಸಲಾಗಿದೆ. ಅನೇಕ ವಿಷಯಗಳ ಚರ್ಚೆ ಹಾಗೂ ಬೈಲಾ ತಿದ್ದುಪಡಿ ಕುರಿತು ಚರ್ಚಿಸಲಾಗುತ್ತದೆ. ಮಹಾಸಭೆಯ ಹೆಸರು ಬದಲಾಯಿಸುವ ಕುರಿತಂತೆಯೂ ವಿಶೇಷ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
– ರೇಣುಕಾ ಪ್ರಸಾದ್, ವೀರಶೈವ ಮಹಾಸಭೆ ಪ್ರಧಾನ ಕಾರ್ಯದರ್ಶಿ – ಶಂಕರ ಪಾಗೋಜಿ