Advertisement

ಗೂಡ್ಸ್‌ ವಾಹನದಲ್ಲೇ ಪ್ರಯಾಣ

03:13 PM Sep 04, 2019 | Naveen |

ಲಿಂಗಸುಗೂರು: ಸುಪ್ರೀಂಕೋರ್ಟ್‌ ಸರಕು ವಾಹನದಲ್ಲಿ ಜನರ ಸಾಗಾಟ ನಿಷೇಧಿಸಿ ಆದೇಶ ಹೊರಡಿಸಿದ್ದರೂ ತಾಲೂಕಿನ ಕೆಲ ಸರ್ಕಾರಿ ಶಾಲೆ ಶಿಕ್ಷಕರು ಮಂಗಳವಾರ ವಿದ್ಯಾರ್ಥಿಗಳನ್ನು ಸರಕು ವಾಹನದಲ್ಲಿ ಕುರಿಗಳಂತೆ ತುಂಬಿಕೊಂಡು ಕ್ರೀಡಾಕೂಟಕ್ಕೆ ಕರೆದುಕೊಂಡ ಹೋದ ದೃಶ್ಯ ಕಂಡುಬಂತು.

Advertisement

ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಮಂಗಳವಾರ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ಕಾಳಾಪುರ, ಗುಂತಗೋಳ, ದೇವರಭೂಪುರ ಸಿಆರ್‌ಸಿ ವ್ಯಾಪ್ತಿಯ 24 ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದವು. ತಾಲೂಕಿನ ಕಾಳಾಪುರ ಗ್ರಾಮ ಸೇರಿ ಆರು ಶಾಲೆಗಳ ವಿದ್ಯಾರ್ಥಿಗಳನ್ನು ಸರಕು ಸಾಗಾಟ ವಾಹನದಲ್ಲಿ ಕರೆದುತಂದಿದ್ದಾರೆ. ಕಾಳಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸರಕು ವಾಹನದಲ್ಲಿ ಒಬ್ಬರ ಮೇಲೆ ಒಬ್ಬರು ಬೀಳುವಂತೆ ನಿಂತು ಪ್ರಯಾಣಿಸಿದ್ದು ಕಂಡುಬಂತು. ಇದೇ ವಾಹನದಲ್ಲಿ ಶಿಕ್ಷಕಿ ಕೂಡ ಇದ್ದರು.

ಪಾಠ ಕಲಿಯದ ಶಿಕ್ಷಕರು: ಸಿರವಾರದಲ್ಲಿ ಇತ್ತೀಚಿಗೆ ವಿದ್ಯಾರ್ಥಿಗಳನ್ನು ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗಿ ಸರಕು ಸಾಗಿಸುವ ಟಾಟಾ ಏಸ್‌ ವಾಹನದಲ್ಲಿ ಮರಳುವಾಗ ವಾಹನ ಪಲ್ಟಿಯಾಗಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಆದರೂ ಇದರಿಂದ ಎಚ್ಚೆತ್ತುಕೊಳ್ಳದ ತಾಲೂಕಿನ ಕೆಲ ಶಾಲೆಗಳ ಶಿಕ್ಷಕರು ಸರಕು ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಲಾ ಮಕ್ಕಳನ್ನು ಸಭೆ, ಸಮಾರಂಭ, ಕ್ರೀಡಾಕೂಟ ಮತ್ತು ಶಾಲೆಗಳಿಗೆ ಸರಕು ಸಾಗಾಟ ವಾಹನದಲ್ಲಿ ಕರೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಕಾಟಾಚಾರಕ್ಕೆ ಕಾಯ್ದೆ ಪಾಲಿಸುತ್ತಿದೆ. ವಿದ್ಯಾರ್ಥಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಡಿಡಿಪಿಐ, ಪೊಲೀಸ್‌ ಮತ್ತು ಆರ್‌ಟಿಒ ಕೂಡ ವಿಫಲವಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next