Advertisement
ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ತೀವ್ರವಾಗಿ ಹೆಣಗಬೇಕಿರುವ ಕಾರಣ ರೈತರು ಇತ್ತೀಚೆಗೆ ಪಟ್ಟಣದ ಟಿಎಪಿಎಂಸಿಯಲ್ಲಿನ ಖರೀದಿ ಕೇಂದ್ರದ ಬಳಿ ಪ್ರತಿಭಟನೆ ನಡೆಸಿದರು. ಹೊನ್ನಹಳ್ಳಿಯ ರೈತನೊಬ್ಬ ಲಿಂಗಸುಗೂರು ಪಟ್ಟಣದಲ್ಲಿ ಆರಂಭಿಸಿರುವ ತೊಗರಿ ಖರೀದಿ ಕೇಂದ್ರಕ್ಕೆ ಬಂದು ಪಹಣಿಯ ಬೆಳೆ ಕಾಲಂನಲ್ಲಿ ತೊಗರಿ ಎಂದು ದಾಖಲಾಗಿದೆ. ಫ್ರುಟ್ಸ್ ಸಾಫ್ಟ್‌ವೇರ್‌ನಲ್ಲಿ ತೆಗೆದು ನೋಡಿದಾಗ ಎಲ್ಲವೂ ಸರಿಯಾಗಿದೆ. ಆದರೂ ಖರೀದಿ ಕೇಂದ್ರದಲ್ಲಿ ತೊಗರಿ ಮಾರಾಟ ಮಾಡಲು ನೋಂದಣಿ ಆಗುತ್ತಿಲ್ಲ. ಏಕೆಂದರೆ ಈ ಹಿಂದೆ ಕಂದಾಯ ಇಲಾಖೆ ನಡೆಸಿದ ಬೆಳೆ ಸರ್ವೇ ಸಂದರ್ಭದಲ್ಲಿ ಬೇರೆ ಬೆಳೆ ನಮೂದು ಮಾಡಿದ್ದಾರೆ. ಇದರಿಂದ ತೊಗರಿ ಖರೀದಿ ಕೇಂದ್ರದಲ್ಲಿ ನಿಮ್ಮ ಹೆಸರು ಅಪ್‌ಲೋಡ್ ಆಗುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಬಹುತೇಕ ರೈತರಿಗೆ ಸಮಸ್ಯೆ ಎದುರಾಗಿದೆ. ಫ್ರುಟ್ಸ್ ತಂತ್ರಾಂಶದ ಮೂಲಕ ಎಫ್‌ಐಡಿ ರೈತರ ಗುರುತಿನ ಸಂಖ್ಯೆ ನೀಡಿ ಆಧಾರ್ ಸಂಖ್ಯೆ ಬಳಸಿದರೆ ಹೆಸರು, ಬೆಳೆ ಹೊಂದಾಣಿಕೆ ಆಗುತ್ತಿಲ್ಲ. ಕೆಲವು ರೈತರದು ಹೊಂದಾಣಿಕೆಯಾದರೂ ತೊಗರಿ ಕೇಂದ್ರದ ಸಾಫ್ಟ್‌ವೇರ್‌ನಲ್ಲಿ ನೋಂದಣಿ ಆಗುತ್ತಿಲ್ಲ. ಅಲ್ಲದೇ ತೊಗರಿ ಖರೀದಿ ಕೇಂದ್ರದಲ್ಲಿನ ರೈತರಿಗೆ ತೊಗರಿ ಮಾರಾಟ ಮಾಡಲು ನೀಡಬೇಕಿರುವ ದಾಖಲೆಗಳ ಮಾಹಿತಿ ಸಮಪರ್ಕವಾಗಿ ಸಿಗುತ್ತಿಲ್ಲ ಹೀಗಾಗಿ ಲಿಂಗಸುಗೂರು ತೊಗರಿ ಖರೀದಿ ಕೇಂದ್ರಕ್ಕೆ ರೈತರು ಮುತ್ತಿಗೆ ಹಾಕಿ ಖರೀದಿ ಕೇಂದ್ರದಲ್ಲಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಖರೀದಿ ನಿಯಮ: ತೊಗರಿ ಉತ್ಪನ್ನ ಖರೀದಿಸುವ ಮುನ್ನ ರೈತರು ನೀಡಿರುವ ವಿವರ ನ್ಯಾಫೆಡ್ ಸಂಸ್ಥೆಯ ತಂತ್ರಾಂಶದೊಂದಿಗೆ ಭೂಮಿ (ಯುಐಡಿಎಐ), ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿ ನಂತರವೇ ನೊಂದಾಯಿಸಿಕೊಳ್ಳತಕ್ಕದ್ದು. ಒಂದು ವೇಳೆ ಬೆಳೆ ದರ್ಶಕದಲ್ಲಿ ಬೆಳೆ ಬೆಳೆಯದೇ ಇರುವುದು ಕಂಡುಬಂದಲ್ಲಿ ಅಂತಹ ರೈತರಿಗೆ ಕಂದಾಯ ಇಲಾಖೆ ಅಧಿಕಾರಿಗಳು ದೃಢೀಕೃತ ಪಹಣಿ ಪಡೆದು ರೈತರನ್ನು ಮತ್ತು ಪಹಣಿಯಲ್ಲಿರುವ ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಡೆದು ನೋಂದಣಿ ಮಾಡಿಕೊಳ್ಳಬೇಕಿದೆ.