ಶಿವರಾಜ ಕೆಂಭಾವಿ
ಲಿಂಗಸುಗೂರು: ಶತಮಾನದ ಕನಸಿನ ಯೋಜನೆ ಗದಗ-ವಾಡಿ ರೈಲ್ವೆ ಮಾರ್ಗದ ಸಮೀಕ್ಷೆ ಆಮೆವೇಗದಲ್ಲಿ ನಡೆದಿದ್ದರಿಂದ ಈ ಭಾಗದ ಜನರ ಕನಸು ನನಸಾಗದೇ ಉಳಿದಿದೆ.
1901ರಲ್ಲಿ ಬ್ರಿಟಿಷರು ಗದಗ-ವಾಡಿ ರೈಲ್ವೆ ಯೋಜನೆ ರೂಪಿಸಿದ್ದರು. ಸ್ವಾತಂತ್ರ್ಯಾ ನಂತರದಲ್ಲಿ 1957ರಲ್ಲಿ ಈ ಯೋಜನೆಗೆ ಶಿಲಾನ್ಯಾಸ ಕೂಡಾ ನೆರವೇರಿಸಲಾಗಿತ್ತು. ಆದರೆ ಯೋಜನೆಯು ಹಲವು ಕಾರಣಗಳಿಂದ ನೆನೆಗುದಿಗೆ ಬಿತ್ತು. 2013-14ನೇ ಸಾಲಿನಲ್ಲಿ ಯೋಜನೆಗೆ ಮರುಜೀವ ನೀಡಿ ಜಾರಿಗೊಳಿಸಲಾಗಿದೆ. ರೈಲ್ವೆ ಮಾರ್ಗ ಮತ್ತು ಮಾರ್ಗ ಮಧ್ಯದ ಪಟ್ಟಣ, ಹಳ್ಳಿಗಳಲ್ಲಿ ರೈಲ್ವೆ ನಿಲ್ದಾಣಕ್ಕಾಗಿ ಕೆಲವೆಡೆ ಭೂಸ್ವಾಧೀನ ಕಾರ್ಯವೂ ನಡೆಯುತ್ತಿದೆ.
23 ಹಳ್ಳಿಗಳಲ್ಲಿ ರೈಲ್ವೆ ಮಾರ್ಗ: ಗದಗ-ವಾಡಿ ರೈಲು ಮಾರ್ಗ ಒಟ್ಟು 257.26 ಕಿ.ಮೀ ಉದ್ದದ ಯೋಜನೆಯಾಗಿದೆ. ಲಿಂಗಸುಗೂರು ತಾಲೂಕಿನಲ್ಲಿ 69 ಕಿ.ಮೀ. ರೈಲ್ವೆ ಮಾರ್ಗ ಹಾದು ಹೋಗಲಿದೆ. ಇದಕ್ಕಾಗಿ ತಾಲೂಕಿನ 1,085 ಎಕರೆ ಜಮೀನು ಗುರುತಿಸಿ ಸರ್ವೇಗೆ ಮುಂದಾಗಿದೆ. ಕುಷ್ಟಗಿ ತಾಲೂಕಿನಿಂದ ಲಿಂಗಸುಗೂರು ತಾಲೂಕಿನ ಆರ್ಯಭೋಗಾಪುರ ಗ್ರಾಮದ ಮುಖಾಂತರ ಮಾರ್ಗ ಆರಂಭಗೊಂಡು ಮಾಕಾಪುರ, ತಲೆಕಟ್ಟು, ಮರಳಿ, ಬನ್ನಿಗೋಳ, ಜಾಂತಾಪುರ, ಮುದಗಲ್, ಕಡದರಹಾಳ, ತೆರಿಬಾವಿ, ಬುದ್ದಿನ್ನಿ, ಕಳ್ಳಿಲಿಂಗಸುಗೂರು, ಹುನುಕುಂಟಿ, ಕಸಬಾಲಿಂಗಸುಗೂರು, ಹುಲಿಗುಡ್ಡ, ಕರಡಕಲ್, ಹೊನ್ನಳ್ಳಿ, ಯರಡೋಣಾ, ಕೋಠಾ, ಚಿಕ್ಕಲದೊಡ್ಡಿ, ದೇವರಭೂಪುರ, ಪರಾಂಪುರ, ಗುಂತಗೋಳ, ಗುರುಗುಂಟಾ ಮಾರ್ಗವಾಗಿ ದೇವದುರ್ಗ, ಸುರಪುರ ತಾಲೂಕಿನ ಮಾರ್ಗಗಳ ಮಾರ್ಗವಾಗಿ ವಾಡಿಗೆ ತಲುಪಲಿದೆ.
ವರ್ಷದ ನಂತರ ಆದೇಶ: ರೈಲ್ವೆ ಯೋಜನೆಗಾಗಿ ಲಿಂಗಸುಗೂರು ತಾಲೂಕಿನ 23 ಗ್ರಾಮಗಳ 1,085 ಎಕರೆ ಭೂಮಿ ಸ್ವಾದೀನ ಪಡಿಸಿಕೊಳ್ಳುತ್ತಿದ್ದು, ಈ ಜಮೀನುಗಳ ಜೆಎಂಸಿ ಮಾಡಲು ಹಾಗೂ ಸದರಿ ಜಮೀನಿನಲ್ಲಿ ಕಟ್ಟಡ, ಬಾವಿ, ಗಿಡ, ಮರ ಹಾಗೂ ಇತರೆ ಮಾಲ್ಕಿಗಳನ್ನು ಗುರುತಿಸಿ ವರದಿ ನೀಡುವಂತೆ ಕಲಬುರಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು 2018ರ ಸೆ 4ರಂದು ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ ಇಲ್ಲಿನ ಸರ್ವೇ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗಿದ್ದು ಒಂದು ವರ್ಷದ ನಂತರ. ಅಂದರೆ 2019ರ ಜುಲೈ 8ರಂದು ಭೂ ಸರ್ವೇ ಮಾಡುವಂತೆ ತಾಲೂಕಿನ ಭೂಮಾಪಕರಿಗೆ ಆದೇಶ ನೀಡಿದ್ದಾರೆ.
ಮಂದಗತಿಯ ಸರ್ವೆ: ತಾಲೂಕಿನ ಒಟ್ಟು 69 ಕಿ.ಮೀ. ಮಾರ್ಗದ ಸರ್ವೇ ಆಗಬೇಕಿದ್ದು, ಈ ವರೆಗೆ ಕೇವಲ 20 ಕಿ.ಮೀ. ಸರ್ವೇ ಆಗಿದೆ. ಇನ್ನೂ 49 ಕಿ.ಮೀ. ಸರ್ವೇ ಮಾಡಬೇಕಾಗಿದೆ. 23 ಗ್ರಾಮಗಳ ಪೈಕಿ 9 ಗ್ರಾಮಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. ತಲೆಕಟ್ಟು, ಬನ್ನಿಗೋಳ, ಆರ್ಯಭೋಗಾಪುರ, ಮಾಕಾಪುರ, ಜಾಂತಾಪುರ, ಮರಳಿ, ಹುಲಿಗುಡ್ಡ, ಕರಡಕಲ್ ಗ್ರಾಮಗಳಲ್ಲಿ ಜೆಎಂಸಿ ಮಾಡಲಾಗಿದೆ. ಇನ್ನೂ 14 ಗ್ರಾಮಗಳಲ್ಲಿ ಸರ್ವೇ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಈ ಬಗ್ಗೆ ಜಿಲ್ಲಾಧಿ ಕಾರಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದ್ದು, ಭೂಮಾಪಕರು ಕೂಡ ಆಮೆಗತಿಯಲ್ಲಿ ಸರ್ವೇ ನಡೆಸುತ್ತಿದ್ದಾರೆ.
ಕುಷ್ಟಗಿ ತಾಲೂಕಲ್ಲಿ ಪೂರ್ಣ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಈಗಾಗಲೇ ಗದಗ-ವಾಡಿ ಮಾರ್ಗದ ಯೋಜನೆಯ ಭೂ ಸರ್ವೇ ಕಾರ್ಯ ಪೂರ್ಣಗೊಂಡು ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಅಲ್ಲಿನ ಸಂಸದರು ಅಡಿಗಲ್ಲು ನೆರವೇರಿಸಿದ್ದಾರೆ. ರೈಲ್ವೆ ನಿಲ್ದಾಣ ಕಾರ್ಯ ಭರದಿಂದ ಸಾಗಿದೆ. ಆದರೆ ಲಿಂಗಸುಗೂರು ತಾಲೂಕಿನಲ್ಲಿ ಸರ್ವೇ ಕಾರ್ಯ ಅತ್ಯಂತ ಮಂದಗತಿಯಲ್ಲಿ ಸಾಗಿದೆ. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.