Advertisement

ಪೊಲೀಸ್‌ ವಸತಿಗೃಹಗಳು ಶಿಥಿಲ

11:13 AM Jun 27, 2019 | Naveen |

ಶಿವರಾಜ ಕೆಂಭಾವಿ
ಲಿಂಗಸುಗೂರು:
ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ಸುಮಾರು 65 ವರ್ಷಗಳ ಹಿಂದೆ ನಿರ್ಮಿಸಿದ 30 ವಸತಿಗೃಹಗಳು ಸಂಪೂರ್ಣ ಶಿಥಿಲಗೊಂಡಿದ್ದು, ಜನರಿಗೆ ರಕ್ಷಣೆ ನೀಡುವ ಪೊಲೀಸರಿಗೆ ಮನೆಯಲ್ಲಿ ರಕ್ಷಣೆ ಇಲ್ಲದಂತಾಗಿದೆ.

Advertisement

ಪಟ್ಟಣದಲ್ಲಿ ಬ್ರಿಟೀಷರ ಆಡಳಿತ ಅವಧಿಯಲ್ಲಿ 1935ರಲ್ಲಿ ಪೊಲೀಸ್‌ ಠಾಣೆ ನಿರ್ಮಿಸಲಾಗಿದೆ. ಸ್ವಾತಂತ್ರ್ಯಾನಂತರ 1955ರ ಸುಮಾರಿಗೆ ಪೊಲೀಸ್‌ ಠಾಣೆ ಆವರಣದಲ್ಲಿ 30 ಮನೆಗಳನ್ನು ನಿರ್ಮಿಸಲಾಗಿದೆ. ಈ ಮನೆಗಳು ಈಗ ಶಿಥಿಲಗೊಂಡಿವೆ. ಮಳೆಯಾದರೆ ಸೋರುತ್ತವೆ. ಕೆಲವೊಮ್ಮೆ ಮೇಲ್ಛಾವಣಿ ಕಾಂಕ್ರೀಟ್ ಪದರು ಉದುರುತ್ತದೆ. ಹೀಗಾಗಿ ಪೊಲೀಸರು ಭಯದಲ್ಲೇ ಮನೆಯಲ್ಲಿ ಕಾಲ ಕಳೆಯುವಂತಾಗಿದೆ. ಇನ್ನು ಕೆಲ ಮನೆಗಳು ಸಂಪೂರ್ಣ ಬೀಳುವ ಸ್ಥಿತಿಯಲ್ಲಿರುವುದರಿಂದ ಕೆಲ ಪೊಲೀಸರು ಇದ್ದುದರಲ್ಲೇ ಸುಸ್ಥಿತಿಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಠಾಣೆ ವಸತಿಗೃಹಗಳ ಸುತ್ತಮುತ್ತ ಕೊಳಚೆ ಸಂಗ್ರಹವಾಗಿದೆ. ಜಾಲಿಮುಳ್ಳಿನ ಗಿಡಗಳು ಬೆಳೆದಿವೆ. ಸೊಳ್ಳೆ, ಕ್ರಿಮಿ ಕೀಟಗಳ ಕಾಟವೂ ಹೆಚ್ಚಾಗಿದೆ. ಮನೆಗಳ ಹಿಂಬದಿಯ ಚರಂಡಿಗಳ ಸ್ವಚ್ಛತೆ ಮಾಡದ್ದರಿಂದ ಹೂಳು ತುಂಬಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕೆಲ ವರ್ಷಗಳ ಹಿಂದೆ ಪೊಲೀಸ್‌ ಠಾಣೆ ಆವರಣದಲ್ಲಿ ಪಿಎಸ್‌ಐ ಸೇರಿ ಪೇದೆಗಳಿಗಾಗಿ 12 ಹೊಸ ಮನೆ ನಿರ್ಮಿಸಲಾಗಿದೆ. ಡಿವೈಎಸ್ಪಿ ಕಚೇರಿ ಬಳಿ 12 ವಸತಿ ಗೃಹ ನಿರ್ಮಿಸಲಾಗಿದೆ.

ದುಸ್ಥಿತಿ: ಪೊಲೀಸ್‌ ಕ್ವಾಟರ್ಸ್‌ನ ಮೈದಾನದಲ್ಲಿ ಪೊಲೀಸರು ಜಪ್ತಿ ಮಾಡಿದ ಮರಳು, ವಾಹನಗಳನ್ನು ಸಂಗ್ರಹಿಸಲಾಗಿದೆ. ಹೀಗಾಗಿ ಪೊಲೀಸ್‌ ಸಿಬ್ಬಂದಿ ಮತ್ತು ಅವರ ಮಕ್ಕಳಿಗೆ ಆಟವಾಡಲು ಮೈದಾನವೇ ಇಲ್ಲದಂತಾಗಿದೆ. ಒಳಾಂಗಣ ಕ್ರೀಡೆಗಾಗಿ ನಿರ್ಮಿಸಿದ ಕಟ್ಟಡ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಪಿಎಸ್‌ಐ ಹಳೆ ಮನೆ ಕುಸಿದಿದೆ. ಕ್ವಾಟರ್ಸ್‌ನ ಸುತ್ತಲಿನ ಕಾಂಪೌಂಡ್‌ ಅಲ್ಲಲ್ಲಿ ಕುಸಿದಿದೆ. ಇಂತಹ ಸಂಕಷ್ಟದ ವಾತಾವರಣದಲ್ಲಿ ಪೊಲೀಸರು ಬದುಕು ಸಾಗಿಸುವಂತಾಗಿದೆ. ಕೆಲವು ಪಾಳು ಬಿದ್ದ ಕಟ್ಟಡಗಳು ಹಾಗೂ ಹಳೆ ಮನೆಗಳನ್ನು ನೆಲಸಮಗೊಳಿಸಿ ಹೊಸ ವಸತಿಗೃಹಗಳನ್ನು ನಿರ್ಮಿಸಿ ಪೊಲೀಸರಿಗೆ ಅನುಕೂಲ ಮಾಡಿಕೊಡಲು ಇಲಾಖೆ ಮೇಲಾಧಿಕಾರಿಗಳು ಕ್ರಮ ವಹಿಸಬೇಕಿದೆ.

ಪೊಲೀಸ್‌ ಕ್ವಾಟರ್ಸ್‌ ಕಾಂಪೌಂಡ್‌ ನಿರ್ಮಾಣಕ್ಕಾಗಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 5 ಲಕ್ಷ ರೂ. ಅನುದಾನ ನೀಡುವಂತೆ ಶಾಸಕರಿಗೆ ಮನವಿ ಮಾಡಿದ್ದೇವೆ.
ದಾದಾವಲಿ,
ಪಿಎಸ್‌ಐ, ಲಿಂಗಸುಗೂರು

Advertisement

Udayavani is now on Telegram. Click here to join our channel and stay updated with the latest news.

Next