ಶಿವರಾಜ ಕೆಂಬಾವಿ
ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಹೊರವಲಯದಲ್ಲಿ ವಿವಿಧ ಇಲಾಖೆಗಳ ವಸತಿ ನಿಲಯಗಳ ಕಟ್ಟಡಗಳು ಸಿದ್ಧಗೊಂಡಿದ್ದರೂ ಉದ್ಘಾಟನೆ ಮಾಡದ್ದರಿಂದ ವಸತಿ ನಿಲಯಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುವಂತಾಗಿದೆ.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಇಲಾಖೆಗಳ ಹಾಸ್ಟೆಲ್ ಗಳ ಸ್ವಂತ ಕಟ್ಟಡಗಳನ್ನು ಕರಡಕಲ್ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾಗಿದೆ. ಸರ್ಕಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಮುಖಾಂತರ ಕೋಟ್ಯಂತರ ರೂ.ಅನುದಾನ ಒದಗಿದ್ದು, ವಸತಿ ನಿಲಯಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಸ್ವಂತ ಕಟ್ಟಡಕ್ಕಾಗಿ 4.85 ಕೋಟಿ ರೂ. ಅನುದಾನ ಒದಗಿಸಿತ್ತು. 2017ರಲ್ಲಿ ಕಾಮಗಾರಿ ಪ್ರಾರಂಭವಾಗಿ ಮಂದಗತಿಯಲ್ಲಿ ಸಾಗಿ, ಸದ್ಯ ಪೂರ್ಣಗೊಂಡಿದೆ. ಈ ಕಟ್ಟಡದ ಪಕ್ಕದಲ್ಲೇ 4.43 ಕೋಟಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ನಿರ್ಮಿಸಲಾಗಿದೆ.
ಕಾಮಗಾರಿ ಪೂರ್ಣಗೊಂಡು ವರ್ಷವಾದರೂ ಉದ್ಘಾಟನೆ ಆಗಿಲ್ಲ. ತಾಲೂಕಿನ ಈಚನಾಳ ಗ್ರಾಮದಲ್ಲಿ 3.37 ಕೋಟಿ ರೂ. ಅನುದಾನದಲ್ಲಿ ಎಸ್‌ಸಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡ ನಿರ್ಮಿಸಲಾಗಿದೆ. ಅಲ್ಪಸಂಖ್ಯಾತರ ಇಲಾಖೆ ವಸತಿ ನಿಲಯ ಪೂರ್ಣಗೊಂಡು ಎರಡು ವರ್ಷವಾದರೂ ಇನ್ನೂ ಉದ್ಘಾಟಿಸಿಲ್ಲ.
ಸರ್ಕಾರಕ್ಕೆ ಹೊರೆ: ಈ ಎಲ್ಲ ಇಲಾಖೆಗಳ ವಸತಿ ನಿಲಯಗಳನ್ನು ಪಟ್ಟಣದ ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಪ್ರತಿ ಹಾಸ್ಟೆಲ್ ಕಟ್ಟಡಕ್ಕೆ ಮಾಸಿಕ 60 ಸಾವಿರ ರೂ.ದಿಂದ 1.10 ಲಕ್ಷ ರೂ.ವರೆಗೆ ಬಾಡಿಗೆ ನೀಡಲಾಗುತ್ತಿದೆ. ಕೆಲವೊಂದು ಖಾಸಗಿ ಕಟ್ಟಡಕ್ಕೆ ಎರಡು ವರ್ಷ ಕಳೆಯುತ್ತಿದ್ದರೂ ಬಾಡಿಗೆ ಪಾವತಿಸಿಲ್ಲ. ಇಲಾಖೆಗಳು ಕಟ್ಟಡಗಳ ಮಾಲಿಕರಿಗೆ ಲಕ್ಷಾಂತರ ರೂ. ಬಾಕಿ ಪಾವತಿಸಬೇಕಿದೆ. ಇದು ಇಲಾಖೆಗಳಿಗೆ ಹೊರೆಯಾಗಿದೆ. ಸ್ವಂತ ಕಟ್ಟಡಗಳಿಗಾಗಿ ಸರ್ಕಾರ ಕೋಟ್ಯಂತರ ರೂ. ಅನುದಾನ ಒದಗಿಸಿದೆ. ಗುತ್ತಿಗೆದಾರರ
ಕಾಮಗಾರಿ ಪೂರ್ಣಗೊಳಿಸಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉದ್ಘಾಟನೆಗೆ ಮುಂದಾಗಿಲ್ಲ.
ಪರದಾಟ: ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ವಸತಿ ನಿಲಯಗಳಲ್ಲಿ ಸಮರ್ಪಕ ಸೌಲಭ್ಯ ಇಲ್ಲದೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪರದಾಡುವಂತಾಗಿದೆ. ಸ್ವಂತ ಕಟ್ಟಡ ಸಿದ್ಧಗೊಂಡಿದ್ದರೂ ಇಲಾಖೆ ಸುಪರ್ದಿಗೆ ಪಡೆದುಕೊಂಡು ಉದ್ಘಾಟನೆಗೆ ಕ್ರಮವಹಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.