ಲಿಂಗಸುಗೂರು: ಸುವರ್ಣ ಗ್ರಾಮ ಯೋಜನೆ ಸಮರ್ಪಕ ಅನುಷ್ಠಾನಗೊಳ್ಳದ್ದರಿಂದ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಕೈಗೊಂಡ ಕಾಮಗಾರಿ ಅರ್ಧಂಬರ್ಧ ಆಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.
ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯಡಿ 4ನೇ ಹಂತದ ಯೋಜನೆಗೆ ಆಯ್ಕೆ ಮಾಡಲಾಗಿದೆ. ಯೋಜನೆಯಡಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಸಮುದಾಯ ಭವನ, ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬೇಕಾಗಿತ್ತು. ಭೂಸೇನಾ ನಿಗಮದ ಮೂಲಕ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ನಿಗಮದ ಅಧಿಕಾರಿಗಳು ಗ್ರಾಮದೊಳಗಿನ ಕೆಲ ರಸ್ತೆಗಳಿಗೆ ಅರ್ಧಂಬರ್ಧ ಸಿಸಿ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಸಿಸಿ ರಸ್ತೆಗಳು ಇದೀಗ ದುರಸ್ತಿಗೆ ಕಾಯುತ್ತಿವೆ. ಇನ್ನೂ ಕೆಲವೆಡೆ ಸಿಸಿ ರಸ್ತೆ ಹಾಗೂ ಸಮುದಾಯ ಭವನ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡದೇ ಹಾಗೇ ಬಿಟ್ಟಿದ್ದಾರೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಕೈ-ಕಾಲು ಮುರಿತ ಗ್ಯಾರಂಟಿ: ಗ್ರಾಮದೊಳಗಿನ ರಸ್ತೆಗಳು ಅಭಿವೃದ್ಧಿ ಕಾಣದ್ದರಿಂದ ತಗ್ಗುಗಳು ಬಿದ್ದ ರಸ್ತೆಯಲ್ಲೇ ಜನತೆ ಓಡಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಅಲ್ಲದೇ ಈ ರಸ್ತೆಗಳಲ್ಲಿ ಓಡಾಡಲು ಪರದಾಡುವಂತಾಗಿದೆ. ತಾಲೂಕು ಕೇಂದ್ರ ಸ್ಥಾನದಿಂದ ಕೂಗಳತೆಯಲ್ಲಿರುವ ಹೊನ್ನಳ್ಳಿ ಗ್ರಾಮಸ್ಥರ ಪಾಡು ಹೇಳತೀರದಾಗಿದೆ. ಮಳೆಗಾಲ ಬಂತೆಂದರೆ ಸಾಕು ಜನರು ರಸ್ತೆಯಲ್ಲಿ ಓಡಾಡುವಾಗ ಕಾಲು ಜಾರಿ ಬಿದ್ದು ಅನೇಕ ಗಾಯಗೊಂಡ ಘಟನೆಗಳು ಕೂಡ ಜರುಗಿವೆ.
ಒತ್ತಾಯ: ಸುವರ್ಣ ಗ್ರಾಮೋದಯ ಯೋಜನೆಯಡಿ ಬಿಡುಗಡೆಯಾದ ಮೊತ್ತದಲ್ಲಿ ಅರ್ಧ ಕಾಮಗಾರಿ ನಡೆದಿದ್ದು, ಇನ್ನುಳಿದ ಅನುದಾನದಲ್ಲಿ ಕಾಮಗಾರಿ ಇನ್ನೂ ನಡೆಯುತ್ತಿಲ್ಲ, ಇದರಿಂದ ಗ್ರಾಮಗಳಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಗ್ರಾಮಗಳಲ್ಲಿನ ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳು ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸುವರ್ಣ ಗ್ರಾಮ ಯೋಜನೆಯಡಿ ಇನ್ನುಳಿದ ಕಾಮಗಾರಿಗಳ ಬಗ್ಗೆ ಭೂಸೇನಾ ನಿಗಮದಿಂದ ಮಾಹಿತಿ ಪಡೆದು ಅಗತ್ಯ ಕ್ರಮಕ್ಕೆ ಮುಂದಾಗುತ್ತೇನೆ.
••ಗುರುಸಿದ್ದಪ್ಪ,
ಪಿಡಿಒ ಹೊನ್ನಳ್ಳಿ