ಲಿಂಗಸುಗೂರು: ಚಿನ್ನದ ಉತ್ಪಾದನೆಯಲ್ಲಿ ಏಕಸ್ವಾಮ್ಯತೆ ಸಾಧಿಸಿರುವ ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿ ದಾಖಲೆಯ ಚಿನ್ನ ಉತ್ಪಾದಿಸಿದೆ.
2019-20ನೇ ಸಾಲಿನಲ್ಲಿ 1,750 ಕೆಜಿ ಚಿನ್ನ ಉತ್ಪಾದನೆ ಗುರಿ ಇತ್ತು. ಏಪ್ರಿಲ್ 2019ರಿಂದ ಜೂನ್‌ವರೆಗೆ ಮೊದಲ ತ್ತೈಮಾಸಿಕದಲ್ಲಿ 391 ಕೆಜಿ ಚಿನ್ನ ಉತ್ಪಾದನೆ ಮಾಡಿದ್ದರೆ, ಜುಲೈನಲ್ಲಿ 149.67 ಕೆಜಿ, ಆಗಸ್ಟ್‌ನಲ್ಲಿ 145.77 ಕೆಜಿ, ಸೆಪ್ಟೆಂಬರ್‌ನಲ್ಲಿ 136.78 ಕೆಜಿ ಸೇರಿ ಆರು ತಿಂಗಳಲ್ಲಿ 827.595 ಕೆಜಿ ಚಿನ್ನ ಉತ್ಪಾದಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದಾಖಲೆ ಪ್ರಮಾಣದಲ್ಲಿ ಚಿನ್ನ ಉತ್ಪಾದಿಸಲಾಗಿದೆ.
ಅರ್ಧ ವಾರ್ಷಿಕದಲ್ಲಿ ಒಟ್ಟು 835.609 ಕೆಜಿ ಚಿನ್ನ ಉತ್ಪಾದನೆ ಗುರಿ ಪೈಕಿ 827.595 ಕೆಜಿ ಚಿನ್ನ ಉತ್ಪಾದಿಸಿದ್ದು, ಶೇ.98ರಷ್ಟು ಸಾಧನೆ ಮಾಡಿದೆ. ವಾರ್ಷಿಕ ಒಟ್ಟು ಉತ್ಪಾದನೆಯ ಗುರಿ 1,750 ಕೆಜಿ ಪೈಕಿ ಈಗಾಗಲೇ 827.595 ಕೆಜಿ ಉತ್ಪಾದಿಸಿದ್ದು, ಉಳಿದ 922.405 ಕೆಜಿ ಚಿನ್ನವನ್ನು ಇನ್ನುಳಿದ 6 ತಿಂಗಳಲ್ಲಿ ಅಂದರೆ 2019ರ ಅಕ್ಟೋಬರ್‌ದಿಂದ ಮಾರ್ಚ್ 2020ರವರೆಗೆ ಉತ್ಪಾದಿಸುವ ಗುರಿ ಇದೆ.
ಕಳೆದ ವರ್ಷದಿಂದ ಹಟ್ಟಿ ಚಿನ್ನದ ಗಣಿ ಅಧೀನದಲ್ಲಿರುವ ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಹೊಸ ಯೋಜನೆ ಬಂದ್ ಆಗಿರುವುದರಿಂದ ಉತ್ಪಾದನೆಯಲ್ಲಿ ಹಿನ್ನಡೆಯಾಗುವುದು ಎಂಬ ಭೀತಿಯಿತ್ತು. ಬುದ್ದಿನ್ನಿ ಗಣಿಯಿಂದ ಪ್ರತಿ ವರ್ಷ 90ರಿಂದ 100 ಕೆಜಿಯಷ್ಟು ಚಿನ್ನ ಉತ್ಪಾದನೆ ಗುರಿ ಇತ್ತು. ಆದರೆ ರೈತರು-ಆಡಳಿತ ವರ್ಗದ ಮಧ್ಯೆ ತಿಕ್ಕಾಟದಿಂದ ಗಣಿ ಮುಚ್ಚಿ ಹೋಗಿದ್ದರೂ, ಗುರಿ ತಲುಪುವಲ್ಲಿ ಚಿನ್ನದ ಗಣಿ ಕಂಪನಿ ಯಶಸ್ವಿಯಾಗಿದೆ.
ದಾಖಲೆ ಲಾಭ: ಹಟ್ಟಿ ಚಿನ್ನದ ಗಣಿ ಕಂಪನಿ 2017-18ನೇ ಸಾಲಿನಲ್ಲಿ 30 ಕೋಟಿ ಹಾಗೂ 2018-19ನೇ ಸಾಲಿನಲ್ಲಿ 80 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಹಾಗೂ ಹಿಂದಿನ ಎಲ್ಲ ವರ್ಷಗಳಿಗೆ ಹೋಲಿಸಿದರೆ ದಾಖಲೆ ಲಾಭವಾಗಿದೆ.
ಆಡಳಿತ ವರ್ಗದ ವಿಶ್ವಾಸ: ಪ್ರತಿ ವರ್ಷ ಗುರಿಗಿಂತ ಹೆಚ್ಚಿಗೆ ದಾಖಲೆ ಚಿನ್ನ ಉತ್ಪಾದಿಸಿ ತೋರಿಸುತ್ತಿರುವ ಕಾರ್ಮಿಕರ ಶ್ರಮ ಹಾಗೂ ನುರಿತ ಅ ಧಿಕಾರಿಗಳ ಮಾರ್ಗದರ್ಶನ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿರುವ ಕಂಪನಿ ಈ ಬಾರಿಯೂ ದಾಖಲೆ ಪ್ರಮಾಣದ ಚಿನ್ನ ಉತ್ಪಾದನೆ ಮಾಡಿ ತೋರಿಸುವ ವಿಶ್ವಾಸ ಹೊಂದಿದೆ. ಪ್ರತಿ ತಿಂಗಳಿನ ಲೆಕ್ಕಾಚಾರದಲ್ಲಿ ಏನೇ ಏರುಪೇರಾದರೂ ಸಹಿತ ವರ್ಷಾಂತ್ಯಕ್ಕೆ ಗುರಿ ಸಾಧಿಸಿದ ಕೀರ್ತಿ ಚಿನ್ನದ ಗಣಿ ಕಂಪನಿಗಿದೆ.