ಲಿಂಗಸುಗೂರು: ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಅವರು ಪಟ್ಟಣದ ಒಳಬಳ್ಳಾರಿ ಚೆನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದ ಆಸ್ತಿ ಕಬಳಿಸಿದ್ದಾರೆ ಎಂದು ವಿಸಿಬಿ ಸಂಸ್ಥೆ ಅಧ್ಯಕ್ಷ ಸಿಂಧನೂರಿನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಗಂಭೀರ ಆರೋಪ ಮಾಡಿದರು.
ಪಟ್ಟಣದ ವಿಸಿಬಿ ಮಹಾವಿದ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಆನ್ವರಿ ಅವರು ಲಿಂಗಸುಗೂರು ಪಟ್ಟಣದ ವಿಸಿಬಿ ಮಹಾವಿದ್ಯಾಲಯದ ಹೆಸರಿನಲ್ಲಿ ಹಾಗೂ ಸಂಸ್ಥಾಪಕರ ಹೆಸರಿನಲ್ಲಿದ್ದ ಕಟ್ಟಡ ಸೇರಿ ಒಟ್ಟು 7.32 ಎಕರೆ ಜಾಗವನ್ನು 2015-16ರಲ್ಲಿ ತಮ್ಮ ಮಗಳು ಶರಣಮ್ಮ ಅವರಿಗೆ ದಾನವಾಗಿ ನೀಡಿ ದಾನ ಪತ್ರ ನೋಂದಣಿ ಮಾಡಿಸಿದ್ದಾರೆ. 7.32 ಎಕರೆ ಪೈಕಿ 3.32 ಎಕರೆ ಕಾಲೇಜಿನ ಆಟದ ಮೈದಾನ ಜಾಗವನ್ನು 2017-18ರಲ್ಲಿ ಬಿನ್‌ಶೇತ್ಕಿ (ಎನ್‌ಎ) ಮಾಡಿಸಿ ಸ್ಥಳೀಯ ಪುರಸಭೆಯಲ್ಲಿ ನೋಂದಾಯಿಸಿ ವರ್ಗಾವಣೆ ಖಾತಾ ಪಡೆದಿದ್ದಾರೆ. ಇಷ್ಟೆಲ್ಲಾ ವ್ಯವಹಾರ ಮಾಡಿದರೂ ಸಂಸ್ಥೆಯ ಯಾವೊಬ್ಬ ಸದಸ್ಯರ ಗಮನಕ್ಕೆ ಇಲ್ಲದಾಗಿದೆ. ನಂತರ ಈ ಬಗ್ಗೆ ಸುಳಿವು ದೊರೆತ ಹಿನ್ನಲೆಯಲ್ಲಿ ಅಗತ್ಯ ದಾಖಲಾತಿಗಳನ್ನು ಪರಿಶೀಲನೆ ಮಾಡಿದಾಗ ಸಂಸ್ಥಾಪಕರ ಅಸಲಿ ಮುಖ ಅನಾವರಣವಾಗಿದೆ ಎಂದು ಆರೋಪಿಸಿದರು.
ವಿಸಿಬಿ ಶಿಕ್ಷಣ ಸಂಸ್ಥೆಯಡಿಯಲ್ಲಿ ಲಿಂಗಸುಗೂರು, ಗುಡದೂರು, ಸಿಂಧನೂರಿನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇನ್ನೂ ಅನೇಕ ಕೋರ್ಸ್ ತರುವ ಉದ್ದೇಶ ಹೊಂದಲಾಗಿದೆ. ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಸಹಕಾರ ನೀಡಬೇಕಾದ ಮಾಜಿ ಕೇಂದ್ರ ಸಚಿವರು ವೀರನಗೌಡ ಅವರ ಅವಧಿಯಲ್ಲಿ ಖೊಟ್ಟಿ ಸದಸ್ಯರನ್ನು ಮಾಡಿಸಿ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಂಸ್ಥೆಯಲ್ಲಿ 28 ಸದಸ್ಯರಿದ್ದರು. 2015ರಿಂದ ಬೈಲಾ ಪ್ರಕಾರ ಹೊಸ ಸದಸ್ಯರಿಗಾಗಿ ಅರ್ಜಿ ಆಹ್ವಾನಿಸಲಾಗಿ ಸದ್ಯ 305 ಅಧಿಕೃತ ಸದಸ್ಯರನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.
2019ರ ಜೂನ್ 30ರಂದು ಆಡಳಿತ ಮಂಡಳಿ ಚುನಾವಣೆ ನಡೆಸಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಜಿಲ್ಲಾ ನೋಂದಣಾಧಿಕಾರಿಗಳು ಮಾನ್ಯತೆ ಕೊಟ್ಟಿದ್ದರಿಂದ ಚುನಾವಣೆ ನಡೆಸಿ 305 ಸದಸ್ಯರು 2019ರಿಂದ 2022ವರಿಗೆ ಅವಧಿವರೆಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ಸಂಧಾನಕ್ಕೆ ಪ್ರಯತ್ನ: ಸಂಸ್ಥೆಯು ಲಿಂಗಸುಗೂರು, ಗುಡದೂರು ಹಾಗೂ ಸಿಂಧನೂರಲ್ಲಿ ಶಾಲಾ-ಕಾಲೇಜು ಸೇರಿ ಆಸ್ತಿ ಹೊಂದಿದೆ. ಅದರಲ್ಲಿ ಲಿಂಗಸುಗೂರಿನ ಸಂಪೂರ್ಣ ಮಹಾವಿದ್ಯಾಲಯ ಹಾಗೂ ಇಲ್ಲಿನ ಆಸ್ತಿ ನಮಗೆ ಬಿಡಿ ಮತ್ತು ಉಳಿದ ಸಿಂಧನೂರು, ಗುಡುದೂರಿನ ಶಾಲಾ ಕಾಲೇಜು ಮತ್ತು ಆಸ್ತಿಯನ್ನು ನೀವು ತಗೊಳ್ಳಿ ಎಂದು ಅವರು ರಾಜಿ ಸಂಧಾನಕ್ಕೆ ಬೇಡಿಕೆ ಇಟ್ಟಾಗ ನಾವು ಅದು ಸಂಸ್ಥೆಯ ಆಸ್ತಿ. ಮೇಲಾಗಿ ವಳಬಳ್ಳಾರಿ ಅಜ್ಜನವರ ಹೆಸರಲ್ಲಿ ತೆರದಂತ ಸಂಸ್ಥೆ. ಈ ಜಿಲ್ಲೆಯ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಇದ್ದು ಯಾವುದೇ ಕಾರಣಕ್ಕೂ ಸಂಸ್ಥೆಯ ಆಸ್ತಿಯನ್ನು ಯಾರೇ ಸದಸ್ಯರು ತೆಗೆದುಕೊಳ್ಳಲು ಬರುವುದಿಲ್ಲ ಎಂದು ತಿಳಿಸಿ ಸಂಧಾನ ತಿರಸ್ಕರಿಸಿದ್ದಾಗಿ ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಶ್ರೇಣಿಕರಾಜ ಶೇಠ್ , ಉಪಾಧ್ಯಕ್ಷ ಡಾ| ಎಸ್.ವಿ. ಪಾಟೀಲ, ಸೂಗುರಪ್ಪ ಪಾಟೀಲ, ದೊಡ್ಡ ಬಸಪ್ಪಗೌಡ ಇದ್ದರು.