ಲಿಂಗಸುಗೂರು: ಟಿಎಸ್‌ಪಿ, ಎಸ್‌ಸಿಪಿ ಯೋಜನೆಯಡಿ ಕ್ಷೇತ್ರಕ್ಕೆ 5 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ತಾಲೂಕಿನ ಗೋನವಾಟ್ಲ ತಾಂಡಾದಲ್ಲಿ ರವಿವಾರ ತಾಂಡಾ ಅಭಿವೃದ್ಧಿ ನಿಗಮದಿಂದ ಮಂಜೂರಾದ 45 ಲಕ್ಷ ರೂಪಾಯಿ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಸಚಿವರು ಕ್ಷೇತ್ರಕ್ಕೆ 5 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಈ ಅನುದಾನದಲ್ಲಿ ಗೋನವಾಟ್ಲ ತಾಂಡಾಕ್ಕೆ 1 ಕೋಟಿ ರೂ ಅನುದಾನ ನೀಡಿ ಗ್ರಾಮಸ್ಥರು ಸೂಚಿಸುವ ಕಡೆಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡಲಾಗುವುದು. ಮುಂದಿನ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಸರ್ಕಾರದಿಂದ ಮಂಜೂರಾದ ಯೋಜನೆಗಳ ಅನುಷ್ಠಾನದಲ್ಲಿ ಜಿದ್ದು ಮಾಡಬಾರದು. ಸರ್ಕಾರದ ಯೋಜನೆಗಳು ಒಮ್ಮೆ ಮರಳಿ ಹೋದರೆ ಮತ್ತೇ ಮಂಜೂರಾಗುವುದು ಕಷ್ಟ. ಇದನ್ನು ಅರಿತು ಜನರು ಕಾಮಗಾರಿ ನಿರ್ಮಾಣಕ್ಕೆ ಸಹರಿಕಸಬೇಕೆಂದು ವಿನಂತಿಸಿದರು.
ತಾಲೂಕಿನ ಗುರುಗುಂಟಾ ಸುಕ್ಷೇತ್ರದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 8 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವನಗೌಡ ಕಂಬಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಹೊನ್ನಪ್ಪ ಮೇಟಿ, ಬಂಜಾರ ಸಮಾಜ ಅಧ್ಯಕ್ಷ ನೀಲಪ್ಪ, ನೀಲೇಶ ಪವಾರ, ಪರಶುರಾಮ ನಗನೂರು, ಶಿವರಾಜ ರಾಠೊಡ, ತಾವರೆಪ್ಪ, ಗೋಪಿಚಂದ, ರಮೇಶ, ಕುಬೇರ, ಗುತ್ತೇದಾರ, ಯಂಕಣ್ಣ ಮೇಟಿ ಇತರರು ಇದ್ದರು.