ಲಿಂಗಸುಗೂರು: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಹಟ್ಟಿ ನಾಗರಿಕರ ಹೋರಾಟ ಸಮಿತಿ, ದಲಿತ ಮತ್ತು ಕನ್ನಡ ಪರ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಹಟ್ಟಿ ಪಟ್ಟಣ ಬಂದ್ ಯಶಸ್ವಿಯಾಗಿದೆ.
ಬಂದ್ ಹಿನ್ನಲೆಯಲ್ಲಿ ಹಟ್ಟಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು, ಹೊಟೇಲ್ಗಳನ್ನು ಮುಚ್ಚಲಾಗಿತ್ತು. ಸಾರಿಗೆ ಸಂಸ್ಥೆ ಕೂಡ ಬಸ್ ಸಂಚಾರ ಸ್ಥಗಿತಗೊಸಿ ಬಂದ್‌ಗೆ ಬೆಂಬಲ ಸೂಚಿಸಿತ್ತು. ಹಳೆ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕಾಕಾ ನಗರ, ಕೋಠಾ ಕ್ರಾಸ್ ಮುಖಾಂತರ ಅಂಬೇಡ್ಕರ್ ಸರ್ಕಲ್ಗೆ ಆಗಮಿಸಿ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಬಳಿಕ ವಾಲ್ಮೀಕಿ ಸರ್ಕಲ್ನಲ್ಲಿ ಪ್ರತಿಭಟನಾ ನಿರತರು ಬಹಿರಂಗ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಮಹ್ಮದ್ ಅಮೀರಲಿ, ಕಳೆದ ಆರು ವರ್ಷಗಳ ಹಿಂದೆ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲಗೊಂಡಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರು ಕೈಗೊಂಡ ಕಳಪೆ ಕಾಮಗಾರಿಯೇ ಕಾರಣವಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಬೇಕೆಂದು ಆಗ್ರಹಿಸಿದರು.
ತಹಶೀಲ್ದಾರ್ ಚಾಮರಾಜ ಪಾಟೀಲ ಹಾಗೂ ಜಿಪಂ ಎಇಇ ಶ್ರೀಮಂತ ಮಿಣಜಗಿ, ಸ್ಥಳಕ್ಕೆ ಭೇಟಿ ನೀಡಿ, ಪಟ್ಟಣಕ್ಕೆ ಮೂರು ದಿನಗಳ ಒಳಗೆ ನೀರು ಪೂರೈಸಲು ಕ್ರಮ ವಹಿಸಲಾಗುವುದು. ಬಲದಂಡೆ ನಾಲೆಗೆ ಮೋಟಾರ್ ಪಂಪ್ ಅಳವಡಿಸಿ ನೀರು ಪೂರೈಸಲಾಗುವುದು. ಮತ್ತು ಕೃಷ್ಣಾನದಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ದುರಸ್ತಿ ಕಾಮಗಾರಿ ತಕ್ಷಣ ಮುಗಿಸಲಾಗುವುದು. ಮತ್ತು ಕುಡಿಯುವ ನೀರು ಪೂರೈಕೆ ಯೋಜನೆ ನಿರ್ವಹಣೆಯನ್ನು ಹಟ್ಟಿ ಚಿನ್ನದ ಗಣಿಗೆ ವಹಿಸುವ ಕುರಿತು ಕಂಪನಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ. ಪಟ್ಟಣದ ಮುಖಂಡರ ನಿಯೋಗ ಕರೆದುಕೊಂಡು ಹೋಗಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಜಿಪಂ ಸದಸ್ಯೆ ಸಾಹೀರಾ ಬೇಗಂ, ಎನ್.ಸ್ವಾಮಿ, ಬಾಲಪ್ಪ ನಾಯಕ, ಕೆ.ವಿ. ಕಳ್ಳಿಮಠ, ಬಾಬು ಭೂಪುರ, ತಾಪಂ ಸದಸ್ಯ ಎಂ.ಲಿಂಗರಾಜ, ಮೌನೇಶ ಕಾಕಾನಗರ, ಮಲ್ಲಿಕಾರ್ಜುನ ಚಿತ್ರನಾಳ, ಹಿರಿಯ ಮುಖಂಡ ಗುಂಡಪ್ಪ ಗೌಡ, ಎಂ.ಸಿ ಚಂದ್ರಶೇಖರ, ಶ್ರೀನಿವಾಸ ಮಧು, ಚಿನ್ನಪ್ಪ, ನಿರ್ಮಲಾ, ಶಿವರಾಜಗೌಡ ಗುರಿಕಾರ, ಸಂಗಯ್ಯಸ್ವಾಮಿ, ಕನಕರಾಜ ಗುರಿಕಾರ, ವೀರನಗೌಡ, ಆನಂದಪ್ಪ, ರಾಜುಗೌಡ ಗುರಿಕಾರ, ವಿನೋದ ಕಮಲನ್ನಿ, ಇತರರು ಪಾಲ್ಗೊಂಡಿದ್ದರು.