ಲಿಂಗಸುಗೂರು: ಪಟ್ಟಣದ ನಿವಾಸಿ, ರೈತ ಬಸವರಾಜಗೌಡ ಗಣೇಕಲ್ ಅವರು 2019 ಡಿ.19ರಂದು ಬೇರು ಸಮೇತ ಕಿತ್ತು ಬೇರೆ ಹೊಲಕ್ಕೆ ಸ್ಥಳಾಂತರಿಸಿದ 5 ಸಾವಿರ ದಾಳಿಂಬೆ ಗಿಡಗಳಲ್ಲಿ ಈಗ ಹೊಸಚಿಗುರು ಬಂದಿದೆ. ಈ ಮೂಲಕ ರೈತನ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ.
ರೈತ ಬಸವರಾಜಗೌಡ ಅವರು ನೀರಲಕೇರಾ ಗ್ರಾಮದ ಬಳಿ 22 ಎಕರೆ ಜಮೀನಿನಲ್ಲಿ 10 ಸಾವಿರ ದಾಳಿಂಬೆ ಗಿಡ ಬೆಳೆಸಿದ್ದರು. ಕಡಿಮೆ ಅಂತರದಲ್ಲಿ ಬೆಳೆಸಿದ್ದರಿಂದ ಒಂದಕ್ಕೊಂದು ತಾಗಿ, ಬಿಸಿಲು, ಗಾಳಿ ಹತ್ತದೇ ಇಳುವರಿ ಕುಂಠಿತವಾಗಿತ್ತು. ಇದರಿಂದ ಆತಂಕಕ್ಕೊಳಗಾಗಿದ್ದ ರೈತ ಬಸವರಾಜಗೌಡ ಅವರು, 10 ಸಾವಿರ ಗಿಡಗಳಲ್ಲಿನ 5 ಸಾವಿರ ಗಿಡಗಳನ್ನು ತಾಯಿ ಬೇರು ಸಮೇತ ಕಿತ್ತು 4 ಕಿ.ಮೀ. ದೂರದ ಜಮೀನಿನಲ್ಲಿ ನೆಟ್ಟಿದ್ದರು. 2019ರ ಡಿ.19ರಂದು ಆರಂಭವಾದ ಗಿಡಗಳ ಸ್ಥಳಾಂತರಿಸುವ ಕೆಲಸ ಸುಮಾರು ಒಂದೂವರೆ ತಿಂಗಳ ಕಾಲ ನಡೆಯಿತು. ಇದಕ್ಕಾಗಿ 30 ಲಕ್ಷ ರೂ. ವೆಚ್ಚವಾಗಿತ್ತು. ರೈತನ ಈ ಹೊಸ ಪ್ರಯತ್ನದಿಂದ ಗಿಡಗಳು ಬೆಳೆಯುತ್ತವೆಯೋ ಇಲ್ಲವೋ ಎಂಬ ಕುತೂಹಲ ಮೂಡಿಸಿತ್ತು. ಆದರೀಗ ದಾಳಿಂಬೆ ಗಿಡಗಳು ಬೆಳೆಯುತ್ತಿದ್ದು, ಹೂ ಕೂಡಾ ಬಿಟ್ಟು ರೈತನ ಮೊªಲ್ಲಿ ಮಂದಹಾಸ ಮೂಡಿಸಿವೆ.
ದಾಳಿಂಬೆ ಗಿಡಗಳನ್ನು ಸ್ಥಳಾಂತರಿಸುವ ಸುದ್ದಿ ತಿಳಿದು ಮಹಾರಾಷ್ಟ್ರ ಹಾಗೂ ರಾಜ್ಯದ ಚಿತ್ರದುರ್ಗ, ಹೊಸದುರ್ಗ, ಬಾಗಲಕೋಟೆ, ಬೆಂಗಳೂರು, ಬಳ್ಳಾರಿ, ಕಲಬುರಗಿ, ತುಮಕೂರು ಸೇರಿದಂತೆ ಅನೇಕ ಕಡೆಗಳಿಂದ ರೈತರು ಹಾಗೂ ಕೃಷಿ ವಿಜ್ಞಾನಿಗಳು ರೈತ ಗಣೇಕಲ್ ಅವರ ಜಮೀನಿಗೆ ಭೇಟಿ ನೀಡಿ ದಾಳಿಂಬೆ ಗಿಡ ಬೇರು ಸಮೇತ ಕಿತ್ತು ಬೇರೆಡೆ ನೆಡುವ ಕಾರ್ಯ ವೀಕ್ಷಿಸಿದ್ದರು.
ಆಗಸ್ಟ್‌ನಿಂದ ಹಣ್ಣು: ಬೇರು ಸಮೇತ ಗಿಡಗಳನ್ನು ಕಿತ್ತು ಮತ್ತೂಂದೆಡೆ ನೆಟ್ಟಿದ್ದ ದಾಳಿಂಬೆ ಗಿಡಗಳು ಈಗಾಗಲೇ ಹೂ ಬಿಟ್ಟಿವೆ. ಬಿಟ್ಟಿರುವ ಹೂಗಳನ್ನು ಕಿತ್ತು ಆಗಸ್ಟ್ ತಿಂಗಳಿಂದ ಹಣ್ಣಿಗೆ ಬಿಡುವ ಚಿಂತನೆ ರೈತ ಗಣೇಕಲ್‌ದ್ದಾಗಿದೆ.
ಕಡಿಮೆ ಅಂತರದಲ್ಲಿ ದಾಳಿಂಬೆ ಗಿಡಗಳನ್ನು ಬೆಳೆಸಿದ್ದರಿಂದ 5 ಸಾವಿರ ದಾಳಿಂಬೆ ಗಿಡಗಳನ್ನು ತಾಯಿ ಬೇರು ಸಮೇತ ಕಿತ್ತು ಬೇರೆ ಜಮೀನಿಗೆ ಸ್ಥಳಾಂತರಿಸಿ ನೆಟ್ಟಿದ್ದೆ. ನನ್ನ ಕಠಿಣ ಪ್ರಯತ್ನಕ್ಕೆ ದೇವರು ಫಲ ನೀಡಿದ್ದಾನೆ. ಆಗಸ್ಟ್ ತಿಂಗಳಿಂದ ಹಣ್ಣಿಗೆ ಬಿಡಲಾಗುವುದು. ಮತ್ತೆ ಚಿಗುರಿದ ದಾಳಿಂಬೆ ಗಿಡಗಳಿಂದ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ.
ಬಸವರಾಜಗೌಡ ಗಣೇಕಲ್,
ಪ್ರಗತಿಪರ ರೈತ, ಲಿಂಗಸುಗೂರು.
ಶಿವರಾಜ ಕೆಂಭಾವಿ