Advertisement

ಕುಂಟುತ್ತ ಸಾಗಿವೆ ಶುದ್ಧ ನೀರು ಘಟಕ

12:19 PM Mar 06, 2020 | Naveen |

ಲಿಂಗಸುಗೂರು: ಗ್ರಾಮೀಣ ಜನರಿಗೆ ಶುದ್ಧ ಕುಡಿವ ನೀರು ಒದಗಿಸುವ ಉದ್ದೇಶದಿಂದ ಪಟ್ಟಣ ಸೇರಿ ತಾಲೂಕಿನ ಗ್ರಾಮಗಳಲ್ಲಿ ಶುದ್ಧ ನೀರು ಘಟಕ ಅಳವಡಿಸಲಾಗಿದೆ. ಆದರೆ ಅಧಿಕಾರಿಗಳು ಹಾಗೂ ನಿರ್ವಹಣೆ ಗುತ್ತಿಗೆ ಪಡೆದ ಏಜೆನ್ಸಿಗಳ ನಿರ್ಲಕ್ಷ್ಯದಿಂದ ಕುಂಟುತ್ತ ಸಾಗಿವೆ.

Advertisement

ಹಲವು ವರ್ಷಗಳಿಂದ ವಿಷಯುಕ್ತ ಕ್ಲೋರೈಡ್‌, ಫ್ಲೋರೈಡ್‌ ಅಂಶವುಳ್ಳ ನೀರನ್ನೇ ಸೇವಿಸಿ ಮೊಣಕಾಲ ನೋವು, ಕೈ-ಕಾಲುಗಳಲ್ಲಿ ಸೆಳೆತ ಸೇರಿ ಹಲವು ರೋಗ-ರುಜಿನಗಳ ನಡುವೆ ಜೀವನ ಸಾಗಿಸುತ್ತಿದ್ದ ಜನರಿಗೆ ಶುದ್ಧ ನೀರು ಒದಗಿಸಬೇಕೆಂಬ ಕಳೆದ ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿ ಮಹತ್ವದ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಗೆ ಮಂಕು ಕವಿದಿದೆ.

ತಾಲೂಕಿನಲ್ಲಿ 2014-15ನೇ ಸಾಲಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಈವರೆಗೂ ತಾಲೂಕಿಗೆ 145 ಆರ್‌ಒ ಪ್ಲಾಂಟ್‌ಗಳು ಮಂಜೂರಾಗಿವೆ. ಇದರಲ್ಲಿ 143 ಪ್ಲಾಂಟ್‌ ಗಳನ್ನು ಅಳವಡಿಸಲಾಗಿದೆ. ಈ ಪೈಕಿ 10 ಪ್ಲಾಂಟ್‌ ಗಳು ಬಂದಾಗಿದ್ದು, ದುರಸ್ತಿಗೆ ಕಾಯುತ್ತಿವೆ. 132 ಪ್ಲಾಂಟ್‌ಗಳು ಚಾಲ್ತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಆದರೆ ವಾಸ್ತವದಲ್ಲಿ ಬಹುತೇಕ ಪ್ಲಾಂಟ್‌ಗಳು ನಿರ್ವಹಣೆ ಕೊರತೆಯಿಂದ ಕೆಟ್ಟು ನಿಂತು ವರ್ಷಗಳೇ ಆಗಿದ್ದರೂ ದುರಸ್ತಿಗೆ ಮುಂದಾಗಿಲ್ಲ. ಮಷಿನ್‌ಗಳು ಎಲ್ಲ ಚೆನ್ನಾಗಿದ್ದರೂ ಅವುಗಳು ನೀರಿನ ಮೂಲಕ್ಕಾಗಿ ಪರದಾಡು ವಂತಾಗಿದೆ. ಬೆರಳೆಣಕೆಯಷ್ಟು ಪ್ಲಾಂಟ್‌ಗಳು ಮಾತ್ರ ನೀರು ಒದಗಿಸುತ್ತಿವೆ.

ಏಜೆನ್ಸಿ: ಸ್ಮಾರ್ಟ್‌ ಹೈದರಾಬಾದ್‌, ಡೋಶಿನ್‌ ವೆಲೋಲಿಯಾ ಅಹಮದಾಬಾದ್‌, ಪಿಎಸ್‌ ಎನ್‌ ಏಷಿಯಾ, ಸುಭಾಷದೇವಿ ಪುಣೆ, ರೈಟ್‌ ರಾಯಚೂರು, ಕೆಆರ್‌ಡಿಎಲ್‌, ಕೆಆರ್‌ಡಿಎಲ್‌ -ಎನ್‌ಐಟಿಐ ಹಾಗೂ ಡಬ್ಲೂಪಿಪಿ ಸಿರೀಸ್‌ಗೆ ಆರ್‌ಒ ಪ್ಲಾಂಟ್‌ಗಳ ಅಳವಡಿಕೆಗೆ ಗುತ್ತಿಗೆ ವಹಿಸಲಾಗಿದೆ.

ತುಕ್ಕು: ಕೆಲವು ಗ್ರಾಮಗಳಲ್ಲಿ ಶುದ್ಧೀಕರಣ ಮಷಿನ್‌ ಗಳನ್ನು ಅಳವಡಿಸಿ ಘಟಕಕ್ಕೆ ಬೀಗ ಜಡಿಯಲಾಗಿದೆ. ಇದುವರೆಗೂ ತೆಗೆದಿಲ್ಲ ಇದರಿಂದ ಎಷ್ಟೋ ಘಟಕಗಳು ತುಕ್ಕು ಹಿಡಿದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೇವಲ ಹೆಸರಿಗೆ ಮಾತ್ರ ಶುದ್ಧ ನೀರಿನ ಘಟಕ ಅಳವಡಿಸಲಾಗಿದೆ. ಕೆಲವೆಡೆ ಘಟಕ ಪ್ರಾರಂಭವಾದ ಕೆಲವೇ ತಿಂಗಳಲ್ಲೇ ಬಂದ್‌ ಆಗಿವೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಗುತ್ತಿಗೆ ಪಡೆದ ಏಜನ್ಸಿಗಳು ನಿರ್ವಹಣೆಗೆ ನಿಷ್ಕಾಳಜಿ ವಹಿಸಿದ್ದರಿಂದ ಗ್ರಾಮೀಣ ಭಾಗದ ಜನರು ಶುದ್ಧ ಕುಡಿವ ನೀರು ಸಿಗದೇ ವಿಷಯುಕ್ತ ನೀರನ್ನೇ ಕುಡಿಯುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ನಿಗಾ ವಹಿಸಬೇಕಾಗಿದೆ.

Advertisement

ನೀರು-ವಿದ್ಯುತ್‌ ಇಲ್ಲ
ಜಾಗೀರ ನಂದಿಹಾಳ, ಹುನಕುಂಟಿ, ಕನಸಾವಿ, ಕೆ.ಮರಿಯಮ್ಮನಹಳ್ಳಿ, ಸಾನಬಾಳ, ಶೀಲಹಳ್ಳಿ, ಗೌಡೂರು, ಮೆದಿಕಿನಾಳ, ಛತ್ತರ್‌, ಯಲಗಟ್ಟಾ, ತೀರ್ಥಭಾವಿ, ಹಲ್ಕಾವಟಗಿ, ಹಂಚಿನಾಳ, ಮಾವಿನಭಾವಿ, ಕಮಲದಿನ್ನಿ, ಮುಸಲಿ ಕಾರ‌್ಲಕುಂಟಿ, ಯಲಗಲದಿನ್ನಿ, ತೆಲೆಕಟ್ಟು, ಹಾಲಭಾವಿ, ಚಿಕ್ಕಹೆಸರೂರು, ಗುಡದನಾಳ, ಗೋನವಾಟ್ಲ ತಾಂಡಾ, ಜಾಲಿಬೆಂಚಿ, ಕನ್ನಾಪುರಹಟ್ಟಿ, ಇತರ ಕಡೆಗಳಲ್ಲಿರುವ ಶುದ್ಧ ನೀರು ಘಟಕಗಳಿಗೆ ನೀರಿನ ಮೂಲ, ವಿದ್ಯುತ್‌ ಸಮಸ್ಯೆ ಸೇರಿ ಇನ್ನಿತರ ಸಮಸ್ಯೆಗಳಿಂದಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಕೊಳವೆ ಬಾವಿಯಲ್ಲಿ ಫ್ಲೋರೈಡ್‌ ಅಂಶವಿರುವ ನೀರು ಇಲ್ಲವೇ ಕೆರೆ, ಕಾಲುವೆಗಳ ಕಲುಷಿತ ನೀರು ಸೇವಿಸುವಂತಾಗಿದೆ.

ಕೆಲ ಕಾರಣಗಳಿಂದಾಗಿ ಆರ್‌ಒ ಪ್ಲಾಂಟ್‌ಗಳು ಕೆಲಸ ಮಾಡುತ್ತಿಲ್ಲ, ಇನ್ನೂ ಕೆಲವು ಉತ್ತಮ ಕೆಲಸ ಮಾಡುತ್ತಿವೆ. 10 ಪ್ಲಾಂಟ್‌ಗಳು ಕೆಟ್ಟಿದ್ದು, ದುರಸ್ತಿ ಮಾಡಲಾಗುವುದು.
ವೆಂಕಟೇಶ,
ಕಿರಿಯ ಅಭಿಯಂತರು ಪಿಆರ್‌ಇಡಿ ಲಿಂಗಸುಗೂರು.

„ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next