Advertisement

ಸೋರುತಿದೆ ಹಸಿರು ಶಾಲೆ ಸೂರು

12:20 PM Sep 22, 2019 | Naveen |

„ಶಿವರಾಜ ಕೆಂಬಾವಿ

Advertisement

ಲಿಂಗಸುಗೂರು: ಹೊರಗೆ ಹಸಿರಿನಿಂದ ಕಂಗೊಳಿಸುವ ಸುಂದರ ಪರಿಸರ, ಒಳಗೆ ಹೋದರೆ ಕಟ್ಟಡಗಳ ಸಿಮೆಂಟ್‌ ಉದುರಿ ಕಾಣುವ ಕಬ್ಬಿಣದ ಸರಳುಗಳು, ಕಟ್ಟಡಗಳಲ್ಲಿ ಬಿರುಕು ಇದು ಹಸಿರು ಶಾಲೆ ಪ್ರಶಸ್ತಿ ಪಡೆದ ತಾಲೂಕಿನ ಬೆಂಡೋಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದ ದುಸ್ಥಿತಿ.

ಬೆಂಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಇದ್ದು 180 ವಿದ್ಯಾರ್ಥಿಗಳಿದ್ದಾರೆ. 8 ಕೊಠಡಿಗಳಿವೆ. ಇದರಲ್ಲಿ ನಾಲ್ಕು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ವಿದ್ಯೆ ಕಲಿಯುವಂತಾಗಿದೆ.

ಶಾಲೆಯ ಹಳೆ ಕಟ್ಟಡದಲ್ಲಿ 4 ತರಗತಿ ಕೋಣೆಗಳು ಸಂಪೂರ್ಣ ಶಿಥಿಲಗೊಂಡಿವೆ. ಶಾಲೆಯ ಕೋಣೆಗಳ ಮೇಲ್ಛಾವಣಿ ಸಿಮೆಂಟ್‌ ಸತ್ವ ಕಳೆದುಕೊಂಡು ಕಿತ್ತು ಬೀಳುತ್ತಿದೆ.
ಕಬ್ಬಿಣದ ಸರಳುಗಳು ಕಾಣುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ವರಾಂಡದ ಸ್ಥಿತಿಯಂತೂ ಹೇಳಲಾರದಂತಹ ದುಸ್ಥಿತಿಯಲ್ಲಿದೆ. ಯಾವುದೇ ಕ್ಷಣದಲ್ಲಿ ಮಕ್ಕಳ ಪ್ರಾಣಕ್ಕೆ ಕುತ್ತು ತರಬಹುದಾಗಿದೆ. ಇನ್ನು ಅಲ್ಪ ಮಳೆ ಬಂದರೂ ಕೊಠಡಿಗಳು ಸೋರುತ್ತವೆ. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಎಲ್ಲಿ ಕೂರಿಸುವುದು ಎಂಬುದು ಶಿಕ್ಷಕರಿಗೆ ತಲೆನೋವಾಗಿದೆ.

ಹೊರೆಗೆ ಚೆಂದ: ಶಾಲಾ ಆವರಣ ಹಾಗೂ ಶಾಲೆ ಹೊರಗಿನ ಭಾಗ ಶಿಕ್ಷಕರ ಪರಿಶ್ರಮದಿಂದ ಹಸಿರಿನಿಂದ ಕಂಗೊಳಿಸುತ್ತಿದೆ. ಪರಿಣಾಮ ಈ ಶಾಲೆಗೆ ಎರಡು ಬಾರಿ ಹಸಿರು ಶಾಲೆ ಪ್ರಶಸ್ತಿ ಸಿಕ್ಕಿದೆ. ಇನ್ನು ಶಾಲೆಯ ನಾಲ್ಕು ಕೊಠಡಿ ಶಿಥಿಲಗೊಂಡಿದ್ದು ಮಕ್ಕಳಲ್ಲಿ ಭಯ
ಕಾಡುತ್ತಿದೆ. ಇದು ಶಾಲಾ ಒಳಗಿನ ಉಳುಕಾಗಿದೆ. ಇರುವ ನಾಲ್ಕು ಕೊಠಡಿಗಳಲ್ಲಿ ಒಂದು ಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಕೊಠಡಿ ಬಳಕೆ ಮಾಡುತ್ತಿಲ್ಲ.

Advertisement

ತಾರತಮ್ಯ: ತಾಲೂಕಿನ ಕೆಲವೊಂದು ಶಾಲೆಗಳಿಗೆ ಅಗತ್ಯವಿಲ್ಲದಿದ್ದರೂ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಇಲ್ಲಿ ತರಗತಿ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಕಷ್ಟದಲ್ಲಿದ್ದರೂ ಇಲ್ಲಿ ಹೊಸ ಕೊಠಡಿ ನಿರ್ಮಾಣಕ್ಕೆ ಮುಂದಾಗದ್ದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಚ್‌ಕೆಆರ್‌ಡಿಬಿ ಈ ಭಾಗಕ್ಕೆ ವರದಾನವಾಗಿದೆ. ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪಾಠ ಕೇಳುವಂತಾಗಿದೆ. ಅವಘಡಗಳು ಸಂಭವಿಸುವುದಕ್ಕಿಂತ ಎಚ್ಚೆತ್ತುಗೊಂಡು ಹೊಸ ಕೊಠಡಿ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next