ಶಿವರಾಜ ಕೆಂಭಾವಿ
ಲಿಂಗಸುಗೂರು: ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯ ತುಂಬಿದ್ದರಿಂದ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಕೃಷ್ಣಾ ನದಿಗೆ 5 ಲಕ್ಷಕ್ಕೂ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ನೀರು ಹಾಲಿನ ನೊರೆಯಂತೆ ಜಲಾಶಯದಿಂದ ಧುಮ್ಮಿಕ್ಕುತ್ತಿದೆ. ಈ ದೃಶ್ಯ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ.
ಕಳೆದ 15 ದಿನಗಳಿಂದ ಬಸವಸಾಗರ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿದೆ. ಮೈದುಂಬಿ ಹರಿಯುತ್ತಿರುವ ಕೃಷ್ಣೆಯ ಮನಮೋಹಕ ದೃಶ್ಯವನ್ನು ನೋಡಲು ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಜಲಾಶಯ ವಿಕ್ಷೀಸಲು ಆಗಮಿಸುವ ಪ್ರವಾಸಿಗರಿಗೆ ಮೂಲ ಸೌಲಭ್ಯಗಳು ಇಲ್ಲದಾಗಿದೆ. ಕನಿಷ್ಠ ಕುಡಿಯುವ ನೀರಿನ ಸೌಕರ್ಯ ಕೂಡ ಇಲ್ಲದಿರುವುದು ವಿಪರ್ಯಾಸವಾಗಿದೆ.
ಜಲಾಶಯದ ಸುತ್ತಮುತ್ತ ಹಲವು ಪ್ರವಾಸಿ ತಾಣ, ಸುಕ್ಷೇತ್ರಗಳಿವೆ. ಛಾಯಾ ಭಗವತಿ, ನವಲಿ ಜಡೆಶಂಕರಲಿಂಗ, ಜಲದುರ್ಗ ಸೇರಿ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಿವೆ. ಇವುಗಳ ವೀಕ್ಷಣೆಗೆ ರಾಜ್ಯ, ನೆರೆ ರಾಜ್ಯಗಳ ಪ್ರವಾಸಿಗರು ಬರುತ್ತಾರೆ. ಆದರೂ ಬಸವಸಾಗರ ಜಲಾಶಯ ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಜಲಾಶಯದ ಸುತ್ತಮುತ್ತ ನೂರಾರು ಹೆಕ್ಟೇರ್ ಭೂ ಪ್ರದೇಶವಿದ್ದರೂ ಇಲ್ಲಿ ಉದ್ಯಾನವನ ಮಾಡಲು ಕೆಬಿಜೆಎನ್‌ಎಲ್ ಇಚ್ಛಾಶಕ್ತಿ ತೋರುತ್ತಿಲ್ಲ. ಹೀಗಾಗಿ ಭೂಪ್ರದೇಶ ಪಾಳು ಬಿದ್ದಿದೆ. ಆಲಮಟ್ಟಿ ಜಲಾಶಯದ ಸುತ್ತಮುತ್ತಲು ಉದ್ಯಾನವನ ಮಾಡಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ಆದರೆ ನಾರಾಯಣಪುರ ಬಸವಸಾಗರಕ್ಕೆ ಮಾತ್ರ ಕೆಬಿಜೆಎನ್‌ಎಲ್ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಜಲಾಶಯದ ಸುತ್ತಮತ್ತ ಸಾಕಸ್ಟು ವಿಶಾಲವಾದ ಸ್ಥಳವಿದ್ದರೂ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉದ್ಯಾನವನ ನಿರ್ಮಾಣ ಕಾರ್ಯ ಆಗುತ್ತಿಲ್ಲ. ಹೀಗಾಗಿ ಪ್ರವಾಸಿಗರು ಜಲಾಶಯದಿಂದ ನದಿಗೆ ನೀರು ಹರಿಯುವುದನ್ನೇ ಕಣ್ತುಂಬಿಕೊಳ್ಳುವಂತಾಗಿದೆ.
ವಾಹನ ಸವಾರರ ಪರದಾಟ: ಜಲಾಶಯದಿಂದ ಹರಿಯುವ ನೀರಿನ ವೈಭವ ನೋಡಲು ಕಳೆದ 15 ದಿನಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗಾಗಿ ಜಲಾಶಯದ ಕೆಳಭಾಗದ ಸೇತುವೆ ಮೇಲೆ ವಾಹನ ದಟ್ಟಣೆ ಹೆಚ್ಚಾಗಿದೆ.
ವ್ಯಾಪಾರ ಜೋರು: ಜಲಾಶಯ ವೀಕ್ಷಣೆಗೆ ಪ್ರವಾಸಿಗರು ಬರುತ್ತಿರುವುದರಿಂದ ಜಲಾಶಯದ ಕೆಳಭಾಗದ ಸೇತುವೆ ಅಕ್ಕಪಕ್ಕ ತಳ್ಳುವ ಗಾಡಿಗಳಲ್ಲಿ ವಿವಿಧ ತಿನಿಸುಗಳ ವ್ಯಾಪಾರ ಜೋರಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳು ಹಣ್ಣು, ಮಿರ್ಚಿ ಭಜಿ, ಕುಡಿಯುವ ನೀರು ಸೇರಿ ಇತರೆ ತಿಂಡಿ ತಿನಿಸು ಮಾರಾಟ ಮಾಡುತ್ತಿದ್ದಾರೆ. ಜಲಾಶಯದ ಸುತ್ತಮುತ್ತ ಏನೂ ಸಿಗದ ಹಿನ್ನಲೆಯಲ್ಲಿ ಇಲ್ಲಿನ ವ್ಯಾಪಾರಿಗಳೇ ಪ್ರವಾಸಿಗರಿಗೆ ಆಸರೆಯಾಗಿದ್ದಾರೆ.