Advertisement

ಲಿಂಗಸುಗೂರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ

04:52 PM Jun 17, 2020 | Naveen |

ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಎಸ್‌.ಹೂಲಗೇರಿ ಹೇಳಿದರು.

Advertisement

ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಲಿಂಗಸುಗೂರು, ಕರಡಕಲ್‌, ಕಸಬಾಲಿಂಗಸುಗೂರು ಹಾಗೂ ಹುಲಿಗುಡ್ಡ ಜನರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವೆ. ಜಾಲಿಬೆಂಚಿ ಗ್ರಾಮದ ಬಳಿ ರಾಂಪುರ ಏತ ನೀರಾವರಿ ನಾಲೆಯಿಂದ ಕೆರೆಗೆ ನೀರು ತುಂಬಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಇಲ್ಲವೇ ಟ್ಯಾಂಕರ್‌ ಮೂಲಕವಾದರೂ ಸರಿ ಗಲ್ಲಿ ಗಲ್ಲಿಗೂ ಕುಡಿಯುವ ನೀರು ಪೂರೈಸಲಾಗುವುದು. ನಳಗಳಿಗೆ ಮೋಟರ್‌ ಹಚ್ಚುವುದನ್ನು ತಡೆಗಟ್ಟಬೇಕು. ಒಂದು ವೇಳೆ ಹಚ್ಚಿದರೆ ಜಪ್ತಿ ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಕುಡಿಯುವ ನೀರಿನ ಕೆರೆಯಲ್ಲಿ ಹೂಳು ಇಲ್ಲ. ಬರೀ ಆಪು ಬೆಳೆದಿದೆ. ಅದನ್ನು ತೆಗೆಸಲಾಗುವುದು. ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸದೇ ಹಾಗೇ ಸರಬರಾಜು ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣಕ್ಕೆ ಒಳಚರಂಡಿ ಮತ್ತು 24×7 ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಬಗ್ಗೆ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ಆದರೆ ಕೋವಿಡ್‌ -19 ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ದುಡ್ಡು ಇಲ್ಲದ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next