ರಾಯಚೂರು: ಕಳೆದೊಂದು ತಿಂಗಳಿಂದ ಕೀಲುನೋವು, ಜ್ವರದಿಂದ ಬಳಲುತ್ತಿದ್ದ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮಸ್ಥರಿಗೆ ಕೊನೆಗೂ ಚಿಕಿತ್ಸೆ ಲಭಿಸಿದೆ. ಗುರುವಾರ ಗ್ರಾಮಕ್ಕೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಚಿಕಿತ್ಸಾ ಕೇಂದ್ರ ಆರಂಭಿಸಿದ್ದು, ತಪಾಸಣೆ ನಡೆಸಲಾಗುತ್ತಿದೆ.
ಗ್ರಾಮಸ್ಥರು ಎದುರಿಸುತ್ತಿದ್ದ ಆರೋಗ್ಯ ಸಮಸ್ಯೆಗಳ ಕುರಿತು ಜ.22ರಂದು ಉದಯವಾಣಿ ಪತ್ರಿಕೆಯಲ್ಲಿ “ಹಂಚಿನಾಳ ಜನರಿಗೆ ಕೀಲುನೋವು, ಜ್ವರ ಕಾಟ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಅಲ್ಲಿಗಾಗಲೇ ಆರೋಗ್ಯ ಇಲಾಖೆಗೆ ಗ್ರಾಮಸ್ಥರು ಗಮನಕ್ಕೆ ತಂದರೂ ಕಾರಣಾಂತರಗಳಿಂದ ತಪಾಸಣೆ ಮಾಡಿರಲಿಲ್ಲ. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತಕ್ಷಣಕ್ಕೆ 108 ವಾಹನ ಸಮೇತ ಆರು ಜನ ವೈದ್ಯಾಧಿ ಕಾರಿ ಸಿಬ್ಬಂದಿ ತಂಡವನ್ನು ಕಳುಹಿಸಿ ತಪಾಸಣೆ ಮಾಡಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ತಂಡ, ಜ್ವರ ಮತ್ತು ಕೀಲು ನೋವಿಗೆ ತುತ್ತಾದ ಸುಮಾರು 100ಕ್ಕೂ ಜನರ ಆರೋಗ್ಯ ತಪಾಸಣೆ ಮಾಡಿದೆ. ಕೆಲವರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆಂದು ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲದೇ, ಈ ಕಾಯಿಲೆ ಬರಲು ಕಾರಣ ಏನು ಎಂಬ ಕುರಿತು ಮಾಹಿತಿ ಸಂಗ್ರಹಿಸಿದೆ. ಗ್ರಾಮಸ್ಥರು ಈಗ ನದಿ ನೀರು ಕುಡಿಯುತ್ತಿದ್ದು, ತಾತ್ಕಾಲಿಕವಾಗಿ ಆ ನೀರು ಬಳಸದಂತೆ ಸೂಚಿಸಲಾಗಿದೆ. ಅಲ್ಲದೇ, ಕಾಯಿಸಿ ಆರಿಸಿದ ನೀರು ಸೇವಿಸುವಂತೆ ತಿಳಿಸಲಾಗಿದೆ. ಸುಮಾರು 90 ಮನೆಗಳಿಗೆ ಸೊಳ್ಳೆ ಪರದೆಗಳನ್ನು ನೀಡಲಾಗಿದೆ. ಈಗ ಏಳು ದಿನಗಳ ಕಾಲ ಗ್ರಾಮದಲ್ಲಿ ಪರೀಕ್ಷಾ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ನಾಲ್ಕು ದಿನಗಳ ಮಟ್ಟಿಗೆ ಆಂಬ್ಯುಲೆನ್ಸ್ ಗ್ರಾಮದಲ್ಲಿ ಇರಲಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಲಿಂಗಸುಗೂರು ತಾಲೂಕು ಆರೋಗ್ಯಾಧಿಕಾರಿ ಡಾ| ರುದ್ರಗೌಡ ಪಾಟೀಲ ನೇತೃತ್ವದಲ್ಲಿ ಡಾ| ಜಿ.ಪಿ.ಹಿರೇಮಠ, ಪ್ರಾಣೇಶ, ಆರೋಗ್ಯ ಸಹಾಯಕರಾದ ಶಿವಕುಮಾರ, ಸಿದ್ದು, ಗಿರಿಜಾ ಸೇರಿದಂತೆ ಇತರರು ತಪಾಸಣೆ ನಡೆಸಿದರು.
ಹಂಚಿನಾಳ ಗ್ರಾಮಸ್ಥರು ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಒಂದೇ ದಿನದಲ್ಲಿ ಸಾಕಷ್ಟು ಜನರ ಆರೋಗ್ಯ ನಿಯಂತ್ರಣಕ್ಕೆ ಬಂದಿದೆ. 7ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆಂದು ಕಳುಹಿಸಿದ್ದು, ಒಂದೆರಡು ದಿನಗಳಲ್ಲಿ ವರದಿ ಬರಲಿದೆ. ಮೇಲ್ನೋಟಕ್ಕೆ ಚಿಕೂನ್ ಗುನ್ಯಾ ಬಂದಿರುವ ಶಂಕೆ ಇದೆ. ಕುಡಿಯಲು ನದಿ ನೀರು ಬಳಸುತ್ತಿದ್ದು, ಅದರಲ್ಲಿ ಸೊಳ್ಳೆ ಉತ್ಪತ್ತಿ ಅಂಶಗಳು ಕಂಡು ಬಂದಿದೆ. ಹೀಗಾಗಿ ತಾತ್ಕಾಲಿಕವಾಗಿ ನೀರು ಬಳಸದಂತೆ ತಿಳಿಸಲಾಗಿದೆ.
ಡಾ| ರುದ್ರಗೌಡ ಪಾಟೀಲ,
ತಾಲೂಕು ಆರೋಗ್ಯಾಧಿಕಾರಿ