ಲಿಂಗಸುಗೂರು: ಗುರುಗುಂಟಾ ಹಾಗೂ ಗುಂತಗೋಳ ಗ್ರಾಮ ಪಂಚಾಯಿತಿಯಲ್ಲಿ ಎಸ್‌ಸಿ, ಎಸ್‌ಟಿ ಜನಾಂಗ ಸೇರಿ ಇತರೆ ಬಡ ಜನರು ಹೆಚ್ಚಾಗಿ ಇರುವುದರಿಂದ ಈ ಎರಡು ಗ್ರಾಮ ಪಂಚಾಯಿತಿಗಳನ್ನು ಕೇಂದ್ರ ಸರ್ಕಾರದ ರುಬ್ಯಾನ್ ಯೋಜನೆಯಡಿ ಆಯ್ಕೆಗೊಳಿಸಲಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಶನಿವಾರ ಅಟಲ್ ಜ್ಯೋತಿ ಎರಡನೇ ಹಂತದ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು. ರುಬ್ಯಾನ್ ಯೋಜನೆಯಡಿ ಆಯ್ಕೆಯಾದದ ಗುರುಗುಂಟಾ ಹಾಗೂ ಗುಂತಗೋಳ ಗ್ರಾಮ ಪಂಚಾಯಿತಿಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ತಾಲೂಕಿನ ದೇವರಭೂಪುರ ಗ್ರಾಮ ಪಂಚಾಯಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದೇನೆ. ಸಂಸದರ ಆದರ್ಶ ಗ್ರಾಮದ ಯೋಜನೆಗೆ ವಿಶೇಷ ಅನುದಾನ ಇರುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿ ಪಡಿಸಬೇಕಾಗಿದೆ. ಇದಕ್ಕೆ ಸ್ಥಳೀಯ ಶಾಸಕರು, ಜಿಪಂ, ತಾಪಂ, ಗ್ರಾಪಂ ಚನಾಯಿತ ಪ್ರತಿನಿಧಿ ಗಳು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಜಲ ಜೀವನ ಯೋಜನೆ ಮುಖಾಂತರ ಪ್ರತಿ ಮನೆಗೆ ನೀರು ಪೂರೈಸಲಾಗುವುದು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಸತಿ ರಹಿತರ ಸರ್ವೇ ಮಾಡಿಸಿ ಅವರಿಗೂ ವಸತಿ ಸೌಲಭ್ಯ ಒದಗಿಸಲಾಗುವುದು ಎಂದರು. 900 ಕೋಟಿ ರೂ.ವೆಚ್ಚದಲ್ಲಿ ನಾರಾಯಣಪುರ ಬಲದಂಡೆ ಮುಖ್ಯಕಾಲುವೆ ಅಧುನೀಕರಣ ಕಾಮಗಾರಿ ಪ್ರಾರಂಭವಾಗಿದೆ. ಕಾಲುವೆ ಆಧುನೀಕರಣ ಕಾಮಗಾರಿ ಪದೇ ಪದೇ ಆಗುವುದಿಲ್ಲ. ಹೀಗಾಗಿ ರೈತರು ಹಾಗೂ ಗ್ರಾಮಸ್ಥರು ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಜಿಲ್ಲೆಯ ಎಲ್ಲ ಶಾಲೆಗಳಿಗೆ ನರೇಗಾದಡಿ ಕಾಂಪೌಂಡ್ ನಿರ್ಮಿಸಲಾಗುವುದು. ಸ್ವತ್ಛ ಭಾರತ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದರು.
ತಾಲೂಕಿನಲ್ಲಿ 13 ಕಡೆ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಡಲೆ ಖರೀದಿ ಕೇಂದ್ರ ಸ್ಥಾಪನೆಗೆ ಬೇಡಿಕೆಯಿದೆ. ತೊಗರಿ ಜತೆ ಕಡಲೆ ಖರೀದಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಹತ್ತಿ ಖರೀದಿಗೆ 200 ರೂ.ಹೆಚ್ಚುವರಿ ಬೆಲೆ ಹೆಚ್ಚಿಸಲಾಗಿದೆ ಎಂದರು.
ಅಭಿನವ ಗಜದಂಡ ಶಿವಾಚಾರ್ಯರು, ಶಾಸಕ ಡಿ.ಎಸ್. ಹೂಲಗೇರಿ, ದೇವರಭೂಪುರ ಗ್ರಾಪಂ ಅಧ್ಯಕ್ಷೆ ಸಗರಮ್ಮ, ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ, ಮುಖಂಡರಾದ ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಗುಂಡಪ್ಪ ನಾಯಕ, ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ, ವೆಂಕಟೇಶ ಗುತ್ತೇದಾರ, ಗಜೇಂದ್ರ ನಾಯಕ, ಚೆನ್ನವೀರಪ್ಪ ಪಾಗಾದ, ತಾಪಂ ಇಒ ಪಂಪಾಪತಿ, ಪಿಡಬ್ಲೂಡಿ ಎಇಇ ಜಗದೇವ ಮೋತಿ, ಕಂಠೆಪ್ಪಗೌಡ, ಮಹ್ಮದ್ ರಫೀ , ಅಟಲ್ ಯೋಜನೆ ಎಂಡಿ ಅಕ್ಷೀತ್ ಜೈನ, ಯೋಜನಾ ನಿರ್ದೇಶಕ ಬೀಜ ಕಿಶೋರ ಇತರರು ಇದ್ದರು.